More

    ದಿಂಡಿಯಾತ್ರೆಗೂ ಕರೊನಾ ತಡೆ

    ಬೆಳಗಾವಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಎೆಕ್ಟ್ ಪಂಢರಪುರದ ದಿಂಡಿಯಾತ್ರೆಗೂ ತಟ್ಟಿದ್ದು, ಈ ಭಾಗದ ಸಂತರಿಗೆ ವಿಠ್ಠಲ-ರುಕ್ಮಿಣಿ ದರ್ಶನ ಭಾಗ್ಯ ಇಲ್ಲದಂತಾಗಿದೆ.

    ಕನ್ನಡ-ಮರಾಠಿ ಸಂಸ್ಕೃತಿ ಮೇಳೈಸಿರುವ ಬೆಳಗಾವಿ ತಾಲೂಕಿನಲ್ಲಿ ವಾರಕರಿ ಸಂಪ್ರದಾಯದ ಸಂತರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಪ್ರತಿವರ್ಷ ಇಲ್ಲಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಚಂದ್ರಬಾಗ ನದಿ ತಟದಲ್ಲಿರುವ ಪಂಢರಪುರಕ್ಕೆ ದಿಂಡಿಯಾತ್ರೆ ಕೈಗೊಳ್ಳುತ್ತಿದ್ದರು. ಅದರಲ್ಲೂ, ಬೆಳಗಾವಿ ತಾಲೂಕಿನ ಹಂದಿಗನೂರ ಗ್ರಾಮವೊಂದರಲ್ಲೇ 150ಕ್ಕೂ ಅಧಿಕ ಸಂತರು ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ತೆರಳುತ್ತಿದ್ದರು. ಆದರೆ, ಕರೊನಾತಂಕದ ಹಿನ್ನೆಲೆಯಲ್ಲಿ ಈ ಬಾರಿ ದಿಂಡಿಯಾತ್ರೆ ರದ್ದಾಗಿದೆ. ಆಯಾ ಗ್ರಾಮಗಳ ವಿಠ್ಠಲ-ರುಕ್ಮಿಣಿ ಮಂದಿರಗಳಲ್ಲೇ ಸಂತರು ಹಾಗೂ ಗ್ರಾಮಸ್ಥರು, ಆಷಾಢ ಏಕಾದಶಿ ನಿಮಿತ್ತ ಅಂತರ ಕಾಯ್ದುಕೊಂಡು ಭಜನೆ, ಕೀರ್ತನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಕೈಗೊಂಡರು. ಭಾರತ ಕರೊನಾ ಮುಕ್ತವಾಗಲಿ. ಸರ್ವರ ಬಾಳು ಬೆಳಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

    ಮಂದಿರದ ಬಾಗಿಲಲ್ಲಿ ನಿಂತು ಕೈಮುಗಿದ ಭಕ್ತರು

    ಕುಂದಾನಗರಿ ಬೆಳಗಾವಿಯಲ್ಲಿ ಬುಧವಾರ ಸರಳವಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಕೆಲ ಭಕ್ತರು ಉಪವಾಸ ವ್ರತ ಕೈಗೊಂಡರೆ, ಇನ್ನೂ ಕೆಲವರು ಮನೆಯಲ್ಲೇ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿ ಭಕ್ತಿ ಮೆರೆದರು. ಕರೊನಾ ಆತಂಕದ ಹಿನ್ನೆಲೆಯಲ್ಲಿ ನಗರದ ಖಡೇ ಬಜಾರ್‌ನಲ್ಲಿರುವ ವಿಠ್ಠಲ ಮಂದಿರದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹಾಗಾಗಿ, ಸಂತರು ಮತ್ತು ಭಕ್ತರು ಮಂದಿರದ ಬಾಗಿಲಿನಲ್ಲಿ ನಿಂತು ನಮಸ್ಕರಿಸಿದರು.

    ದೇಶದಲ್ಲೇ ಅತಿ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದೃಢಪಟ್ಟಿವೆ. ಹಾಗಾಗಿ, ಈ ಬಾರಿ ತಾತ್ಕಾಲಿಕವಾಗಿ ಪಂಢರಪುರ ದಿಂಡಿಯಾತ್ರೆ ರದ್ದುಗೊಳಿಸಿದ್ದೇವೆ. ಕರೊನಾ ಹಾವಳಿ ತಗ್ಗಿ, ಜನಜೀವನ ಸಹಜ ಸ್ಥಿತಿಗೆ ಮರಳಿದ ನಂತರ, ಪಂಢರಪುರಕ್ಕೆ ತೆರಳಿ ವಿಠ್ಠಲನ ದರ್ಶನ ಪಡೆಯುತ್ತೇವೆ.
    | ಕಲ್ಲಪ್ಪ ತಾನೋಜಿ ಹಂದಿಗನೂರಿನ ಸಂತ

    | ಜಿತೇಂದ್ರ ಕಾಂಬಳೆ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts