More

    ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ

    ಅಫಜಲಪುರ: ಈಗಾಗಲೇ ಭೀಕರ ಬರ ಆವರಿಸಿದ್ದು, ಮುಂದೆ ರಣ ಬೇಸಿಗೆ ಶುರುವಾಗಲಿದೆ. ಹೀಗಾಗಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.

    ಸೊನ್ನ ಬಳಿಯ ಭೀಮಾ ಬ್ಯಾರೇಜ್‌ಗೆ ಬುಧವಾರ ಭೇಟಿ ನೀಡಿ ನೀರಿನ ಸಂಗ್ರಹ ಕುರಿತು ಮಾಹಿತಿ ಪಡೆದ ಅವರು, ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಮ್ಮಿ ಇದೆ. ನದಿ ಅಕ್ಕ-ಪಕ್ಕದಲ್ಲಿರುವ ರೈತರು ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಬೇಸಿಗೆ ಎದುರಿಸಲು ನಮ್ಮ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅಗತ್ಯಬಿದ್ದರೆ ಹಳ್ಳಿಗಳಲ್ಲಿ ರೈತರಿಂದ ನೀರು ಖರೀದಿಸಿ ಟ್ಯಾಂಕರ್ ಮೂಲಕ ಪೂರೈಸಲಾಗುವುದು. ವಿವಿಧ ಯೋಜನೆಗಳಲ್ಲಿ ಕೊಳವೆಬಾವಿ ಕೊರೆಯಲಾಗುವುದು ಎಂದು ತಿಳಿಸಿದರು.

    ಭೀಮಾ ಏತ ನೀರಾವರಿ ನಿಗಮದ ಎಇ ಸಂತೋಷಕುಮಾರ ಸಜ್ಜನ್ ಮಾಹಿತಿ ನೀಡಿ, ಸೊನ್ನ ಬ್ಯಾರೇಜ್‌ನಲ್ಲಿ ೦.೭೧೮ ಟಿಎಂಸಿ ನೀರು ಸಂಗ್ರಹವಿದೆ. ಅಫಜಲಪುರಕ್ಕೆ ಕುಡಿಯುವ ನೀರಿನ ಸಲುವಾಗಿ ಪ್ರತಿ ತಿಂಗಳು ೦.೦೧೫ ಟಿಎಂಸಿ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ೨.೨೫ ಟಿಎಂಸಿ ನೀರು ಸಂಗ್ರಹವಿತ್ತು. ಇದೀಗ ನೀರಿನ ಪ್ರಮಾಣ ಸಾಕಷ್ಟು ಕಮ್ಮಿಯಾಗಿದೆ, ಎರಡು ತಿಂಗಳವರೆಗೆ ಮಾತ್ರ ನೀರು ಪೂರೈಸಬಹುದು ಎಂದು ಹೇಳಿದರು.
    ನನೆಗುದಿಗೆ ಬಿದ್ದಿರುವ ರಸ್ತೆ ಅಗಲೀಕರಣ ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಸಬೇಕು. ಕುಂಟು ನೆಪ ಹೇಳಬೇಡಿ, ಗುಣಮಟ್ಟದೊಂದಿಗೆ ಶೀಘ್ರ ಕೆಲಸ ಮುಗಿಸಿದರೆ ಜನತೆಗೆ ಅನುಕೂಲವಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

    ಐಎಎಸ್ ಅಧಿಕಾರಿ ಗಜಾನನ ಬಾಳೆ, ತಹಸೀಲ್ದಾರ್ ಸಂಜೀವಕುಮಾರ ದಾಸರ್, ಪ್ರಮುಖರಾದ ಬಾಬುರಾವ ಜ್ಯೋತಿ, ವಿಜಯ ಮಹಾಂತೇಶ ಹೂಗಾರ, ಮಹೆಬೂಬ್ ಅಲಿ, ರಮೇಶ ಪಾಟೀಲ್ ಇತರರಿದ್ದರು.

    ಓದುಗರಿಗೆ ಸಮಸ್ಯೆ ಆಗದಿರಲಿ: ಅಫಜಲಪುರ ತಾಲೂಕಿನ ಬಂಕಲಗಾ, ಉಡಚಾಣ, ಕರಜಗಿ, ಮಾಶಾಳದಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಇವುಗಳಿಗೆ ಸೂಕ್ತ ಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಫೌಜಿಯಾ ತರನ್ನುಮ್ ತಾಕೀತು ಮಾಡಿದರು. ಡಿಜಿಟಲ್ ಗ್ರಂಥಾಲಯಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಹೆಚ್ಚಿನ ಪುಸ್ತಕ, ದಿನಪತ್ರಿಕೆಗಳನ್ನು ಲೈಬ್ರರಿಯಲ್ಲಿ ಇರಲಿ. ಓದುಗರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ತಾಪಂ ಪ್ರಭಾರಿ ಇಒ ಗಜಾನನ ಬಾಳೆ ಅವರ ನನ್ನ ಜನ ನನ್ನ ಋಣ ಯೋಜನೆ ಜಿಲ್ಲೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts