ಕೊಪ್ಪಳ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಮುಷ್ಕರ ಮುಂದುವರೆದಿದ್ದು, ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದ ನಮ್ಮನ್ನು ದುಡಿಸಿಕೊಂಡಿದ್ದಾರೆ. ಆದರೆ, ಸರಿಯಾದ ಸೌಲಭ್ಯ ಕಲ್ಪಿಸಿಲ್ಲ. ಇಲಾಖೆ ರೂಪಿಸಿದ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಇದೆಲ್ಲದರ ಹಿಂದೆ ನಮ್ಮ ಶ್ರಮವಿದೆ. ಆದರೆ, ಕೇಂದ್ರ ಸರ್ಕಾರ ನಮಗೆ ನೀಡಬೇಕಾದ ಸೌಲಭ್ಯ ನೀಡುತ್ತಿಲ್ಲ.
ದೇಶದಲ್ಲಿ 3.6 ಲಕ್ಷ, ರಾಜ್ಯದಲ್ಲಿ 10,500 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 310 ಗ್ರಾಮೀಣ ಅಂಚೆ ನೌಕರರಿದ್ದೇವೆ. ನಮ್ಮನ್ನು ದಿನಗೂಲಿ ಆಧಾರದಲ್ಲಿ ದುಡಿಸಿಕೊಳ್ಳುತ್ತಿದ್ದು, ಪಿಎ್, ವೈದ್ಯಕಿಯ ಸೌಲಭ್ಯ, ಭತ್ಯೆ, ವೇತನ ಹೆಚ್ಚಳ ಹಾಗೂ ಇತರ ಸೌಲಭ್ಯ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಪ್ರಧಾನ ಅಂಚೆ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿಸಲ್ಲಿಸಿದರು. ಕಮಲೇಶಚಂದ್ರ ಆಯೋಗ ವರದಿ ಶಿಾರಸ್ಸುಗಳನ್ನು ಜಾರಿ ಮಾಡುವವರೆಗೆ ಧರಣಿ ಕೈ ಬಿಡುವುದಿಲ್ಲವೆಂದು ತಿಳಿಸಿದರು.
ಗ್ರಾಮೀಣ ಅಂಚೆ ನೌಕರರ ರಾಜ್ಯ ವಲಯ ಕಾರ್ಯದರ್ಶಿ ಅಶೋಕ ಮನಗೊಳಿ, ಪದಾಧಿಕಾರಿಗಳಾದ ಬಸವರಾಜ ಗುರಿಕಾರ, ಬಸವರಾಜ ಸಾಲಿಮಠ, ಮಲ್ಲಪ್ಪ ಪಾಟೀಲ, ಅಶೋಕ ಮಲ್ಲನವರ, ಮುದ್ದೇಗೌಡ ಪಾಟೀಲ, ದಸ್ತಗಿರಿಸಾಬ, ನೀಲಕಂಠಯ್ಯ, ರಾಮಣ್ಣ, ಪೂರ್ಣಿಮಾ, ಮೇಘನಾ, ಸಂಗೀತ, ಪೀರಮ್ಮ, ರಮಾದೇವಿ ಇತರರಿದ್ದರು.