More

    ಭಾರತೀಯರನ್ನು ಒಗ್ಗೂಡಿಸಿದ ಸಂವಿಧಾನ

    ವಾಡಿ: ಭಾರತ ದೇಶ ಯಾವುದೇ ಧರ್ಮ ಗ್ರಂಥಗಳಡಿ ಸಾಗುತ್ತಿಲ್ಲ, ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನ ಗ್ರಂಥದ ತಳಹದಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಎಸಿಸಿ ಕಂಪನಿ ಗೇಟ್ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಗ್ಯಾರಂಟಿ ಯೋಜನೆಗಳ ಸಮಾವೇಶ ಮತ್ತು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿದ ಅವರು, ದೇಶದಲ್ಲಿ ೨೫ ಸಾವಿರ ಜಾತಿ-ಉಪ ಜಾತಿಗಳಿವೆ. ಪ್ರತಿ ಪ್ರಾಂತ್ಯದಲ್ಲಿ ರೀತಿ-ನೀತಿ, ಉಡುಗೆ-ತೊಡುಗೆ, ಧರ್ಮ ವಿಭಿನ್ನವಾಗಿದೆ. ಇದೆಲ್ಲದರ ಹೊರತಾಗಿ ನಾವೆಲ್ಲರೂ ಭಾರತೀಯರು ಎಂದು ಒಗ್ಗೂಡಿಸಿರುವುದು ಸಂವಿಧಾನ ಎಂದರು.

    ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿದೆ. ಸರ್ವರಿಗೆ ಸಮಬಾಳು ಸಮಪಾಲು ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಂಖ್ಯೆ ೪.೬೦ ಕೋಟಿಗೂ ಹೆಚ್ಚಿದೆ. ಜಿಲ್ಲೆಯಲ್ಲಿ ೫.೨೫ ಲಕ್ಷ ಜನ ಗೃಹಲಕ್ಷ್ಮಿ, ೫.೫೦ ಲಕ್ಷ ಕುಟುಂಬ ಗೃಹಜ್ಯೋತಿ, ೧೮ ಲಕ್ಷ ಜನ ಅನ್ನಭಾಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ನಿತ್ಯ ೬೫ ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ವಿವರಿಸಿದರು.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ರಾಜ್ಯದ ಸಂಸದರೊಬ್ಬರು ಶ್ರೇಷ್ಠ ಗ್ರಂಥ ಸಂವಿಧಾನವನ್ನು ತಿದ್ದುಪಡಿ ಮಾಡುವುದಾಗಿ ಘಂಟಾಘೋಷವಾಗಿ ಹೇಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಹಿಂದಿನಕ್ಕಿAತ ಇಂದು ನಾವೆಲ್ಲರೂ ಸಂವಿಧಾನ ರಕ್ಷಣೆಗಾಗಿ ಮುಂದಾಗಬೇಕಿದೆ ಎಂದರು.

    ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು.

    ಕರ್ನಾಟಕ ರೇಷ್ಮೆ ಉದ್ಯಮಗಳ ಮಂಡಳಿ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕ ಎಂ.ವೈ. ಪಾಟೀಲ್, ಕಾಡಾ ಅಧ್ಯಕ್ಷ ಡಾ.ಎಂ.ಎ. ರಶೀದ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಡಿಸಿ ಬಿ.ಫೌಜಿಯಾ ತರನ್ನುಮ್, ಎಸ್‌ಪಿ ಅಕ್ಷಯ್ ಹಾಕೆ, ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಕೆಕೆಆರ್‌ಟಿಸಿ ಎಂಡಿ ಎಂ.ರಾಚಪ್ಪ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನನ ಬಾಳೆ, ತಹಸೀಲ್ದಾರರಾದ ಶೇಖ್ ಷಾಷಾವಲಿ (ಚಿತ್ತಾಪುರ), ಮಲ್ಲಶೆಟ್ಟಿ ಎಸ್.ಚಿದ್ರೆ (ಶಹಾಬಾದ್), ಘಮಾವತಿ ರಾಠೋಡ್ (ಕಾಳಗಿ), ತಾಪಂ ಇಒ ನೀಲಗಂಗಾ ಬಬಲಾದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಪ್ರಮುಖರಾದ ಡಿ.ಜಿ. ಸಾಗರ, ಟೋಪಣ್ಣ ಕೋಮಟೆ, ಜಗದೇವ ಗುತ್ತೇದಾರ್, ಸುಭಾಷ ರಾಠೋಡ್, ಮಾಪಣ್ಣ ಗಂಜಿಗೇರಿ ಇತರರಿದ್ದರು.

    ಮನ್ವಿತಾ ಮತ್ತು ಕೃಷಿಕಾ ಅವರು ಸಂವಿಧಾನ ಪ್ರಸ್ತಾವನೆ ಓದಿದರು. ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಪ್ರಾಸ್ತಾವಿಕ ಮಾತನಾಡಿದರು.

    ೪೧೫.೨೮ ಕೋಟಿ ವೆಚ್ಚದ ೧೨೦ ಅಭಿವೃದ್ಧಿ ಕಾಮಗಾರಿಗಳಿಗೆ ಡಿಜಿಟಲ್ ಮೋಡ್‌ನಲ್ಲಿ ಚಾಲನೆ ನೀಡಲಾಯಿತು. ೧೦೫ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರೆ, ೧೫ ಲೋಕಾರ್ಪಣೆಯಾದವು. ವಿವಿಧ ವಚನಕಾರರ ಆಯ್ದ ವಚನಗಳ ಹೊತ್ತಿಗೆ `ವಚನ ವಿವೇಕ’ ಕಿರುಹೊತ್ತಗೆ ಬಿಡುಗಡೆ ಮಾಡಲಾಯಿತು. ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನ ಭಾಗ್ಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಸಾರ್ವಜನಿಕರಿಗೆ ಸಾಮೂಹಿಕವಾಗಿ ಪ್ರಸ್ತಾವನೆ ಬೋಧಿಸಲಾಯಿತು. ಸಿದ್ಧಾರ್ಥ ಚಿಮ್ಮಾಇದ್ಲಾಯಿ ತಂಡ ಅಂಬೇಡ್ಕರ್ ಕುರಿತು ಹಾಡುಗಳನ್ನು ಹಾಡಿತು.

    ವಾಪಸ್ ಪಡೆದಿದ್ದ ಅನುದಾನ ಬಡ್ಡಿಯೊಂದಿಗೆ ಬಂತು
    ಚಿತ್ತಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ನನ್ನನ್ನು ಸೋಲಿಸಲು ಅನ್ಯ ಪಕ್ಷಗಳು ಸಾಕಷ್ಟು ಪಿತೂರಿ ನಡೆಸಿದ್ದವು. ಆದರೂ ಕ್ಷೇತ್ರದ ಜನರು ಅಭೂತಪೂರ್ವ ಗೆಲುವು ನೀಡಿದ್ದಾರೆ. ನಿಮ್ಮ ಪ್ರೀತಿ- ವಿಶ್ವಾಸವನ್ನು ಎಂದಿಗೂ ಮರೆಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ್ದ ೩೦೦ ಕೋಟಿ ಅನುದಾನ ವಾಪಸ್ ಪಡೆಯಲಾಗಿತ್ತು. ಇದೀಗ ನಮ್ಮ ಸರ್ಕಾರದ ಅವಧಿಯಲ್ಲಿ ೪೧೫ ಕೋಟಿ ರೂ. ಬಿಡುಗಡೆ ಮೂಲಕ ಬಡ್ಡಿಸಹಿತ ವಸೂಲಿ ಮಾಡಲಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ತರುವುದಾಗಿ ಖರ್ಗೆ ಹೇಳಿದರು.

    ಅದ್ದೂರಿ ಮೆರವಣಿಗೆ: ಸಂವಿಧಾನ ಜಾಗೃತಿ ಜಾಥಾ ಸಮಾರೋಪ ನಿಮಿತ್ತ ಸೋಮವಾರ ಬೆಳಗ್ಗೆ ಅದ್ದೂರಿ ಮೆರವಣಿಗೆ ನಡೆಯಿತು. ಬಲರಾಮ ಚೌಕ್ ಬಳಿ ಡೊಳ್ಳು ಬಾರಿಸುವ ಮೂಲಕ ಡಿಸಿ ಫೌಜಿಯಾ ತರನ್ನುಮ್ ಮೆರವಣಿಗೆಗೆ ಚಾಲನೆ ನೀಡಿದರು. ಸಂವಿಧಾನದ ಬೃಹತ್ ಸ್ತಬ್ಧಚಿತ್ರ, ವಿವಿಧ ಕಲಾ ತಂಡಗಳು ಗಮನಸೆಳೆದವು. ಬಂಜಾರ ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದರು. ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಗೊಂಬೆಗಳ ಕುಣಿತ ಸೇರಿ ಹಲವು ತಂಡಗಳ ಪ್ರದರ್ಶನ ಮೆರುಗು ನೀಡಿತು. ಬಳಿಕ ಸಚಿವ-ಶಾಸಕರು ಬಸವಣ್ಣ ಮತ್ತು ಡಾ.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts