More

    ಲ್ಯಾಬ್ ವರದಿ ವಿಳಂಬಕ್ಕೆ ಅಸಮಾಧಾನ

    ಹಾವೇರಿ: ಜಿಲ್ಲೆಯಲ್ಲಿ ನಿಗದಿತ ಗುರಿಯಂತೆ ಆರ್​ಟಿಪಿಸಿಆರ್ ಪರೀಕ್ಷೆ ನಡೆಸದಿರುವುದಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತ ವಿರುದ್ಧ ಹರಿಹಾಯ್ದರು. ನಿಗದಿತ ಗುರಿ ಸಾಧಿಸದ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

    ಸೋಮವಾರ ಸಂಜೆ ಜಿಲ್ಲಾಡಳಿತದೊಂದಿಗೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯ ತಾಲೂಕುವಾರು ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

    ಮರಣ ಪ್ರಮಾಣ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಪ್ರತಿದಿನ ಕನಿಷ್ಠ ಎರಡು ಸಾವಿರ ಸ್ವ್ಯಾಬ್ ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿತ್ತು. ಆದರೆ, ಯಾರೂ ಈ ಸೂಚನೆ ಪಾಲಿಸುತ್ತಿಲ್ಲ. ನಿಗದಿತ ಗುರಿಯಂತೆ ಟೆಸ್ಟ್​ಗಳು ಆಗುತ್ತಿಲ್ಲ. ಇದರಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಕೊನೆಯವರೆಗೂ ಮನೆಯಲ್ಲಿ ಉಳಿದು ರೋಗ ಉಲ್ಬಣಗೊಂಡ ಮೇಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದಾಗಿ ಚಿಕಿತ್ಸೆಗೆ ಸ್ಪಂದಿಸದೇ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಸಾವಿನ ಪ್ರಮಾಣ ಇಳಿಸಲು ಸಾಧ್ಯವಾಗಿಲ್ಲ. ನಿಮಗೆ ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ದಾರಿ ಇಲ್ಲ. ಸೂಕ್ಷ್ಮತೆಯೂ ಅರ್ಥವಾಗುತ್ತಿಲ್ಲ. ಸೂಚನೆ ನೀಡಿದರೂ ಪಾಲಿಸುತ್ತಿಲ್ಲ. ನಿಮ್ಮ ಕಾರ್ಯವೈಖರಿ ಬೇಸರ ತಂದಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೆಲಸ ನಿರ್ವಹಿಸದ ಯಾವುದೇ ಅಧಿಕಾರಿಗಳು ಯಾವುದೇ ಹುದ್ದೆಯಲ್ಲಿದ್ದರೂ ನಿರ್ಧಾಕ್ಷಿಣ್ಯ ಕ್ರಮವಹಿಸಬೇಕು. ಪಾಸಿಟಿವ್ ಪ್ರಕರಣ ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರನ್ನು ತಕ್ಷಣವೇ ಪರೀಕ್ಷೆಗೆ ಒಳಪಡಿಸಬೇಕು. ಒಬ್ಬ ಪಾಸಿಟಿವ್ ವ್ಯಕ್ತಿಯ ಸಂರ್ಪತರ ಕನಿಷ್ಠ 10 ಜನರ ಸ್ವ್ಯಾಬ್ ಸಂಗ್ರಹಿಸಿದ ಗರಿಷ್ಟ 36 ತಾಸಿನಗೊಳಗಾಗಿ ಲ್ಯಾಬ್ ವರದಿ ಬರಬೇಕು. ತಾಲೂಕಾವಾರು ಆರ್​ಟಿಪಿಸಿಆರ್ ಟೆಸ್ಟ್​ಗೆ ಗುರಿ ನಿಗದಿಪಡಿಸಿ. ನಿಗದಿಪಡಿಸಿದ ಗುರಿಯಂತೆ ಟೆಸ್ಟ್​ಗಳು ಆಗಲೇಬೇಕು. ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು ಈ ಕುರಿತು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

    ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರು ಗುಣವಾದ ಮೇಲೆ ಹೆಚ್ಚು ದಿನ ಆಸ್ಪತ್ರೆಯಲ್ಲಿ ಅನಗತ್ಯವಾಗಿ ಮುಂದುವರಿಸದೇ ಬಿಡುಗಡೆಗೊಳಿಸಬೇಕು. ಅವರ ದೇಹದ ಸ್ಥಿತಿಗತಿಗೆ ಅನುಸಾರ ವೈದ್ಯಕೀಯ ಮಾನದಂಡ ಅನುಸರಿಸಿ ಉಸಿರಾಟದ ಸ್ಥಿರತೆ ಕಂಡುಬಂದಲ್ಲಿ ಆಸ್ಪತ್ರೆಯಿಂದ ಕೋವಿಡ್ ಕೇರ್ ಸೆಂಟರ್​ಗೆ ಶಿಫಾರಸು ಮಾಡಬೇಕು ಎಂದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಕೋವಿಡ್ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದರು. ಆಯಾ ತಾಲೂಕು ಕಚೇರಿಗಳಿಂದ ವಿಡಿಯೋ ಸಂವಾದದಲ್ಲಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಮಾಹಿತಿ ನೀಡಿದರು.

    ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ವಿಜಯಕುಮಾರ ಸಂತೋಷ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಡಾ. ನಿಲೇಶ, ಡಾ. ಎಂ. ಜಯಾನಂದ, ಡಾ. ಪ್ರಭಾಕರ ಕುಂದೂರ, ತಹಸೀಲ್ದಾರ್ ಗಿರೀಶ ಸ್ವಾದಿ, ವಿವಿಧ ತಾಲೂಕು ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

    ವೆಂಟಿಲೇಟರ್ ಅಳವಡಿಸಿ

    ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಕೆ ವಿಳಂಬಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ನಿಮಗೆ ಸಮಯ ಪ್ರಜ್ಞೆ ಇದೆಯಾ. ಜನ ಸಾಯುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿಯಿರಿ. ಯಾವುದೇ ನೆಪಹೇಳದೆ ಮುಂದಿನ 3 ದಿನಗಳೊಳಗೆ 8 ವೆಂಟಿಲೇಟರ್ ಅಳವಡಿಸಿ ಸಾರ್ವಜನಿಕರ ಸೇವೆಗೆ ಲಭ್ಯವಿರುವಂತೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು. ವೆಂಟಿಲೇಟರ್​ಗೆ ಅಗತ್ಯವಾದ ಮಾನಿಟರ್ ಖರೀದಿಗೆ ತುರ್ತು ಕ್ರಮವಹಿಸಬೇಕು. ಸರ್ಕಾರಿ ವೈದ್ಯರ ಕೊರತೆಯಿದ್ದರೆ ಖಾಸಗಿ ಅನಸ್ತೇಶಿಯಾ ವೈದ್ಯರ ಸೇವೆ ಪಡೆಯಬೇಕು. ಈಗಾಗಲೇ ನಿಯೋಜನೆಗೊಳಿಸಲಾದ ಸರ್ಕಾರಿ ಅನಸ್ತೇಶಿಯಾ ವೈದ್ಯರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಾರಣ ಕೇಳಿ ನೋಟೀಸ್ ನೀಡಿ ಶಿಸ್ತುಕ್ರ ಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts