More

    ತ್ರಿಭಾಷಾ ಸೂತ್ರ ಕನ್ನಡಕ್ಕೆ ಕಂಟಕ ; ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಒತ್ತಾಯ

    ಕೋಲಾರ : ಕನ್ನಡ ಬೆಳವಣಿಗೆಗೆ ಕಂಟಕವಾಗಿರುವ ತ್ರಿಭಾಷಾ ಸೂತ್ರ ರದ್ದುಪಡಿಸಿ ಕನ್ನಡ, ಇಂಗ್ಲಿಷ್ ಮಾತ್ರ ಇರುವ ದ್ವಿಭಾಷಾ ಸೂತ್ರ ಜಾರಿಗೊಳಿಸುವ ಧೈರ್ಯ ತೋರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

    ಕೋಲಾರ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿ, ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ. ಅಂತಹ ಪಟ್ಟವನ್ನು ಅದಕ್ಕೆ ಸಂವಿಧಾನ ಕಟ್ಟಿಲ್ಲ. ಹಿಂದಿ ರಾಷ್ಟ್ರಭಾಷೆ ಎಂದರೆ ಡಾ.ಬಿ.ಆರ್. ಅಂಬೇಡ್ಕರ್‌ಗೆ ಮಾಡುವ ಅಪಮಾನ. ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿಯಾದ 22 ಭಾಷೆಗಳೂ ಈ ದೇಶದ ಭಾಷೆಗಳೇ. ಹಿಂದಿ ಕೇಂದ್ರದ ಆಡಳಿತ ಭಾಷೆ. ಕನ್ನಡ ಕರ್ನಾಟಕದ ಆಡಳಿತ ಭಾಷೆ. ಸಂವಿಧಾನದ 343ರಿಂದ 351ನೇ ಅನುಚ್ಛೇದದವರೆಗೆ ತಿದ್ದುಪಡಿ ಮಾಡಿ ಹಿಂದಿ ಪಾರಮ್ಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

    ಉತ್ತರದ ರಾಜ್ಯಗಳಿಂದ ಉದ್ಯೋಗ ಅರಸಿ ರಾಜ್ಯಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಉತ್ತರಕ್ಕೆ ತ್ರಿಭಾಷಾ ಸೂತ್ರ, ದಕ್ಷಿಣಕ್ಕೆ ದ್ವಿಭಾಷಾ ಸೂತ್ರ ಜಾರಿಯಾಗಲಿ. ನಮಗೆ ಹಿಂದಿ ಕಲಿಯುವ ಅಗತ್ಯವಿಲ್ಲ. ಸಾಮ್ರಾಜ್ಯಶಾಹಿ ಭಾಷೆಯಾದ ಹಿಂದಿ ಕನ್ನಡಕ್ಕೆ ಕಂಠಕಪ್ರಾಯ ಎಂದರು. ಆಯಾ ರಾಜ್ಯದ ಭಾಷೆಯನ್ನು ಪ್ರೌಢಶಾಲಾ ಹಂತದವರೆಗೆ ಶಿಕ್ಷಣ ಮಾಧ್ಯಮವಾಗಿಸದಿದ್ದರೆ ಗಂಡಾಂತರ ತಪ್ಪಿದ್ದಲ್ಲ. ಹೊಸ ಶಿಕ್ಷಣ ನೀತಿ 2020 ಸಹ ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಮಾಡುವ ಬಗೆಗೆ ಜಾಣ ಮರೆವು ಪ್ರದರ್ಶಿಸಿದೆ ಎಂದರು.

    ತನ್ನೊಡಲಲ್ಲಿ ಕಾಗೆ ಬಂಗಾರದಿಂದ ಹಿಡಿದು ಬಂಗಾರದವರೆಗೆ ಹೊಂದಿರುವ ಸಮೃದ್ಧ ನಾಡು ನಮ್ಮದು. ಹಾಗಾಗಿ ಪರಿಸರ ಮತ್ತು ಪರಿಸರದ ಭಾಷೆಯಾದ ಕನ್ನಡವನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕು ಎಂದರು.  ಉಪ ವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ತೆಲುಗು, ತಮಿಳು ಭಾಷಿಗರು ಇದ್ದರೂ ಎಂದೂ ಭಾಷಾ ಸಂಘರ್ಷಕ್ಕೆ ಒಳಗಾಗಿಲ್ಲ. ಅಂತರಾಳದಲ್ಲಿ ಮಾತೃಭಾಷೆಯಾಗಿ ಕನ್ನಡ ಹೃದಯದಲ್ಲಿದೆ ಎಂದರು.

    ಆಶಯ ನುಡಿಗಳನ್ನಾಡಿದ ಚಿಂತಕ ಗಂಗಾರಾಂ ಚಂಡಾಳ, ಕನ್ನಡ ನಾಡು, ನುಡಿ ಸಾಧನೆ ಮಾಡಿರುವವರನ್ನು ಸಮಾಜ ಗುರುತಿಸದೆ ಇರುವುದು ವಿಷಾದಕರ ಸಂಗತಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಬೇರೆ ಬೇರೆ ಮಾರ್ಗಗಳಲ್ಲಿ ಸನ್ಮಾನ ಪಡೆಯುತ್ತಾರೆ. ಭಾಷೆಗಾಗಿ ದುಡಿದವರನ್ನು ಗುರುತಿಸುವ ಕೆಲಸ ಹೆಚ್ಚಾಗಿ ಆಗಬೇಕು ಎಂದರು.

    ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಡಾ.ವಿ.ಮುನಿವೆಂಕಟಪ್ಪ, ಪತ್ರಕರ್ತ ಕೆ.ಎಸ್. ಗಣೇಶ್, ಮುಖಂಡ ಟಿ. ವಿಜಯಕುಮಾರ್, ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಎಸ್.ನಂದೀಶ್ ಕುಮಾರ್, ಪೋಸ್ಟ್ ನಾರಾಯಣಸ್ವಾಮಿ, ಆ.ಕೃ.ಸೋಮಶೇಖರ್, ಹೂಹಳ್ಳಿ ನಾಗರಾಜ್, ಅಶೋಕ್ ಬಾಬು, ಜಯರಾಮರೆಡ್ಡಿ, ಜ.ಮು ಚಂದ್ರ , ಕಸಾಪ ಪದಾಧಿಕಾರಿಗಳಾದ ಆರ್.ಎಂ. ವೆಂಕಟಸ್ವಾಮಿ, ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.  ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಮೇಘನಾ, ಅನುಷಾ ಹಾಗೂ ಭಾವನಾ ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು. ಸಮಾಜ ಸೇವಕ ಸಿಎಂಆರ್. ಶ್ರೀನಾಥ್ ತಲಾ 5000 ರೂ. ನೀಡಿ ಪುರಸ್ಕರಿಸಿದರು.

    ಕವನ ವಾಚನ: ಇದು ನಿಚ್ಚಂ ಪೊಸತು ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ಕವನ ವಾಚಿಸಿದರು. ಜೀವನ ಶೈಲಿಗೆ ಕಾವ್ಯ ಸಂಜೀವಿನಿ ವಿಷಯದಲ್ಲಿ ಆಹಾರ ತಜ್ಞ ಆರ್. ರಾಜಶೇಖರ್ ವಿಶೇಷ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

    ಸಮ್ಮೇಳನದ ನಿರ್ಣಯಗಳು: ಕನ್ನಡ ಶಾಸೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು, ಬಡವರ ಭೂಮಿಯನ್ನು ಆಂದೋಲನ ಮಾದರಿಯಲ್ಲಿ ಪೋಡಿ ಮಾಡುವುದು, ಕನ್ನಡ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts