More

    ಅವಿಶ್ವಾಸದ ನೆರಳಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

    ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ಹಾಗೂ ಉಪಾಧ್ಯಕ್ಷೆ ಶಾರದಾ ವಿರುದ್ಧ ಮುನಿಸಿಕೊಂಡಿರುವ 39 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಸಹಿಹಾಕಿ ಇಟ್ಟುಕೊಂಡಿರುವ ಪತ್ರಕ್ಕೆ ಶಕ್ತಿ ನೀಡಲು ಒಂದು ಬಣ ನಿರಂತರ ಯತ್ನದಲ್ಲಿದೆ. ಆದರೆ ಫೆ.18ರಂದು ಲತಾ ಸರ್ವಸದಸ್ಯರ ಸಾಮಾನ್ಯ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

    ಬಿಜೆಪಿ ಜತೆಗಿನ ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಡಬೇಕಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ನೀಡಲು ಸ್ವತಃ ಬಿಜೆಪಿ ಮುಖಂಡರೇ ಸಿದ್ಧರಾಗಲಿಲ್ಲ, ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೇ ಒಂದು ಬಣ ಮೈತ್ರಿ ಮುರಿಯಲು ಶಪಥ ಮಾಡಿದೆ.

    ಒಂದು ವೇಳೆ ಮೈತ್ರಿ ಮುರಿದುಕೊಂಡರೆ ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾಗಿರುವ ಜೆಡಿಎಸ್ ನಡೆ ಬಿಜೆಪಿ ಮುಖಂಡರನ್ನು ಮೌನವಾಗಿಸಿದೆ, ಈಗಿರುವ ಉಪಾಧ್ಯಕ್ಷ ಸ್ಥಾನವೂ ಕೈತಪ್ಪಲಿದೆ ಎಂಬ ಆತಂಕದಲ್ಲಿ ಒಂದು ವರ್ಷ ಪೂರ್ಣಗೊಳಿಸೋಣ ಎಂಬ ವಾದಕ್ಕಿಳಿಸಿದ್ದಾರೆ.

    39 ಸದಸ್ಯರ ಸಹಿ, ಮತ ಹಾಕೋದು ಡೌಟ್!: ಅಧ್ಯಕ್ಷೆ ಲತಾ ಹಾಗೂ ಉಪಾಧ್ಯಕ್ಷೆ ಶಾರದ ವಿರುದ್ಧ ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ನಿರ್ಣಯ ಗೆಲುವಿಗೆ ಅಗತ್ಯವಿರುವ 39 ಸದಸ್ಯರು ಸಹಿ ಹಾಕಿದ್ದಾರೆ. ಆದರೆ, ಮತಕ್ಕೆ ಹಾಕಿದ ದಿನ ಮೂರ‌್ನಾಲ್ಕು ಸದಸ್ಯರು ಹಿಂದೇಟು ಹಾಕುವ ಮುನ್ಸೂಚನೆ ಅರಿತ ಬಣದ ಸದಸ್ಯರು ನಿರ್ಣಯ ಮಂಡನೆಗೆ ಹಿಂದು-ಮುಂದು ನೋಡುತ್ತಿದ್ದಾರೆ.

    ಅನುಮೋದನೆಗಾಗಿ ವಿಶೇಷ ಸಭೆ!: ರಾಜಕೀಯ ಸಂಕಷ್ಟದ ಪರಿಸ್ಥಿತಿಯಲ್ಲಿ ಅಧ್ಯಕ್ಷೆ ಲತಾ ಸಾಮಾನ್ಯ ಸಭೆ ಕರೆದಿರುವುದು ಅಚ್ಚರಿ ಮೂಡಿಸಿದೆ. ಆದರೆ, ಜಿಪಂನಲ್ಲಿ ಕೆಲವು ಕಾಮಗಾರಿಗೆ ಅನುಮೋದನೆ ಪಡೆದಿಲ್ಲವಾದ್ದರಿಂದ ಸಾಮಾನ್ಯಸಭೆ ನಡೆಸುವುದು ಅಗತ್ಯವಾಗಿದೆ. ರಾಜಕೀಯ ಕಾರಣಗಳನ್ನು ಬದಿಗಿಟ್ಟು ಸಿಇಒ ಶುಭಾಕಲ್ಯಾಣ್ ಮನವಿ ಮೇರೆಗೆ ಅಧ್ಯಕ್ಷೆ ಸಭೆ ಕರೆದಿದ್ದು ಅತೃಪ್ತ ಸದಸ್ಯರು ಹಾಜರಾಗುತ್ತಾರೆಯೇ ಎಂಬ ಬಗ್ಗೆ ಕುತೂಹಲವಿದೆ.

    ಕೆಎನ್‌ಆರ್ ಒಪ್ಪಿದರೆ ಬದಲಾವಣೆ!: ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಒಪ್ಪಿದರೆ ಅವರ ಬೆಂಬಲಿಗ 4 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ಆದರೆ, ರಾಜಣ್ಣ ಮಾತ್ರ ಬದಲಾವಣೆಯ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರದಿರುವುದು ಲತಾ, ಶಾರದಾಗೆ ವರದಾನವಾಗಿದೆ.

    ಫೆ.18ರಂದು ಸರ್ವಸದಸ್ಯರ ವಿಶೇಷ ಸಭೆ ನಡೆಯಲಿದ್ದು ವಿವಿಧ ಸ್ಥಾಯಿ ಸಮಿತಿಗಳ ನಡಾವಳಿ ಅನುಮೋದನೆ, ಕೃಷಿ-ಬಿತ್ತನೆ ಬೀಜ ಸರಬರಾಜು ಮಾಡಿರುವುದಕ್ಕೆ ಅನುದಾನ ಬಿಡುಗಡೆ, ಪಶುಪಾಲನಾ ಇಲಾಖೆ ಔಷಧ ಖರೀದಿ ಸೇರಿ ಮತ್ತಿತರರ ವಿಷಯಗಳು ಚರ್ಚೆ ನಡೆಯಲಿದೆ.
    ಶುಭಾ ಕಲ್ಯಾಣ್ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts