More

    ಶಿಸ್ತು ಕಲಿಯದಿದ್ದರೆ ಕಠಿಣ ಕ್ರಮ

    ರಾಮದುರ್ಗ: ಸಮಯದ ಮಹತ್ವ ಅರಿಯದ ಅಧಿಕಾರಿಗಳು ಶಿಸ್ತು ಕಲಿಯದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಕೆ ನೀಡಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಭೆಗೆ ತಡವಾಗಿ ಬಂದ ಅಧಿಕಾರಿಗಳು ವಿರುದ್ಧ ಸಿಡಿಮಿಡಿಗೊಂಡು ಖಡಕ್ಕಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಜಬಾಬ್ದಾರಿಯಿಂದ ವರ್ತಿಸಬೇಕು. ಸಭೆಗೆ ಅಸಮರ್ಪಕ ಮಾಹಿತಿ ನೀಡಿದರೆ ಸುಮ್ಮನಿರುವುದಿಲ್ಲ. ಮಹತ್ವದ ಕೆಲಸ, ಕಾರ್ಯಗಳ ಬಗ್ಗೆ ಚರ್ಚಿಸಬೇಕೆಂದರೆ ಮುಖ್ಯ ಇಲಾಖೆ ಅಧಿಕಾರಿಗಳೇ ಸಭೆಗೆ ಗೈರಾಗುತ್ತಾರೆ. ಇಲಾಖೆಯ ಪ್ರಗತಿ ಕುರಿತು ಸಭೆಗೆ ನೀಡುವ ಮಾಹಿತಿಯನ್ನು ಕೆಲವರು ಇಂಗ್ಲಿಷ್‌ನಲ್ಲಿ ನೀಡಿದ್ದಾರೆ. ಕರ್ನಾಟಕದಲ್ಲಿ ಆಡಳಿತ ಭಾಷೆ ಕಡ್ಡಾಯ. ಪದೇ ಪದೆ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುತ್ತಿರುವ ಕ್ರಮ ಖಂಡನೀಯ. ಸಂಬಳ ಸರಿಯಾಗಿ ತೆಗೆದುಕೊಂಡಂತೆ ಕೆಲಸವನ್ನೂ ಮಾಡಬೇಕು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸದಸ್ಯರಿಂದ ಅಸಮಾಧಾನ: ಪಿಆರ್‌ಇಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಗದಿಗೆಪ್ಪ ಕುರಕೋಟಿ ಇಲಾಖೆಯ ವರದಿ ವಾಚಿಸುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಶಾಸಕರು, ಜಿಪಂಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದರೂ ಅದಕ್ಕೆ ಸರಿಯಾದ ಕ್ರಿಯಾಯೋಜನೆ ತಯಾರಿಸಿಲ್ಲ. ಬೇಕಾಬಿಟ್ಟಿಯಾಗಿ ರೈತರ ಜಮೀನಿನ ನೀರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪೂರೈಸಲು ರಸ್ತೆ ಮಧ್ಯೆ ಸಣ್ಣ ಬ್ರಿಡ್ಜ್‌ಗೂ ಸಹ ಕ್ರಿಯಾಯೋಜನೆ ಇಲ್ಲ. ಕೆಲಸ ಮಾಡಿದ ಗುತ್ತಿಗೆದಾರರಿಗೂ ಸರಿಯಾದ ಸಮಯಕ್ಕೆ ಬಿಲ್ ಮಾಡಿಕೊಡದೆ ಸತಾಯಿಸುತ್ತಿರುವ ಬಗ್ಗೆ ಗುತ್ತಿಗೆದಾರರಿಂದ ದೂರುಗಳು ಕೇಳಿ ಬಂದಿವೆ. ಮುಂದೆಯಾದರೂ ಸರಿಯಾಗಿ ಕೆಲಸ ನಿರ್ವಹಸಿ ಎಂದು ಎಇಇ ಕುರಕೋಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಎಇಇ ಕಾರ್ಯವೈಖರಿಗೆ ಎಲ್ಲ ಜಿಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

    ತೋಟಗಾರಿಕೆ ಇಲಾಖೆಯ ಅಧಿಕಾರಿ ಪ್ರಕಾಶ ಮುಗುಳಕೋಡ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ ಮಾಹಿತಿ ನೀಡಿದರು. ಜಿಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ರಮೇಶ ದೇಶಪಾಂಡೆ, ಜಹೂರ್ ಹಾಜಿ, ಮಾರುತಿ ತುಪ್ಪದ, ಶಿವಕ್ಕ ಬೆಳವಡಿ, ತಾಪಂ ಅಧ್ಯಕ್ಷೆ ಶಕುಂತಲಾ ವಡ್ಡರ, ಎಪಿಎಂಸಿ ಅಧ್ಯಕ್ಷ ಫಕೀರಪ್ಪ ಕೊಂಗವಾಡ, ತಹಸೀಲ್ದಾರ್ ಗಿರೀಶ ಸ್ವಾದಿ ಇತರರು ಇದ್ದರು.

    ಮಾಹಿತಿ ಗೊತ್ತಿಲ್ಲವೆಂದ ಮುಖ್ಯಾಧಿಕಾರಿ!

    ರಾಮದುರ್ಗ ಪುರಸಭೆ ಮುಖ್ಯಾಧಿಕಾರಿ ಶಶಿಧರ ಕಾಗವಾಡ ಅವರು, ಕೆಡಿಪಿ ಸಭೆಗೆ ಮಾಹಿತಿ ನೀಡದೆ ತಡವರಿಸುತ್ತಿದ್ದಂತೆಯೇ ಆಕ್ರೋಶಗೊಂಡ ಶಾಸಕ ಮಹಾದೇವಪ್ಪ ಯಾದವಾಡ ಅವರು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಗೆ ತಮ್ಮ ಇಲಾಖೆಯ ಮಾಹಿತಿ ತರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ನನಗೆ ಮಾಹಿತಿ ಗೊತ್ತಿಲ್ಲವೆಂದು ಮತ್ತೆ ಹೇಳಿದರು. ಅಧಿಕಾರಿ ವರ್ತನೆಗೆ ಸಭೆಯಲ್ಲಿದ್ದ ಎಲ್ಲ ಸದಸ್ಯರು ಹಾಗೂ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೆಲಸ ಮಾಡಲಾಗದಿದ್ದರೂ ನ್ಯಾಯಾಲಯದ ಮೋರೆ ಹೋಗಿ ರಾಮದುರ್ಗ ಪಟ್ಟಣಕ್ಕೆ ಬರುವುದು ಮಾತ್ರ ನಿಮಗೆ ಗೊತ್ತು. ಪುರಸಭೆಯಲ್ಲಿ ನಡೆಯುವ ದೈನದಿಂದ ಕೆಲಸಗಳ ಹಾಗೂ ಸರ್ಕಾರದ ಯೋಜನೆಗಳ ಕಾರ್ಯರೂಪಕ್ಕೆ ತರುವುದೇ ಇಲಾಖೆ ಮುಖ್ಯಸ್ಥರಿಗೆ ಮಾಹಿತಿ ಇಲ್ಲವೆಂದರೆ ರಾಮದುರ್ಗ ಅಭಿವೃದ್ಧಿ ಸಾಧ್ಯವಿಲ್ಲ. ನಿಮಗೆ ಕೆಲಸ ಮಾಡಲು ಆಗದಿದ್ದರೆ ಬೇರೆಡೆ ಹೋಗಿ ಎಂದು ಪುರಸಭೆ ಮುಖ್ಯಾಧಿಕಾರಿಯನ್ನು ಶಾಸಕ ಯಾದವಾಡ ತರಾಟೆಗೆ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts