More

    ಜಿಲ್ಲೆಯ ಜನರಲ್ಲಿದೆ ಸಂಸ್ಕೃತಿ, ಸಂಸ್ಕಾರ

    ಬೆಳಗಾವಿ: ಸೇವಾ ನಿವೃತ್ತಿ ಹೊಂದಿದ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಹಾಗೂ ವರ್ಗಾವಣೆಗೊಂಡ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ ಅವರನ್ನು ನಗರದಲ್ಲಿ ಬೆಳಗಾವಿ ಪತ್ರಕರ್ತರ ಸಂಘದಿಂದ ಬುಧವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

    ಡಾ. ಬೊಮ್ಮನಹಳ್ಳಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಹಲವು ಭಾಷಿಕರು, ಸಂಸ್ಕೃತಿಯ, ಧರ್ಮ, ಜಾತಿಯ ಜನರಿದ್ದಾರೆ. ಆದರೆ, ಎಲ್ಲರಲ್ಲೂ ಉತ್ತಮ ಸಂಸ್ಕೃತಿ ಇರುವುದರಿಂದ ಅಧಿಕಾರಿಗಳನ್ನು ಅತ್ಯಂತ ಗೌರವದಿಂದ ಕಾಣುವ ಸಂಸ್ಕಾರ ಇಲ್ಲಿನ ಜನರಲ್ಲಿದೆ ಎಂದರು. ಜಿಲ್ಲೆಯ ಜನರ, ಅಧಿಕಾರಿಗಳ, ಮಾಧ್ಯಮದವರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಸಾಧ್ಯವಾಗಿದೆ. ಜಿಲ್ಲೆಯ ಜನರು ಬರ ಮತ್ತು ನೆರೆಯಿಂದ ತತ್ತರಿಸಿದ್ದರು. ಜತಗೆ ಇದೀಗ ಮಹಾಮಾರಿ ಕರೊನಾ ವೈರಸ್ ಬಂದಿರುವುದು ಸ್ವಲ್ಪ ಸಮಸ್ಯೆಯಾಗಿದೆ ಎಂದು ಡಾ. ಬೊಮ್ಮನಹಳ್ಳಿ ಹೇಳಿದರು.

    ನಿಕಟಪೂರ್ವ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಹಲವು ಭಾಷಿಕರಿದ್ದರೂ ಸಹೋದರರಂತೆ ಬದುಕು ಸಾಗಿಸುತ್ತಿರುವುದು ಅತ್ಯಂತ ಖುಷಿ ಕೊಟ್ಟಿದೆ. ಯಾವುದೇ ಸಮುದಾಯದವರ ಹಬ್ಬ ಹರಿದಿನಗಳಲ್ಲಿ ಪೊಲೀಸರು ಹಾಗೂ ಜಿಲ್ಲಾಡಳಿತ ಸೂಚಿಸುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಾರೆ. ಆ ಮೂಲಕ ವಿವಾದಕ್ಕೆ ಅವಕಾಶ ಮಾಡಿಕೊಡದ ಜನತೆಯ ಉದಾರತೆಯ ಮಧ್ಯೆ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಪದಾಧಿಕಾರಿಗಳಾದ ರಾಯಣ್ಣ ಆರ್.ಸಿ., ಕುಂತಿನಾಥ ಕಲ್ಮನಿ, ಮಂಜುನಾಥ ಕೋಳಿಗುಡ್ಡ, ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಅಶೋಕ ಮುದ್ದಣ್ಣವರ, ಸುರೇಶ ನೇರ್ಲಿ, ಹಿರಾಮಣಿ ಕಂಗ್ರಾಳಕರ, ಲಗಮಣ್ಣ ಸಣ್ಣಲಚ್ಚಪ್ಪಗೊಳ, ರಾಜಶೇಖರಯ್ಯ ಹಿರೇಮಠ, ರವಿ ಗೋಸಾವಿ, ಅರುಣ ಯಳ್ಳೂರಕರ, ವಿಶ್ವನಾಥ ದೇಸಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts