More

    ಕುಮದ್ವತಿ ನದಿ ತಂದ ಆಪತ್ತು

    ರಾಣೆಬೆನ್ನೂರ: ತಾಲೂಕಿನಲ್ಲಿ ಹರಿದಿರುವ ಕುಮುದ್ವತಿ ನದಿಯಲ್ಲಿ ಮಂಗಳವಾರ ರಾತ್ರಿ ನೀರಿನ ಹರಿವು ಏಕಾಏಕಿ ಏರಿಕೆಯಾಗಿದೆ. ನದಿ ದಡದುದ್ದಕ್ಕೂ ಹೊಂದಿರುವ ಬಾಳೆ, ಅಡಕೆ ತೋಟ ಹಾಗೂ ಮೆಕ್ಕೆಜೋಳ, ಹತ್ತಿ ಬೆಳೆದ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿ ಉಂಟು ಮಾಡಿದೆ.

    ಶಿರಸಿ, ಶಿವಮೊಗ್ಗ ಸೇರಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಕುಮುದ್ವತಿ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಳವಾಗಿದೆ. ಇದರಿಂದ ರಾತ್ರೋರಾತ್ರಿ ನೀರು ರೈತರ ತೋಟ, ಕೃಷಿ ಭೂಮಿಗಳಿಗೆ ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

    ಮೂರು ಗ್ರಾಮಗಳಿಗೆ ಸಂಪರ್ಕ ಕಡಿತ: ತಾಲೂಕಿನ ಲಿಂಗದಹಳ್ಳಿ- ಅಂತರವಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಕುಮುದ್ವತಿ ನದಿಯ ಸೇತುವೆ ಸಂಪೂರ್ಣ ಮುಳಗಡೆಯಾಗಿರುವ ಕಾರಣ ಮಣಕೂರ ಗ್ರಾಮ ಸೇರಿ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಹಲಗೇರಿಯಿಂದ ತುಮ್ಮಿನಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಕುಪ್ಪೇಲೂರ ಬಳಿ ನಿರ್ವಿುಸಿದ ಸೇತುವೆ ಕೂಡ ಮುಳುಗುವ ಹಂತ ತಲುಪಿದೆ. ನೀರಿನ ಪ್ರಮಾಣ ಇನ್ನೂ ಏರಿಕೆಯಾದರೆ, ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ.

    ಕಣ್ಣೀರು ಹಾಕುತ್ತಿರುವ ರೈತರು: ತಾಲೂಕಿನ ಕುಪ್ಪೇಲೂರ, ಮುದೇನೂರ, ಮಣಕೂರ, ಮುಸ್ಟೂರು ಸೇರಿ ಕುಮುದ್ವತಿ ನದಿ ತೀರದುದ್ದಕ್ಕೂ ಹೊಂದಿರುವ ಜಮೀನುಗಳಲ್ಲಿ ರೈತರು ನದಿ ನೀರನ್ನು ನಂಬಿ ಬಾಳೆ, ಅಡಕೆ ತೋಟ ಮಾಡಿದ್ದಾರೆ. ಕೆಲವರು ಚೆಂಡು, ಸೇವಂತಿ ಸೇರಿ ವಿವಿಧ ಬಗೆಯ ಹೂವು ಬೆಳೆದಿದ್ದಾರೆ. ಆದರೆ, ರಾತ್ರೋರಾತ್ರಿ ಬಾಳೆ, ಅಡಕೆ ಹಾಗೂ ಹೂವಿನ ತೋಟಕ್ಕೆ ನುಗ್ಗಿದ ನೀರು ನೂರಾರು ಎಕರೆಯಷ್ಟು ಬೆಳೆಯನ್ನು ನಾಶಪಡಿಸಿದೆ.

    ಒಂದು ಎಕರೆಗೆ 50 ಸಾವಿರ ರೂ.ನಂತೆ 4 ಲಕ್ಷ ರೂ.ವರೆಗೂ ಖರ್ಚು ಮಾಡಿ 8 ಎಕರೆ ಜಮೀನಿನಲ್ಲಿ ಬಾಳೆ ತೋಟ ಮಾಡಿದ್ದೇನೆ. ಗಿಡಗಳು ಉತ್ತಮವಾಗಿ ಬೆಳೆದಿದ್ದು, ಫಸಲು ಕೂಡ ಚೆನ್ನಾಗಿಯೆ ಬರುವ ನಿರೀಕ್ಷೆಯಿತ್ತು. ಆದರೆ, ಕುಮುದ್ವತಿ ನದಿ ನೀರು ಸಂಪೂರ್ಣ ತೋಟವನ್ನು ಆವರಿಸಿಕೊಂಡಿದೆ. ಗಿಡಗಳು ಮಣ್ಣಿನ ಸಮೇತ ಕಿತ್ತು ಬೀಳತೊಡಗಿವೆ. ತೋಟಕ್ಕಾಗಿ ಸಾಲ ಮಾಡಿದ್ದೇವು. ಇದೀಗ ಬೆಳೆ ನೀರು ಪಾಲಾಗಿದ್ದು, ಮುಂದೆನು ? ಮಾಡಬೇಕು ದಿಕ್ಕು ತೋಚದಂತಾಗಿದೆ ಎಂದು ತಾಲೂಕಿನ ಕುಪ್ಪೇಲೂರ ಗ್ರಾಮದ ಬಾಳೆ ತೋಟದ ರೈತ ಲಕ್ಷ್ಮಪ್ಪ ಅಳಲಗೇರಿ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.

    ತಾಲೂಕಿನ ಮುದೇನೂರ ಗ್ರಾಮದ ರೈತ ಮಹಿಳೆ ಜಯಕ್ಕ ಜಾನಪ್ಪನವರ ಎಂಬುವರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಚಂಡು ಹೂವಿನ ತೋಟ ಸಹ ತುಂಗಭದ್ರಾ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಮಳೆಯಿಂದ ಹಾನಿಯಾದ ಬೆಳೆಗಾರರಿಗೆ ಸರ್ಕಾರ ಕೂಡಲೆ ಪರಿಹಾರಧನ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ನಾನು ಏಳು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಉತ್ತಮ ಫಸಲು ಬರುವ ನಿರೀಕ್ಷೆ ಇತ್ತು. ಆದರೆ, ಬೆಳೆ ಕೊಳೆತ ಕಾರಣ ಮೆಕ್ಕೆಜೋಳದ ಎಲ್ಲ ಕಿತ್ತು ಹಾಕಿದ್ದೇನೆ. ಎಕರೆಗೆ 25 ಸಾವಿರ ರೂ.ವರೆಗೂ ಖರ್ಚು ಮಾಡಿದ್ದೆ. ನಿರಂತರ ಮಳೆಯಿಂದಾಗಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

    | ಕೋಟ್ರೇಶ ಅಂಗಡಿ ಕುಪ್ಪೇಲೂರ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts