More

    ರೋಗ ನಿಯಂತ್ರಣಕ್ಕೆ ಹರಸಾಹಸ

    ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

    ಗೋವಿನ ಜೋಳ, ಹತ್ತಿ ಹಾಗೂ ಶೇಂಗಾ ಬೆಳೆಗಳಲ್ಲಿ ವಿವಿಧ ರೋಗಗಳು ಕಾಣಿಸಿಕೊಂಡಿದ್ದು, ರೋಗ ನಿಯಂತ್ರಿಸಲು ರೈತರು ಹರಸಾಹಸಪಡುವಂತಾಗಿದೆ.

    ತಾಲೂಕಿನಾದ್ಯಂತ ಪ್ರಸಕ್ತ ಸಾಲಿನಲ್ಲಿ ಶೇ. 98ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ತಾಲೂಕಿನ 32,155 ಹೆಕ್ಟೇರ್ ಕೃಷಿ ಪ್ರದೇಶದ ಪೈಕಿ 31,850 ಹೆಕ್ಟೇರ್ ಬಿತ್ತನೆಯಾಗಿದೆ. 21,750 ಹೆಕ್ಟೇರ್ ಗೋವಿನ ಜೋಳ, 7915 ಹೆಕ್ಟೇರ್ ಹತ್ತಿ, 165 ಹೆಕ್ಟೇರ್ ಶೇಂಗಾ, 385 ಹೆಕ್ಟೇರ್ ಭತ್ತ ಬಿತ್ತನೆಯಾಗಿದೆ. ಬೆಳೆಗಳು 40 ದಿನದ ಅವಧಿ ಪೂರೈಸಿವೆ. ಶೇ. 20ರಷ್ಟು ಗೋವಿನ ಜೋಳ ಹಾಗೂ ಶೇ. 15ರಷ್ಟು ಹತ್ತಿ ಬೆಳೆಗೆ ರೋಗ ಬಾಧೆ ಕಾಣಿಸಿಕೊಂಡಿದೆ.

    ಲದ್ದಿ ಹುಳು: ತಾಲೂಕಿನ ಕಾಗಿನೆಲೆ ಹೋಬಳಿ ಸೇರಿ ವಿವಿಧ ಗ್ರಾಮ ಗಳಲ್ಲಿ ಗೋವಿನ ಜೋಳ ಬೆಳೆಯಲ್ಲಿ ಲದ್ದಿ ಹುಳುವಿನ ಬಾಧೆ ಹೆಚ್ಚಾಗಿ ಕಂಡುಬಂದಿದೆ.

    ಮೆಲ್ಲೇನ ಬೆಂಜಾಯಿಟ್ ಔಷಧಿಯನ್ನು 16 ಲೀಟರ್ ನೀರಿನಲ್ಲಿ 10 ಗ್ರಾಂ ಬೆರೆಸಿ ಸಿಂಪಡಿಸಬೇಕು. ಇದರಿಂದ ಒಂದೆರಡು ದಿನಗಳಲ್ಲಿ ಹುಳುವಿನ ಬೆಳವಣಿಗೆ ಹತೋಟಿಗೆ ಬಂದು, ಬೆಳೆಗಳನ್ನು ಮೇಯುವ ಹುಳುಗಳು ನಾಶವಾಗುತ್ತವೆ. ಪೋಷಕಾಂಶಗಳ ಕೊರತೆಯಿಂದ ಗಿಡಗಳ ಎಲೆಗಳ ಮೇಲೆ ಹಳದಿ ಮಿಶ್ರಿತ ಗೆರೆಗಳು ಕಂಡುಬಂದಿದ್ದು, ಲಘುಪೋಷಕ ದ್ರಾವಣವನ್ನು ಬಳಸಿದಲ್ಲಿ ನಿಯಂತ್ರಣ ಮಾಡಬಹುದಾಗಿದೆ.

    ಕಾಂಡಕೊರಕ ಬಾಧೆ: ಕುಮ್ಮೂರು, ಮಾಸಣಗಿ, ಮೋಟೆಬೆನ್ನೂರು, ಬೆಳಕೇರಿ, ಬನ್ನಿಹಟ್ಟಿ, ಶಿಡೇನೂರು, ಮುತ್ತೂರು ಗ್ರಾಮಗಳಲ್ಲಿ ಹತ್ತಿ ಬೆಳೆ ತಿಂಗಳು ದಾಟಿದ್ದು, ಕಾಂಡಕೊರಕ ದುಂಬಿಯ ಬಾಧೆ ಕಂಡುಬಂದಿದೆ. ಸಸ್ಯಗಳು ಎಳೆಯ ಹಂತದಲ್ಲಿದ್ದು, ಬೆಳೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟೇರ್​ಗೆ 30 ಕಿಲೋ ಕಾಬೋಫುರಾನ್ ಪುಡಿಯನ್ನು ನೆಲಕ್ಕೆ ಸೇರಿಸಿದಲ್ಲಿ ಹುಳುಗಳನ್ನು ಸಾಯಿಸಬಹುದು. ಕಾಂಡಕೊರಕ ಹುಳುಗಳನ್ನು ನಿಯಂತ್ರಿಸಲು ಪ್ರೊಪೇನೋಪಾಸ್ ಔಷಧಿಯನ್ನು 16 ಲೀಟರ್ ನೀರಿಗೆ 20 ಎಂ.ಎಲ್. ಬೆರೆಸಿ ಸಿಂಪಡಿಸಬೇಕು. ಬೆಳೆಗಳ ಕುಡಿಯನ್ನು ಕತ್ತರಿಸುವ ಹಾಗೂ ಕಾಂಡವನ್ನು ತಿನ್ನಲು ಯತ್ನಿಸುವ ದುಂಬಿಗಳ ನಿಯಂತ್ರಣಕ್ಕೆ ಎಕರೆಗೆ 3ರಂತೆ ಮೋಹಕ ಬಲೆಗಳನ್ನು ಹೊಲಗಳ ಬದುವು ಹಾಗೂ ಮಧ್ಯಭಾಗದಲ್ಲಿ ಅಳವಡಿಸಬೇಕು.

    ಬುಡಕೊಳೆ ರೋಗ: ಕೆಲ ಹೊಲಗಳ ಶೇಂಗಾ ಬೆಳೆಯಲ್ಲಿ ಬುಡಕೊಳೆ ರೋಗ ಕಾಣಸಿಕೊಂಡಿದ್ದು, ರೋಗ ನಿಯಂತ್ರಣಕ್ಕೆ 16 ಲೀಟರ್ ಕ್ಯಾನಿನಲ್ಲಿ 20 ಗ್ರಾಂ. ಕಾರ್ಟನ್ ಡೈಜಿರ್ವ ಔಷಧಿಯನ್ನು ಗಿಡಗಳ ಸುತ್ತಲೂ ಸಿಂಪಡಿಸಿ ಭೂಮಿಯಲ್ಲಿ ಇಂಗುವಂತೆ ನೋಡಿಕೊಳ್ಳಬೇಕು. ಔಷಧಿ ಸಿಂಪಡಿಸುವ ವೇಳೆ ಒಂದೆರಡು ತಾಸು ಮಳೆಯಿಲ್ಲದಿದ್ದಲ್ಲಿ ಉತ್ತಮ ವೆನ್ನಲಾಗಿದ್ದು, ಮುನ್ನೆಚ್ಚರಿಕೆ ಒಳಿತು ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಬಸವರಾಜ ಮರಗಣ್ಣನವರ.

    ರೈತರಿಗೆ ವಿವಿಧ ಬೀಜ, ಔಷಧಿ, ಕೃಷಿ ಸಲಕರಣೆಗಳು ಸಬ್ಸಿಡಿಯಲ್ಲಿ ರೈತಸಂಪರ್ಕ ಕೇಂದ್ರ ಪೂರೈಸುತ್ತಿದೆ. ನಿಗದಿಪಡಿಸಿದ ದಾಖಲೆಗಳೊಂದಿಗೆ ಪಡೆಯಬಹುದು. ಈಗ ವಿವಿಧ ಬೆಳೆಗಳಲ್ಲಿ ರೋಗ ಬಾಧೆ ಕಂಡುಬಂದಿದ್ದು, ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಗ್ರಾಮ ಸಹಾಯಕರು, ಇಲ್ಲವೆ ಕೃಷಿ ಸಹಾಯಕ ನಿರ್ದೇಶಕರ ಕಾರ್ಯಾಲಯದ ಸಿಬ್ಬಂದಿಯ ಸಲಹೆ ಸೂಚನೆ ಪಡೆಯಬೇಕು. ರೈತರು ಏಕಬೆಳೆ ಪದ್ಧತಿ ಜೊತೆ ಮಿಶ್ರ ಬೇಸಾಯ ಪದ್ಧತಿ, ಸಿರಿಧಾನ್ಯ ಬಿತ್ತುವಿಕೆ ಮೂಲಕ ಆರ್ಥಿಕ ಲಾಭ ಪಡೆಯಬಹುದಾಗಿದೆ. ಪೋಷಕಾಂಶಗಳ ಕೊರತೆಯಿಂದ ಬೆಳೆ ಕುಂಠಿತ ಗೊಳ್ಳುವ ಲಕ್ಷಣ ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಬೇಕು.

    | ಬಸವರಾಜ ಮರಗಣ್ಣನವರ, ಕೃಷಿ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts