ಬೆಂಗಳೂರು: ತಮ್ಮ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪ್ರಥಮ ಬಾರಿಗೆ ಅಭಿನಯಿಸಲಿರುವ ದ್ವಿತ್ವ ಸಿನಿಮಾದ ಪೋಸ್ಟರ್ಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ಕುರಿತಂತೆ ನಿರ್ದೇಶಕ ಪವನ್ ಕುಮಾರ್ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಿಮಗನಿಸಿದ್ದು ಸರಿ, ಆದರೆ ಸತ್ಯಾಂಶ ಇದು’ ಎನ್ನುವ ಮೂಲಕ ಅದನ್ನು ಕಾಪಿ ಎಂದಿದ್ದವರಿಗೆ ನಿಜ ಏನು ಎಂಬುದನ್ನು ತಿಳಿಸಿದ್ದಾರೆ.
ಒಟ್ಟಾರೆ ಪೋಸ್ಟರ್ ಮೂಡಿಬಂದಿರುವ ಪ್ರಕ್ರಿಯೆಯನ್ನು ವಿವರಿಸಿರುವ ಅವರು, ಅಷ್ಟಕ್ಕೂ ಇಷ್ಟೆಲ್ಲ ಗೊಂದಲ ಉಂಟಾಗಲು ಕಾರಣ ಏನು ಎಂಬುದನ್ನು ಹೇಳಿದ್ದಾರೆ. ನಮ್ಮ ಚಿತ್ರದ ಪೋಸ್ಟರ್ ಡಿಸೈನರ್ ಆದರ್ಶಗೆ ನಾನು ಚಿತ್ರದ ಕಾನ್ಸೆಪ್ಟ್ ಹೇಳಿದಾಗ ಅವರು, ಕೆಲವು ವಿನ್ಯಾಸ ತೋರಿಸಿದ್ದರು. ಹೀಗೆ ತುಂಬಾ ವಿನ್ಯಾಸಗಳ ಬಗ್ಗೆ ಚರ್ಚೆ ಆದ ನಂತರ ಒಂದು ದಿನ, ಬಿರುಕು ಬಿಟ್ಟ ಮುಖವೊಂದರ ವಿನ್ಯಾಸ ತೋರಿಸಿದ್ದರು. ಅದು ನನ್ನ ಕಥೆಗೆ ಸರಿ ಹೊಂದುತ್ತಿರುವುದರಿಂದ ಅದು ನನಗೆ ಇಷ್ಟವಾಯಿತು. ಆದರೆ ಅನಾಮಿಕ ಅಷ್ಪಷ್ಟ ಮುಖವನ್ನು ಹೀಗೆ ತೋರಿಸುವ ಬದಲು ಚಿತ್ರದ ನಾಯಕ ಪುನೀತ್ ರಾಜ್ಕುಮಾರ್ ಅವರ ಮುಖವನ್ನೇ ಹೀಗೆ ತೋರಿಸಿ ಎಂದು ಅವರಿಗೆ ಸೂಚಿಸಿದೆ. ಅವರು ಶ್ರಮವಹಿಸಿ ಹಾಗೇ ಮಾಡಿಕೊಂಡು ಬಂದರು, ನನಗದು ಇಷ್ಟವಾಯಿತು ಎಂದು ಪೋಸ್ಟರ್ ಮೂಡಿ ಬಂದ ಬಗೆಯನ್ನು ವಿವರಿಸಿದ್ದಾರೆ ಪವನ್.
ಇದನ್ನೂ ಓದಿ: ಪುನೀತ್ ಹೊಸ ಚಿತ್ರ ‘ದ್ವಿತ್ವ’ … ಹೊಂಬಾಳೆ ಫಿಲಂಸ್ನಿಂದ ಅಧಿಕೃತ ಘೋಷಣೆ
ಆದರೆ ಪೋಸ್ಟರ್ ಬಿಡುಗಡೆ ಆಗುತ್ತಿದ್ದ ಹಾಗೆ ಅದನ್ನೇ ಹೋಲುವಂಥ ವಿನ್ಯಾಸವೊಂದು ಇದೆ ಎಂದು ಕೆಲವರು ಈ ವಿನ್ಯಾಸವನ್ನು ನಕಲು ಎಂದು ಜರಿದಿದ್ದಾರೆ. ಆಗ ನಾನು ಆದರ್ಶ್ಗೆ ಕೇಳಿದಾಗ ಆತ, ಅದು ನಾನು ಖರೀದಿಸಿದ್ದ ಸ್ಟಾಕ್ ಇಮೇಜ್ ಮೂಲಕ ನಿಮಗೆ ಒಂದು ಕಾನ್ಸೆಪ್ಟ್ ತೋರಿಸಿದ್ದೆ. ನಂತರ ಅದನ್ನೇ ಆಧರಿಸಿ ವಿನ್ಯಾಸ ರೂಪಿಸಿದ್ದೆ ಎಂದು ಹೇಳಿದ್ದಾರೆ. ಇಲ್ಲಿ ಅವರದ್ದೂ ತಪ್ಪಿಲ್ಲ, ನನ್ನದೂ ತಪ್ಪಿಲ್ಲ. ಆದರೆ ಅವರು ಅದು ಸ್ಟಾಕ್ ಇಮೇಜ್ ಆಧರಿಸಿ ತೋರಿಸಿದ್ದ ಕಾನ್ಸೆಪ್ಟ್ ಎಂದು ಹೇಳಿದ್ದರೆ ನಾನು ಅದನ್ನು ಪರಿಗಣನೆಗೆ ತರದೆ ಬೇರೆ ವಿನ್ಯಾಸ ಮಾಡಿಕೊಡಲು ಹೇಳುತ್ತಿದ್ದೆ. ಇನ್ನು ಅವರು ಅದನ್ನು ನಕಲು ಮಾಡಿದ್ದಾರೆ ಎಂದೂ ಅರ್ಥವಲ್ಲ. ಆ ಥರ ಒಂದು ಸ್ಟಾಕ್ ಮಾಡೆಲ್ ಖರೀದಿಸಿ ಉಳಿದಿದ್ದನ್ನು ರೂಪಿಸುವ ಪ್ರಕ್ರಿಯೆ ಈಗೀಗ ಎಲ್ಲ ಪ್ರಕಾರದ ಕಲೆಗಳಲ್ಲೂ ನಡೆಯುತ್ತದೆ. ಇನ್ನು ನೋಡುಗರಿಗೆ ಆ ಫೋಟೋ ಜತೆ ನಮ್ಮ ಪೋಸ್ಟರ್ ಇಟ್ಟು ನೋಡಿದರೆ ನಕಲು ಅನಿಸುವುದು ಸಹಜ. ನಾನೇ ನಿಮ್ಮ ಸ್ಥಾನದಲ್ಲಿ ಇದ್ದಿದ್ದರೆ ನನಗೂ ಹಾಗೆ ಅನಿಸಿರುತ್ತಿತ್ತು. ಆದರೆ ಅದು ನಕಲಲ್ಲ, ಸತ್ಯಾಂಶ ಇಷ್ಟು ಎಂದು ಒಟ್ಟಾರೆ ಪ್ರಕ್ರಿಯೆಯನ್ನು ಪವನ್ ವಿವರಿಸಿದ್ದಾರೆ.
ನಮ್ಮಿಬ್ಬರ ನಡುವಿನ ಒಂದು ಕಮ್ಯುನಿಕೇಷನ್ ಸಮಸ್ಯೆ ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಯಿತು. ಬಹುಶಃ ಮುಂದೆ ಇದು ಉಳಿದ ಎಲ್ಲರಿಗೂ ಒಂದು ರೀತಿಯಲ್ಲಿ ಎಚ್ಚರಿಕೆಯ ಅಂಶವಾಗಬಹುದು ಎಂದು ಪವನ್ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.
An official Video from Director Pawan Kumar about the Poster of the upcoming Film #Dvitva
Watch on Youtube – https://t.co/Wp6xBRiDlr pic.twitter.com/wUvGGpx9Lu
— Pawan Kumar (@pawanfilms) July 3, 2021