ಬೆಳಗಾವಿ: ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿ ಮಾಡಿ ಅವರಿಗೆ ಸ್ವಯಂ ಸೇವಾ ಸಂಘ-ಸಂಸ್ಥೆಗಳ ನೆರವಿನಿಂದ ಊಟ ಹಾಗೂ ವಸತಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕರೊನಾ ವೈರಸ್ ನಿಯಂತ್ರಣ ಸಭೆಯಲ್ಲಿ ಮಾತನಾಡಿ, ಹೋಟಲ್‌ಗಳ ಮೂಲಕ ಪಾರ್ಸ್‌ಲ್ ಊಟ ವಿತರಿಸುವ ವ್ಯವಸ್ಥೆ ಮಾಡಬೇಕು. ಸರಕು ಸಾಗಣೆಗೆ ಸಂಬಂಧಿಸಿದಂತೆ ಲಾರಿ ಅಸೋಸಿಯೇಷನ್ ಸಭೆ ಕರೆದು, ಸರ್ಕಾರ ಸರಕು ಸಾಗಣೆಗೆ ಮುಕ್ತ ಅವಕಾಶ ನೀಡಿರುವ ಬಗ್ಗೆ ಮನವರಿಕೆ ಮಾಡಬೇಕು ಎಂದರು.
ಕೊರತೆಯಾಗದಂತೆ ಕ್ರಮ ವಹಿಸಿ: ತುರ್ತು ಅಗತ್ಯ ವೈದ್ಯಕೀಯ ಸಲಕರಣೆ, ಸಾಮಗ್ರಿಗಳ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೆಳಗ್ಗೆ, ಸಂಜೆ ಒಂದೆರಡು ಗಂಟೆ ಖಾಸಗಿ ಕ್ಲಿನಿಕ್ ಆರಂಭಿಸಲು ಕ್ರಮ ವಹಿಸಬೇಕು. ಸ್ಯಾನಿಟೈಸರ್, ಮಾಸ್ಕ್, ಕೈಗವಸುಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ವಲಸೆ ಕಾರ್ಮಿಕರ ಸಂಚಾರ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಾಮಗ್ರಿಗಳ ಸಾಗಣೆಗೆ ತೊಂದರೆಯಿಲ್ಲ. ಸವಿತಾ ಸಮಾಜದ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.
ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಮಾತನಾಡಿ, ಪೌರ ಕಾರ್ಮಿಕರಿಗೆ ಮಾಸ್ಕ್, ಸೋಪ್ ವಿತರಿಸಲಾಗಿದೆ. ಇಂದಿನಿಂದ ಉಪಾಹಾರ ಕೂಡ ಪೂರೈಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮಾತನಾಡಿ, 383 ಜನರ ಮೇಲೆ ನಿಗಾ ವಹಿಸಲಾಗಿದೆ. 217 ಜನರು 14 ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದು, 8 ಜನರಿಗೆ ಬಿಮ್ಸ್‌ನ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ಒಟ್ಟಾರೆ 32 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 318 ಜನರಿಗೆ ಸ್ಟ್ಯಾಂಪಿಂಗ್ ಮಾಡಲಾಗಿದೆ. ಜಿಲ್ಲೆಯಿಂದ ಒಟ್ಟು 21 ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದರಲ್ಲಿ 18 ಜನರ ವರದಿ ನೆಗೆಟಿವ್ ಬಂದಿದೆ ಎಂದರು.
ಬಿಮ್ಸ್ ನಿರ್ದೇಶಕ ಡಾ.ದಾಸ್ತಿಕೊಪ್ಪ ಮಾತನಾಡಿ, ಬಿಮ್ಸ್ ಅನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಬಿಮ್ಸ್ ಹಾಗೂ ಮಿಲಿಟರಿ ಆಸ್ಪತ್ರೆಯನ್ನು ಕೂಡ ಕೋವಿಡ್ ಆಸ್ಪತ್ರೆ ಎಂದು ಪರಿವರ್ತಿಸಬಹುದಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದರು.
ಬೆಂಗಳೂರು ಹಾಗೂ ರಾಜಸ್ತಾನ, ಮಧ್ಯಪ್ರದೇಶದಿಂದ ಸುಮಾರು ಒಂದು ಸಾವಿರ ಕಾರ್ಮಿಕರು ಆಗಮಿಸಿದ್ದು, ಆರೋಗ್ಯ ತಪಾಸಣೆ ನಡೆಸಿ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ. ಬೈಲಹೊಂಗಲ, ಹುಕ್ಕೇರಿ ಮತ್ತು ಕಿತ್ತೂರು ತಾಲೂಕುಗಳಲ್ಲಿ ಸಾಮೂಹಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋವಾಕ್ಕೆ ಹೋಗುವ ಹಾಲು, ತರಕಾರಿ ಮತ್ತಿತರ ಸಾಮಗ್ರಿಗಳ ಸಾಗಣೆ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಗೋವಾ ಸಿಎಂಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ನೆರೆ ರಾಜ್ಯಗಳ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಗಡಿಯಲ್ಲಿ ನಿಗಾ ವಹಿಸಲಾಗಿದೆ ಎಂದರು.
ಶಾಸಕ ಅನಿಲ ಬೆನಕೆ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವಿ. ಇತರರು ಇದ್ದರು.