More

    ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಶಿಷ್ಯ ಸ್ವೀಕಾರ ಸಮಾರಂಭ

    ಶಿವಮೊಗ್ಗ: ಶಿರಸಿ ತಾಲೂಕು ಸೋಂದಾ ಸ್ವರ್ಣವಲ್ಲಿ ಸಂಸ್ಥಾನ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯಲ್ಲಾಪುರ ತಾಲೂಕು ಈರಾಪುರದ ನಾಗರಾಜ ಭಟ್ಟ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು, ಫೆ.22ರಂದು ಶಿಷ್ಯ ಸ್ವೀಕಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಶ್ರೀ ಮಠದ ಶಿಷ್ಯರೂ ಆಗಿರುವ ವಕೀಲ ಅಶೋಕ ಜಿ.ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಫೆ.21ರಂದು ಬೆಳಗ್ಗೆ ಸಂನ್ಯಾಸ ಗ್ರಹಣ, ಸಂಕಲ್ಪ, ಗಣಪತಿ ಪೂಜೆ, ನಾಂದಿ, ಮಾತೃಕಾ ಪೂಜೆ, ಸಾವಿತ್ರಿ ಪ್ರವೇಶ, ಶತಚಂಡಿ ಹವನ, ಮಧ್ಯಾಹ್ನದ ಬಳಿಕ ವಿವಿಧ ಹವನಗಳು ನೆರವೇರಲಿವೆ. ಮಧ್ಯಾಹ್ನ 3ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯತಿ ಧರ್ಮ ಮತ್ತು ಲೋಕ ಧರ್ಮ ಎಂಬ ವಿಷಯದ ಕುರಿತು ಮೈಸೂರಿನ ಭಾರತೀ ಯೋಗಧಾಮದ ಕೆ.ಎಲ್.ಶಂಕರನಾರಾಯಣ ಜೋಯ್ಸ ಉಪನ್ಯಾಸ ನೀಡಲಿದ್ದಾರೆ ಎಂದರು.
    ಗಂಗಾಧರೇಂದ್ರ ಶ್ರೀಗಳು ರಚಿಸಿದ ಪ್ರಾರ್ಥನಾ ಮಾಲಿಕೆ ಅಲೋಕಯಾಂಬ ಲಲಿತೇ ಲೋಕಾರ್ಪಣೆಗೊಳ್ಳಲಿದೆ. ನಿದಿಧ್ಯಾಸನ ಎಂಬ ವಿಷಯದ ಕುರಿತು ಹೊಳೆನರಸೀಪುರ ಆಧ್ಯಾತ್ಮ ಪ್ರಕಾಶ ಶ್ರೀ ಪ್ರಕಾಶಾನಂದೇಶ್ವರ ಸರಸ್ವತೀ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ. ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಬೆಂಗಳೂರು ಕೂಡ್ಲಿ ಶೃಂಗೇರಿ ಅವಿಚ್ಛಿನ್ನ ಪರಂಪರೆಯ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಶಿರಳಗಿ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.
    ಫೆ.22ರ ಬೆಳಗ್ಗೆ ಕಾಷಾಯ ವಸ್ತ್ರ ಧಾರಣೆ, ನಾಮಕರಣ, ಪರ್ಯಂಕಶೌಚ, ಯೋಗಪಟ್ಟ, ಬ್ರಹ್ಮವಿದ್ಯಾಶೀರ್ವಚನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಮಧ್ಯಾಹ್ನ 3.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
    ಶ್ರೀ ಮಠದ ಮತ್ತೋರ್ವ ಭಕ್ತ ಡಾ.ಬಾಲಕೃಷ್ಣ ಹೆಗಡೆ ಮಾತನಾಡಿ, ಪರಿಸರ ಸಂರಕ್ಷಣೆಯ ಹೋರಾಟದ ನೇತೃತ್ವ ವಹಿಸಿಕೊಂಡವರು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ. ಪರಿಸರದ ಬಗ್ಗೆ ಅವರು ಅಪಾರ ಕಾಳಜಿ ಹೊಂದಿರುವ ಕಾರಣ ಅವರನ್ನು ಹಸಿರು ಸ್ವಾಮೀಜಿ ಎಂದೇ ಕರೆಯಲಾಗುತ್ತದೆ. ಕೃಷಿಗೆ ಸಂಬಂಧಿಸಿದ ಅನೇಕ ವಿಚಾರ ಸಂಕಿರಣಗಳನ್ನು ಅವರು ಆಯೋಜಿಸಿದ್ದಾರೆ. ಸಮಾಜಮುಖಿ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಈ ಪರಂಪರೆಯನ್ನು ನೂತನ ಯತಿ ಮುಂದುವರಿಸುತ್ತಾರೆ ಎಂಬ ನಂಬಿಕೆ ಎಲ್ಲ ಭಕ್ತರಲ್ಲೂ ಇದೆ ಎಂದು ಹೇಳಿದರು.
    ಮಠದ ಭಕ್ತರಾದ ಡಿ.ಎಂ.ಹೆಗಡೆ, ಲಕ್ಷ್ಮೀನಾರಾಯಣ ಜೋಷಿ, ಪಿ.ಪಿ.ಹೆಗಡೆ, ದೇವೇಂದ್ರ ಭಟ್, ಬಾಲಾಜಿ ದೇಶಪಾಂಡೆ, ಮೋಹನ್ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts