More

    ಆಧುನಿಕ, ವೈವಿಧ್ಯಮಯ ಕೃಷಿಲೋಕ ಅನಾವರಣ; ವಿಜಯವಾಣಿ, ದಿಗ್ವಿಜಯ ಕೃಷಿ ಮೇಳ ಇಂದು ಸಮಾರೋಪ

    ಮೈಸೂರು: ಒಂದೂವರೆ ವರ್ಷದಲ್ಲಿ ಫಲ ನೀಡುವ ಹಲಸು, ಪೌಷ್ಟಿಕತೆಯ ಪಾಠ ಹೇಳುವ ಸಿರಿಧಾನ್ಯಗಳು, ಮಣ್ಣುರಹಿತ ಹಸಿರುಮನೆಯಲ್ಲಿ ಬೆಳೆದ ಜಲಸಸ್ಯ, ಹಲವು ಕಬ್ಬಿನ ತಳಿಗಳು, ತರಹೇವಾರಿ ಯಂತ್ರೋಪಕರಣಗಳು, ಅರಣ್ಯತ್ಯಾಜ್ಯ ಲಂಟಾನದಿಂದ ಸಿದ್ಧವಾದ ಮನೆಬಳಕೆ ಸಾಮಗ್ರಿಗಳು….. ಹೀಗೆ ಆಧುನಿಕ, ವೈವಿಧ್ಯಮಯ ಕೃಷಿಲೋಕವೇ ಅಲ್ಲಿ ಅನಾವರಣಗೊಂಡಿದೆ. ಕೃಷಿ ಮೇಳ ಮೈಸೂರಿನ ಜನರಿಗೆ ವಾರಾಂತ್ಯದ ಔಟಿಂಗ್ ಆದರೆ, ಇನ್ನು ಕೆಲವರಿಗೆ ಕೃಷಿ ಪರಿಕರ, ಸಂಶೋಧನೆ-ಆವಿಷ್ಕಾರಗಳನ್ನು ತಿಳಿದುಕೊಳ್ಳುವ ತಾಣವಾಗಿತ್ತು.

    ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಮಂಡ್ಯ ಕಬ್ಬು ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ ಚೌರಡ್ಡಿ ಅವರು ರೈತರಿಗೆ ಕಬ್ಬಿನ ತಳಿಗಳು, ಕಾಲಾವಧಿ, ಸಕ್ಕರೆ ಪ್ರಮಾಣ, ಅಂಗಾಂಶ ಕೃಷಿ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ಕಬ್ಬು ಕಟಾವು ಯಾವಾಗ ಮಾಡಿದರೆ ಒಳ್ಳೆಯ ಸಕ್ಕರೆ ಇಳುವರಿ ಪಡೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.

    ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸಾರಥ್ಯದಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಕರ್ನಾಟಕ ಸರ್ಕಾರ ಮತ್ತು ಮೈಸೂರು ವಿವಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಮಟ್ಟದ ಕೃಷಿ ಮೇಳದ ಎರಡನೇ ದಿನವಾದ ಶನಿವಾರ ಹಲವು ವಿಶೇಷತೆಗಳ ಸಂಗಮವಾಗಿತ್ತು. ಇದನ್ನು ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು.

    ಮೈಮುಲ್​ನ ಏಕದಳ, ದ್ವಿದಳ, ಜಲಸಸ್ಯ ಮೇವು, ರಸಮೇವು, ಮೇವು ಕಟಾವು ಯಂತ್ರ, ಕೃಷಿ ಇಲಾಖೆಯ ಸಿರಿಧಾನ್ಯಗಳು, ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಭೌಗೋಳಿಕ ಸೂಚ್ಯಂಕಕ್ಕೆ ಸೇರಿದ ಕೃಷಿ ಉತ್ಪನ್ನಗಳು, ಕರಕುಶಲ, ಆಹಾರ ಪದಾರ್ಥಗಳ ಪ್ರದರ್ಶನ ಫಲಕಗಳು, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಜಾಕ್​ಅನಿಲ್ ಎಂದು ಹೆಸರುವಾಸಿಯಾದ ನಿನ್ನಿಕಲ್ಲು ನರ್ಸರಿ ಕೇಂದ್ರದ ಅಲ್ಪಾವಧಿಯಲ್ಲಿ ಫಲ ನೀಡುವ ಹಲಸು ಸಸಿಗಳು, ಸ್ವಯಂಚಾಲಿತ ಹನಿ ನೀರಾವರಿ ಯಂತ್ರಗಳು, ನೈಸರ್ಗಿಕ ಕೃಷಿಯಿಂದ ಬೆಳೆದ ಆಹಾರಧಾನ್ಯಗಳಲ್ಲಿ ತಯಾರಿಸಿದ ತಿಂಡಿ-ತಿನಿಸುಗಳು, ಸುಗಂಧ ದ್ರವ್ಯಗಳ ಮುಗಿಬಿದ್ದ ಆಸಕ್ತರು ತಿಳಿವಳಿಕೆ ಹಸಿವು ನೀಗಿಸಿಕೊಂಡರು.

    ಮೊದಲ ಬಾರಿ ಪ್ರದರ್ಶನ: ಚಾಮರಾಜನಗರ ಜಿಲ್ಲೆಯ ಗಿರಿಧಾಮ ವನ್​ಧನ್ ವಿಕಾಸ ಕೇಂದ್ರ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಲಂಟಾನದಿಂದ ಸಿದ್ಧಪಡಿಸಿದ ಟೇಬಲ್, ಸ್ಟ್ಯಾಂಡ್, ಸ್ಟೂಲ್ ಇನ್ನಿತರ ಗೃಹೋಪಯೋಗಿ ವಸ್ತುಗಳು ನೋಡುಗರ ಗಮನಸೆಳೆದವು. ಜನರ ಹೇಗೆ ಸ್ಪಂದಿಸುತ್ತಾರೆ ಎಂದು ತಿಳಿಯಲು ಇದೇ ಮೊದಲ ಬಾರಿಗೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಂಸ್ಥೆಯ ಮುಖ್ಯ ಪುಸ್ತಕ ಬರಹಗಾರರಾದ ಪಾರ್ವತಿ ಹೇಳಿದ್ದಾರೆ. ಅರಣ್ಯ ಇಲಾಖೆ ಉಚಿತವಾಗಿ ಪೂರೈಸುವ ಲಂಟಾನ ಉಪಯೋಗಿಸಿ ಬುಡಕಟ್ಟು ಹಾಡಿಗಳ ಮಹಿಳೆಯರು ತರಬೇತಿ ಪಡೆದು ಸಿದ್ಧಪಡಿಸಿದ ಸಾಮಗ್ರಿಗಳಿವು. ಬಹಳಷ್ಟು ರೆಸಾರ್ಟ್, ದೊಡ್ಡ ಹೋಟೆಲ್​ಗಳಿಂದ ಬೇಡಿಕೆ ಬರುತ್ತವೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್​ನಡಿ 35 ಮಹಿಳಾ ಸ್ವಸಹಾಯ ಸಂಘಗಳು ಈ ಲಾಭ ಪಡೆದುಕೊಂಡಿವೆ. ಬಂಡಿಪುರ ಸಫಾರಿ ಕೇಂದ್ರದಲ್ಲಿ ಮಾರಾಟ ಮಳಿಗೆಯನ್ನು ಸರ್ಕಾರ ಕೊಡಮಾಡಿದ್ದು, ಇಷ್ಟರಲ್ಲೇ ಕಾರ್ಯಾರಂಭವಾಗಲಿದೆ ಎಂಬ ಮಾತು ಸೇರಿಸಿದರು.

    ಗ್ರಾಮೀಣ-ನಗರ ಜನಜೀವನದ ಮಧ್ಯೆ ಬೆಸುಗೆ ಗಟ್ಟಿಗೊಳಿಸುವ, ಕೃಷಿ ಪ್ರಾಧಾನ್ಯ ರಾಷ್ಟ್ರವೆಂದು ಸಾರುವ ವಿಜಯವಾಣಿ, ದಿಗ್ವಿಜಯ ನ್ಯೂಸ್ ಪ್ರಯತ್ನ ಶ್ಲಾಘನೀಯ. ಸಮಾಜಮುಖಿ ಕೆಲಸಕ್ಕೆ ಮೇಲ್ಪಂಕ್ತಿಯಾಗಿದ್ದು, ವಿಆರ್​ಎಲ್ ಸಮೂಹ ಸಂಸ್ಥೆಯ ತುಡಿತ, ತಂಡಸ್ಪೂರ್ತಿ ಅನುಕರಣೀಯ.

    | ಡಾ.ಸಿ.ಎನ್.ಅಶ್ವತ್ಥನಾರಾಯಣ ಸಚಿವ

    ಇಂದು ರೈತ ಸಾಧಕರಿಗೆ ಸನ್ಮಾನ: ಭಾರೀ ಸಂಖ್ಯೆಯಲ್ಲಿ ಆಸಕ್ತರು ಹಾಗೂ ರೈತ ಸಮುದಾಯವನ್ನು ಆಕರ್ಷಿಸುತ್ತಿರುವ ಕೃಷಿ ಮೇಳ ಭಾನುವಾರ ಸಮಾರೋಪಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಮತ್ತು ರೈತ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಸಚಿವರಾದ ಪ್ರಭು ಚವ್ಹಾಣ್, ಡಾ.ಕೆ. ಸುಧಾಕರ್, ಶಂಕರ್ ಪಾಟೀಲ್ ಮುನೇಕೊಪ್ಪ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಡೊಳ್ಳು ಕುಣಿತ, ಕೊಡವ ಸಾಂಸ್ಕೃತಿಕ ವೈಭವ, ಜಾನಪದ ಗೀತೆಗಳ ಗಾಯನ ಮೊದಲಾದ ಸಾಂಸ್ಕೃತಿಕ ಗರಿಮೆಯೊಂದಿಗೆ ಮೇಳಕ್ಕೆ ತೆರೆಬೀಳಲಿದೆ.

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಹದಿಹರೆಯದ ವಿದ್ಯಾರ್ಥಿನಿ!

    ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts