More

    ಶಿಥಿಲಾವಸ್ಥೆ ತಲುಪಿರುವ ಸೇತುವೆಗಳು

    ಸೋಮವಾರಪೇಟೆ: ಮಳೆಗಾಲದಲ್ಲಿ ಉಕ್ಕಿ ಹರಿದು ನದಿ ದಂಡೆಯಲ್ಲಿ ವಾಸವಿರುವ ಜನರಿಗೆ ಭಯ ಹುಟ್ಟಿಸುವ ಚೋರನ ಹೊಳೆಗೆ ಐಗೂರು ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಎರಡು ಸೇತುವೆಗಳು ಶಿಥಿಲಾವಸ್ಥೆ ತಲುಪಿದ್ದು, ಜನರು ಭಯಪಡುವಂತಾಗಿದೆ.

    ಐಗೂರು ಜಂಕ್ಷನ್‌ನಲ್ಲಿರುವ ಕಬ್ಬಿಣ ಸೇತುವೆ ಮೇಲಿನ ರಸ್ತೆ ಎರಡೂ ಕಡೆ ಬಿರುಕುಬಿಟ್ಟಿದೆ. ಟಿಂಬರ್ ಲಾರಿಗಳು, ಲೋಡ್ ಆಗಿರುವ ಟಿಪ್ಪರ್‌ಗಳ ಸೇತುವೆ ಮೇಲೆ ತೆರಳಿದಾಗ ಸೇತುವೆ ಅಲ್ಲಾಡಿದ ಅನುಭವವಾಗುತ್ತಿದ್ದು, ಚಾಲಕರು ಭಯಪಡುವಂತಾಗಿದೆ. ಸೇತುವೆ ಶಿಥಿಲಾವಸ್ಥೆ ತಲುಪಿ ದಶಕಗಳೇ ಕಳೆದಿದೆಯಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯನ್ನು 1837ರಲ್ಲಿ ಬ್ರಿಟಿಷರು ಆಡಳಿತ ನಡೆಸುತ್ತಿದ್ದಾಗ ಲಾರ್ಡ್ ಲೂಯಿಸ್ ಕಾಲದಲ್ಲಿ ನಿರ್ಮಿಸಲಾಗಿದೆ. ರಸ್ತೆಯಲ್ಲಿ ಬೃಹತ್ ವಾಹನಗಳೂ ಸೇರಿದಂತೆ ಶಾಲಾ ಮತ್ತು ಸಾರಿಗೆ ಬಸ್‌ಗಳು ಸಂಚರಿಸುತ್ತಿರುವ ಪ್ರಮುಖ ರಸ್ತೆ ಇದಾಗಿದೆ.

    ಕೆಲವು ವರ್ಷಗಳ ಹಿಂದೆ ಇಂಜಿನಿಯರ್‌ರೊಬ್ಬರು ಸೇತುವೆಯ ವಸ್ತುಸ್ಥಿತಿಯನ್ನು ಪರಿಶೀಲಿಸಿ ದುಸ್ಥಿತಿಯಲ್ಲಿರುವ ಸೇತುವೆಯ ಮೇಲೆ ಬೃಹತ್ ವಾಹನಗಳು ಸಂಚರಿಸಿದರೆ ಯಾವಾಗ ಬೇಕಾದರೂ ಅಪಾಯ ಎದುರಾಗಬಹುದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೂ ಸೇತುವೆಯ ಮರು ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ. ಸೇತುವ ತೀರಾ ಕಿರಿದಾಗಿದ್ದು, ಒಂದು ಬೃಹತ್ ವಾಹನ ಸಂಚಾರಕ್ಕೆ ಅವಕಾಶ ಇದೆ. ಎದುರಿನಿಂದ ಬರುವ ವಾಹನಗಳು ಅಲ್ಲಿಯೇ ನಿಂತು ಕಾಯುವ ಪರಿಸ್ಥಿತಿ ಇದೆ.

    2018ರಿಂದ ಭಾರಿ ಮಳೆಯಾದ ಸಂದರ್ಭ ಚೋರನ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಮೇಲ್ಮಟ್ಟದವರೆಗೆ ಬಂದಿತ್ತು. ಸೇತುವೆಯ ಅಡಿಭಾಗ ಶಿಥಿಲಗೊಂಡಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿಗೆ ಬದಲಿ ದ್ವಿಮುಖ ಸಂಚಾರದ ಹೊಸ ಸೇತುವೆಯನ್ನು ನೂತನವಾಗಿ ನಿರ್ಮಿಸಿ ಅನಾಹುತ ತಪ್ಪಿಸಬೇಕೆಂದು ಸ್ಥಳೀಯರ ಒಕ್ಕೊರಲ ಆಗ್ರಹ.

    ಕಬ್ಬಿಣ ಸೇತುವೆಯಿಂದ ಅನತಿ ದೂರದಲ್ಲಿ ಯಡವಾರೆ, ಸಜ್ಜಳಿ, ಯಡವನಾಡು ಮಾರ್ಗದ ರಸ್ತೆಯಲ್ಲಿ ಬ್ರಿಟಿಷ್ ಕಾಲದ ಸೇತುವೆ ಇದೆ. ಈ ಸೇತುವೆಯೂ ಶಿಥಿಲಾವಸ್ಥೆ ತಲುಪಿದೆ. ಹೊಸ ಸೇತುವೆ ನಿರ್ಮಾಣಕ್ಕಾಗಿ ಸುತ್ತಮುತ್ತಲ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಆದರೆ ಈವರೆಗೂ ಬೇಡಿಕೆ ಈಡೇರಿಲ್ಲ.
    ಹಾಸನದಿಂದ ಮಡಿಕೇರಿಗೆ ತೆರಳುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕೇವಲ ಏಕಮುಖ ಸಂಚಾರದ ಸೇತುವೆ ಇದಾಗಿದ್ದು, ಬಸ್, ಲಾರಿ ಚಲಿಸುವ ಸಂದರ್ಭ ಪಾದಚಾರಿಗಳು ಓಡಾಡಲು ಕೂಡ ಜಾಗವಿರುವುದಿಲ್ಲ. ತಿರುವಿನಲ್ಲಿ ಈ ಸೇತುವೆ ಇರುವುದರಿಂದ ಸಾಕಷ್ಟು ಅಪಘಾತಗಳು ನಡೆದಿವೆ. ಕೂಡಲೇ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಮಾಡಬೇಕು.
    > ಕೆ.ಪಿ.ದಿನೇಶ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಐಗೂರು

    ಯಡವಾರೆ, ಸಜ್ಜಳ್ಳಿ ಗ್ರಾಮ ಸಂಪರ್ಕ ರಸ್ತೆಯಲ್ಲಿರುವ ಹಳೇ ಸೇತುವೆಯ ಕೆಳಭಾಗ ಬಿರುಕುಬಿಟ್ಟಿದೆ. ನಿತ್ಯ ಈ ಮಾರ್ಗದಲ್ಲಿ ಶಾಲಾ ವಾಹನಗಳು, ಟಿಂಬರ್ ಲಾರಿಗಳು ಸಂಚರಿಸುತ್ತವೆ. ಕಾಡಾನೆಗಳು ಸೇತುವೆ ಮೇಲೆಯೇ ಹೋಗುತ್ತವೆ. ಕೆಳಭಾಗದಿಂದ ವೀಕ್ಷಿಸಿದರೆ ಭಯವಾಗುತ್ತದೆ. ಸಾರ್ವಜನಿಕರ ಹಿದೃಷ್ಟಿಯಿಂದ ಹೊಸ ಸೇತುವೆ ನಿರ್ಮಾಣವಾಗಲೇಬೇಕು. ಲೋಕೋಪಯೋಗಿ ಇಲಾಖೆ ಈ ಸಂಬಂಧ ಕ್ರಮಕೈಗೊಳ್ಳಬೇಕು.
    > ಮಚ್ಚಂಡ ಅಶೋಕ್, ಕೃಷಿಕ, ಯಡವಾರೆ ಗ್ರಾಮ

    ಕಬ್ಬಿಣ ಸೇತುವೆಯನ್ನು ಪರಿಶೀಲನೆ ಮಾಡಲಾಗಿದೆ. ತಾತ್ಕಾಲಿಕವಾಗಿ ಬಿರುಕು ಬಿಟ್ಟ ರಸ್ತೆಯಲ್ಲಿ ಕಾಂಕ್ರೀಟ್ ಹಾಕಿ ಬಿರುಕು ಮುಚ್ಚಲಾಗಿದೆ. ಒಂದು ಭಾಗದಲ್ಲಿ ವೆಲ್ಡಿಂಗ್ ಬಿಟ್ಟಿದೆ. ಕಬ್ಬಿಣದ ನಟ್‌ಗಳು ಸಡಿಲಗೊಂಡಿವೆ. ತಂತ್ರಜ್ಞರನ್ನು ಕರೆಸಿ ಸರಿಪಡಿಸಲಾಗುವುದು. ಹೊಸ ಸೇತುವೆ ನಿರ್ಮಾಣಕ್ಕೆ 6 ಕೋಟಿ ರೂ. ಪ್ರಸ್ತಾವನೆಯನ್ನು ಕೆಆರ್‌ಡಿಸಿಎಲ್ ಕಳುಹಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಕೂಡಲೇ ಸೇತುವೆ ಕಾಮಗಾರಿ ಪ್ರಾರಂಭಿಸಲಾಗುವುದು.
    > ವೆಂಕಟೇಶ್ ನಾಯಕ್ ಎಇಇ, ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts