More

    ಕೊಟ್ಟಿಗೆಹಾರ ವರ್ತಕರಿಗೆ ವರ್ಷಕ್ಕೊಂದು ಸಂಕಷ್ಟ

    ಬಣಕಲ್: ಪ್ರವಾಸಿಗರು, ಅನ್ಯ ಜಿಲ್ಲೆಗಳಿಗೆ ಸಂಚರಿಸುವ ಪ್ರಯಾಣಿಕರನ್ನೇ ನಂಬಿಕೊಂಡಿರುವ ಕೊಟ್ಟಿಗೆಹಾರದ ವರ್ತಕರಿಗೆ ವರ್ಷಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ ಪ್ರವಾಹದಿಂದ ಹೆದ್ದಾರಿ ಸಂಚಾರ ಬಂದ್ ಆಗಿ ವ್ಯಾಪಾರ ಇಲ್ಲದಂತಾಗಿತ್ತು. ಈ ಬಾರಿ ಲಾಕ್​ಡೌನ್​ನಿಂದ ಅಂಗಡಿ ಬಂದ್ ಆಗಿ ನಷ್ಟ ಅನುಭವಿಸುತ್ತಿದ್ದಾರೆ.

    ಕಳೆದ ವರ್ಷ ಪ್ರವಾಹದಿಂದ ಚಾರ್ವಡಿ ಘಾಟ್ ರಸ್ತೆ ಕುಸಿದು ತಿಂಗಳುಗಟ್ಟಲೇ ವಾಹನ ಸಂಚಾರ ಸ್ಥಗಿತವಾಗಿತ್ತು. ನಂತರದಲ್ಲಿ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ವ್ಯಾಪಾರ ಕುಸಿದಿತ್ತು. ನೆರೆಯಿಂದ ಚೇತರಿಸಿಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಕರೊನಾ ಲಾಕ್​ಡೌನ್ ಪ್ರಾರಂಭವಾಗಿದ್ದು ವರ್ತಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಲಾಕ್​ಡೌನ್ ಸಡಿಲಗೊಳಿಸಿದರೂ ವರ್ತಕರ ಬದುಕು ಮಾತ್ರ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳಿಲ್ಲ. ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ, ಶೃಂಗೇರಿ ಮುಂತಾದ ಯಾತ್ರಾ ಸ್ಥಳಗಳಿಗೆ ಪ್ರವಾಸಿಗರು ಕೊಟ್ಟಿಗೆಹಾರ ಮೂಲಕ ಹೋಗುತ್ತಾರೆ. ಇವರನ್ನೇ ನೆಚ್ಚಿಕೊಂಡು ಕೊಟ್ಟಿಗೆಹಾರದ ವರ್ತಕರು ವ್ಯಾಪಾರ ನಡೆಸುತ್ತಿದ್ದರು. ಕರೊನಾ ಕಾರಣಕ್ಕೆ ಯಾತ್ರಾ ಸ್ಥಳಗಳಿಗೆ ಹೋಗದಂತೆ ಪ್ರವಾಸಿಗರಿಗೆ ನಿಷೇಧ ಹೇರಿರುವುದರಿಂದ ಮತ್ತು ಗಡಿ ಜಿಲ್ಲೆಗಳಿಂದ ವಾಹನ ಸಂಚಾರ ನಿಷೇಧ ಇರುವುದರಿಂದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಇಲ್ಲದಾಗಿದೆ.

    2 ತಿಂಗಳಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಮಳಿಗೆಗಳ ಕೆಲ ಮಾಲೀಕರು ಬಾಡಿಗೆ ಹಣ ಪಡೆದಿಲ್ಲ. ಈಗ ಅಂಗಡಿ ತೆರೆದರೂ ವ್ಯಾಪಾರ ಆಗುವುದಿಲ್ಲ. ಆದರೂ ಬಾಡಿಗೆ ಕಟ್ಟಲೇಬೇಕಾದ ಅನಿವಾರ್ಯತೆಯಲ್ಲಿ ಇಲ್ಲಿನ ವರ್ತಕರಿದ್ದಾರೆ. ಜೂನ್​ನಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ವರ್ತಕರು ನಷ್ಟದಿಂದ ಸುಧಾರಿಸಿಕೊಳ್ಳುವುದು ಕಷ್ಟಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts