More

    Dil Bechara Review: ಭಾವನೆಗಳ ಬುನಾದಿ ಮೇಲೆ ಜೀವನಸ್ಫೂರ್ತಿಯ ಮಹಲು

    ಚಿತ್ರ : ದಿಲ್​ ಬೇಚಾರಾ
    ನಿರ್ದೇಶನ: ಮುಖೇಶ್​ ಛಾಬ್ರಾ
    ತಾರಾಗಣ: ಸುಶಾಂತ್​ ಸಿಂಗ್​, ಸಂಜನಾ ಸಿಂಘ್ವಿ, ಸೈಫ್​ ಅಲಿಖಾನ್​
    ಸ್ಟಾರ್: 3.5/5

    ಮಂಜು ಕೊಟಗುಣಸಿ ಬೆಂಗಳೂರು

    ‘ದಿಲ್​ ಬೇಚಾರಾ’ ಸಿನಿಮಾ ನೋಡಿದಮೇಲೆ ನಿಜಕ್ಕೂ ಅನಿಸುವುದೇನೆಂದರೆ, ಸುಶಾಂತ್​ ಇನ್ನೂ ಬದುಕಿರಬೇಕಿತ್ತು.. ಸಾಯುವ ವಯಸ್ಸಲ್ಲ ಎಂದು. ಆದರೆ, ಅವರಿಲ್ಲ ಅನ್ನುವ ಕಾರಣಕ್ಕೇ ಈ ಸಿನಿಮಾಕ್ಕೆ ಈ ಮಟ್ಟದ ಹೈಪ್​ ಸಿಕ್ಕಿದೆ. ಹೆಚ್ಚೆಚ್ಚು ವೀಕ್ಷಕರನ್ನು ಸಂಪಾದಿಸಿಕೊಳ್ಳುತ್ತಿದೆ. ಅಬ್ಬರಗಳಿಲ್ಲದ ಬಿಲ್ಡಪ್​ಗಳಿಂದ ತುಂಬ ದೂರ ನಿಲ್ಲುವ ನೀಟಾದ ಚಿತ್ರ ‘ದಿಲ್​ ಬೇಚಾರ’. ಜೀವನಸ್ಫೂರ್ತಿ ಮತ್ತು ಭಾವನೆಗಳ ಬುನಾದಿ ಮೇಲೆ ಗಟ್ಟಿಯಾದ ಪ್ರೇಮ ಮಹಲನ್ನು ಕಟ್ಟಿ ವಾಸ್ತುಪ್ರಕಾರ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿ, ಪ್ರೇಕ್ಷಕನ ದರ್ಶನಕ್ಕಿಟ್ಟ ಚಿತ್ರ. ವಾಸ್ತವಕ್ಕೆ ತುಂಬ ಹತ್ತಿರ ಎನಿಸುವಂತೆ ಮತ್ತು ಅವರ ದುರಂತ ಅಂತ್ಯವನ್ನೇ ಹೋಲುವ ಒಂದಷ್ಟು ಘಟನೆಗಳು ‘ದಿಲ್​ ಬೇಚಾರಾ’ದಲ್ಲೂ ಕಾಣಿಸುತ್ತದೆ.

    ನಾನು ಇಂದಲ್ಲ ನಾಳೆ ಸಾಯುತ್ತೇನೆ. ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಿದ್ದರೂ, ಇದ್ದಷ್ಟು ದಿನವನ್ನು ಹ್ಯಾಪಿಯಾಗಿ ಕಳೆಯಬೇಕು. ಸದಾ ಎಲ್ಲರನ್ನೂ ನಗಿಸುತ್ತಲಿರಬೇಕು, ಇನ್ನೊಬ್ಬರ ನೋವಿಗೆ ಸ್ಪಂದಿಸಬೇಕು ಈ ರೀತಿಯ ಗುಣದವನು ಇಮ್ಯಾನ್ಯುವಲ್​ ಅಲಿಯಾಸ್​ ಮ್ಯಾನಿ (ಸುಶಾಂತ್​). ರಾಂಚಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇತನ ಕಣ್ಣಿಗೆ ಬೀಳುವವಳು ಕಿಜಿ ಬಸು (ಸಂಜನಾ ಸಾಂಘ್ವಿ). ಈಕೆ ಸಂಗೀತ ಪ್ರೇಮಿ. ಹೀಗೆ ಹಲವು ವೈರುಧ್ಯ ಗುಣಗಳಿರುವ ಈ ಜೋಡಿ, ದಿನಗಳೆದಂತೆ ಹತ್ತಿರವಾಗುತ್ತದೆ. ಕಾಯಿಲೆಯಿಂದ ಖಿನ್ನತೆಯಲ್ಲಿ ಮುಳುಗಿದ್ದ ಕಿಜಿಗೆ ತನ್ನ ನೋವನ್ನು ಮುಚ್ಚಿಟ್ಟು ಆಕೆಗೆ ಜೀವನಸ್ಫೂರ್ತಿ ತುಂಬುತ್ತಾನೆ ಮ್ಯಾನಿ. ಇಬ್ಬರು ಪ್ರೇಮಿಗಳಾಗುತ್ತಾರೆ. ಆದರೆ, ಕ್ಯಾನ್ಸರ್ ಕಾಯಿಲೆ ಮಾತ್ರ ಮ್ಯಾನಿಯನ್ನು ಸಾವಿನ ಹತ್ತಿರಕ್ಕೆ ನೂಕುತ್ತಿರುತ್ತದೆ!

    ‘ಒಂದು ವೇಳೆ ನಾನು ಸತ್ತು ಹೋದರೆ ನೀವು ನನ್ನ ಬಗ್ಗೆ ಏನು ಮಾತನಾಡುತ್ತೀರಿ? ನಾನು ಈಗಲೇ ಕೇಳಿಸಿಕೊಳ್ಳಬೇಕು. ದಯಮಾಡಿ ಆ ಮಾತುಗಳನ್ನೇ ಈಗಲೇ ನನ್ನೆದುರು ಹೇಳಿಬಿಡಿ’.. ಹೀಗೊಂದು ಡೈಲಾಗ್​ ಮ್ಯಾನಿ ಬಾಯಿಂದ ಬರುತ್ತದೆ. ಇನ್ನೇನು ಆತ ಶಾಶ್ವತವಾಗಿ ಕಣ್ಮುಚ್ಚುವ ಕ್ಷಣಗಳು ಹತ್ತಿರ ಬಂತು ಎಂಬುದು ಅವನ ಗಮನಕ್ಕೆ ಬರುತ್ತಿದ್ದಂತೆ ತನ್ನ ಸ್ನೇಹಿತರಿಗೆ ಇಂಥದ್ದೊಂದು ಟಾಸ್ಕ್​ ನೀಡುತ್ತಾನೆ. ಚಿತ್ರದಲ್ಲಿನ ಆ ಸ್ಥಿತಿ ನೆನಪಿಸಿಕೊಂಡರೆ, ಈ ಸಿನಿಮಾ ವಾಸ್ತವಕ್ಕೆ ಎಷ್ಟೊಂದು ಹತ್ತಿರ ಇದೆಯಲ್ಲ ಎಂದು ಅನಿಸದೆ ಇರದು. ಆ ಮಟ್ಟಿಗೆ ಸಿನಿಮಾ ಆಪ್ತವಾಗಿ ಕಾಡುತ್ತದೆ.

    ಭಾವುಕತೆಗೆ ಹೆಚ್ಚಿನ ಸ್ಪೇಸ್​ ನೀಡಿರುವ ನಿರ್ದೇಶಕ ಮುಖೇಶ್​ ಛಾಬ್ರಾ, ಮೂಲ ಹಾಲಿವುಡ್​ನ ‘ದಿ ಫಾಲ್ಟ್ ಇನ್​ ಅವರ್ ಸ್ಟಾರ್ಸ್’ ಸಿನಿಮಾವನ್ನು ನೇರವಾಗಿ ಭಾರತೀಯ ನೆಟಿವಿಟಿಗೆ ಭಟ್ಟಿ ಇಳಿಸಿದ್ದಾರೆ. ಸಂಭಾಷಣೆಗಳನ್ನು ನೀಡುವಿಕೆಯಲ್ಲಿಯೇ ನಿರ್ದೇಶಕರು ಗೆದ್ದಿದ್ದಾರೆ. ಸಾಯುವ ವ್ಯಕ್ತಿಯ ಬಾಯಲ್ಲಿ ಜೀವನಸ್ಫೂರ್ತಿಯ ಪಾಠ ಮಾಡಿಸಿ, ಚಿತ್ರದಲ್ಲಿ ಮ್ಯಾನಿ ಸತ್ತರೂ, ಆ ಸಂಭಾಷಣೆಗಳು ಆತನನ್ನು ಜೀವಂತವಾಗಿಸುತ್ತವೆ.

    ಮುಖದಲ್ಲಿನ ನಗು, ಅಳು, ಪ್ರೀತಿ ಹೊಮ್ಮಿಸುವ ಕಣ್ಣುಗಳು, ಅವರ ಬಾಯಿಂದ ಹೊರಡುವ ಡೈಲಾಗ್​ಗಳು ಹೀಗೆ ಸುಶಾಂತ್​ ಮತ್ತಷ್ಟು ಇಷ್ಟವಾಗುತ್ತ ಹೋಗುತ್ತಾರೆ. ವಾಸ್ತವದಲ್ಲಿ ಅವರಿಲ್ಲ ಎಂಬುದು ಗೊತ್ತಿದ್ದರೂ, ಗಾಢವಾಗಿ ಮನಸಿನೊಳಗೆ ಸುಶಾಂತ್​ ಇಳಿಯುತ್ತಾರೆ. ದೆಹಲಿ ಮೂಲದ ಸಂಜನಾಗಿದು ಮೊದಲ ಸಿನಿಮಾ. ಅತಿಥಿ ಪಾತ್ರದಲ್ಲಿ ಸೈಫ್​ ಅಲಿಖಾನ್​ ಹೀಗೆ ಬಂದು ಹಾಗೆ ಹೋಗುತ್ತಾರೆ.

    ಒಂದು ವೇಳೆ ಸುಶಾಂತ್​ ಬದುಕಿದ್ದಿದ್ದರೆ, ಅವರ ಸಿನಿಮಾ ಬತ್ತಳಿಕೆಯಲ್ಲಿನ 10ರಲ್ಲಿ 11 ಎಂಬಂತೆ ಈ ಸಿನಿಮಾ ಹೀಗೆ ಬಂದು ಹಾಗೆ ಹೋಗುತ್ತಿತ್ತೇನೋ. ಅವರಿಲ್ಲ ಅನ್ನೋ ಒಂದೇ ಕಾರಣಕ್ಕೆ ಟ್ರೇಲರ್ ನೋಡಲ್ಪಟ್ಟಂತೆ ಸಿನಿಮಾ ಸಹ ಅನುಕಂಪದ ಹಳಿ ಮೇಲೆ ನೋಡಿಸಿಕೊಂಡು ಹೋಗುತ್ತಿದೆ. ಒಂದು ವೇಳೆ ಈ‌ ಹಿಂದಿನ ಅವರ ಸಿನಿಮಾಗಳಿಗೆ ಈಗ ಕೊಟ್ಟಷ್ಟೇ ಪ್ರತಿಕ್ರಿಯೆ ಸಿಕ್ಕಿದ್ದರೆ ಬಹುಶಃ ಸುಶಾಂತ್ ಇಂದಿಗೂ ಜೀವಂತವಾಗಿರುತ್ತಿದ್ದರೇನೋ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts