More

    ಅಶೋಕವನದಲ್ಲಿ ಮನರಂಜನೆಯ ಜೋಕಾಲಿ; ಹೀರೋ ಸಿನಿಮಾ ವಿಮರ್ಶೆ

    | ಚೇತನ್ ನಾಡಿಗೇರ್

    • ಚಿತ್ರ: ಹೀರೋ
    • ನಿರ್ಮಾಣ: ರಿಷಬ್ ಶೆಟ್ಟಿ
    • ನಿರ್ದೇಶನ: ಭರತ್ ರಾಜ್
    • ತಾರಾಗಣ: ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಕೋಲಾರ ಮಂಜು ಮುಂತಾದವರು

    ಅವನು ತೀರ್ಮಾನಿಸಿಕೊಂಡೇ ಹೋಗಿರುತ್ತಾನೆ. ಅಶೋಕವನ ಎಸ್ಟೇಟ್​ಗೆ ಹೋಗಬೇಕು, ಅಲ್ಲಿರುವ ರೌಡಿಗಳನ್ನು ಹೊಡೆದುರಿಳಿಸಬೇಕು, ಆ ರೌಡಿಗಳ ಬಾಸ್​ನನ್ನು ಹೊಡೆದು ಕೆಡವಬೇಕು, ಕೊನೆಗೆ ತನ್ನ ಅವನತಿಗೆ ಕಾರಣಳಾದ ಮಾಜಿ ಪ್ರೇಯಸಿಯ ಗಂಟಲಿಗೆ ರೇಜರ್ ಹಿಡಿದು ಕಚಕ್ ಎನಿಸಬೇಕು … ಇಷ್ಟೂ ಸ್ಕೆಚ್ ಅವನ ಮನಸ್ಸಿನಲ್ಲಿ ಸಿದ್ಧವಿರುತ್ತದೆ.

    ಆದರೆ, ಅವನಂದುಕೊಂಡಿದ್ದೆಲ್ಲ ಕಾರ್ಯರೂಪಕ್ಕೆ ಬರುತ್ತದಾ? ಅಲ್ಲೇ ಇರೋದು ಕಹಾನಿ ಮೇ ಟ್ವಿಸ್ಟ್. ಆ ಹೆಸರು ಇಲ್ಲದ ಹೀರೋ, ವಿಲನ್ ಮತ್ತು ಹೀರೋಯಿನ್ ಹುಡುಕಿಕೊಂಡು ಎಸ್ಟೇಟ್​ಗೇನೋ ಹೋಗುತ್ತಾನೆ. ಆದರೆ, ಅಲ್ಲಿ ಆಗುವುದೇ ಬೇರೆ. ಅಲ್ಲೇನಾಗುತ್ತದೆ, ಯಾಕಾಗುತ್ತದೆ, ಹೇಗಾಗುತ್ತದೆ ಎಂದು ಸಿನಿಮಾದಲ್ಲೇ ನೋಡಿ ಎಂಜಾಯ್ ಮಾಡಬೇಕು. ಲಾಕ್​ಡೌನ್ ನಂತರ ಪ್ರಾರಂಭವಾದ ಮೊದಲ ಕನ್ನಡ ಚಿತ್ರ ‘ಹೀರೋ’. ಒಂದೇ ಜಾಗದಲ್ಲಿ, ಕಡಿಮೆ ಜನರನ್ನಿಟ್ಟುಕೊಂಡು ಚಿತ್ರೀಕರಣವಾದ ಚಿತ್ರ. ಹಾಗಂತ ಚಿತ್ರ ನೋಡಿದರೆ ಅನಿಸುವುದಿಲ್ಲ. ಏಕೆಂದರೆ, ಇಲ್ಲಿ ಕಥೆಯೇ ಹಾಗಿದೆ. ಬೆಳಗ್ಗಿನಿಂದ ರಾತ್ರಿಯವರೆಗೆ, ಒಂದೇ ಜಾಗದಲ್ಲಿ ಮತ್ತು ಕೆಲವೇ ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಸೀಮಿತವಾದ ಸ್ಥಳ ಮತ್ತು ಪಾತ್ರಗಳಿರುವುದರಿಂದ ಪ್ರೇಕ್ಷಕರಿಗೆ ಬೋರ್ ಆಗದಂತೆ ನೋಡಿಸಿಕೊಂಡು ಹೋಗುವುದು ಸುಲಭದ ವಿಷಯವಲ್ಲ. ಆ ವಿಷಯದಲ್ಲಿ ರಿಷಬ್ ಶೆಟ್ಟಿ ಮತ್ತು ತಂಡದವರು ಗೆದ್ದಿದ್ದಾರೆ. ಟ್ರೇಲರ್ ನೋಡಿ, ಚಿತ್ರ ಹೀಗ್ಹೀಗಿರಬಹುದು ಎಂದು ಊಹಿಸಿದರೆ ಸುಳ್ಳಾಗುತ್ತದೆ. ಚಿತ್ರದಲ್ಲಿ ಹಲವು ತಿರುವುಗಳು ಬಂದು ಟೆನ್ಶನ್ ಹೆಚ್ಚಿಸುತ್ತವೆ. ಹಾಗಂತ ಇದೊಂದು ಬಹಳ ಗಂಭೀರವಾದ ಥ್ರಿಲ್ಲರ್ ಎಂದುಕೊಳ್ಳುವಂತಿಲ್ಲ. ಅಲ್ಲಲ್ಲಿ ನಗಿಸುವುದಕ್ಕೆ ಹಲವು ಸನ್ನಿವೇಶ ಮತ್ತು ಪಾತ್ರಗಳಿವೆ. ಕಣ್ಣೆದುರಿಗೇ ಹೆಣ ಬಿದ್ದಿದ್ದರೂ ಕುಕ್ಕರ್ ವಿಷಿಲ್ ಎಲ್ಲಿ ಎಂದು ಹುಡುಕುವ ಕುಕ್, ‘ಬಾಹುಬಲಿ’ ಚಿತ್ರದ ಕಿಲಿಕಿ ಭಾಷೆ ಮಾತಾಡುವ ಅಜಾನುಬಾಹು, ಜನ ಸಾಯುತ್ತಿದ್ದರೂ ಹಲಸಿನ ಹಣ್ಣು ತಿನ್ನುವುದರಲ್ಲಿ ಬಿಜಿಯಾಗುವ ವೈದ್ಯ … ಹೀಗೆ ಹಲವು ಪಾತ್ರಗಳಿವೆ. ಚಿತ್ರ ಎಷ್ಟೇ ಗಂಭೀರವಾಗಿದ್ದರೂ, ಈ ಪಾತ್ರಗಳು ಮತ್ತು ಕೆಲವು ಸನ್ನಿವೇಶಗಳು ಪ್ರೇಕ್ಷಕರಿಗೆ ನಗು ತರಿಸುತ್ತಲೇ ಇರುತ್ತದೆ. ಹೀಗೆ ಆರಂಭದಿಂದ ಕೊನೆಯವರೆಗೂ ಲವಲವಿಕೆ ಇರುವುದರಿಂದ ಚಿತ್ರ ಶುರುವಾಗುವುದು, ಮುಗಿಯುವುದು ಗೊತ್ತೇ ಆಗುವುದಿಲ್ಲ.

    ಇದೊಂದು ಅಪ್ಪಟ ತಂತ್ರಜ್ಞರ ಚಿತ್ರ. ಏಕೆಂದರೆ, ಚಿತ್ರವನ್ನು ನೋಡಿಸಿಕೊಂಡು ಹೋಗುವಲ್ಲಿ ಕಲಾವಿದರ ಪಾತ್ರ ಎಷ್ಟಿದೆಯೋ, ತಂತ್ರಜ್ಞರ ಪಾತ್ರ ಸಹ ದೊಡ್ಡದೇ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಸಂಕಲನಕಾರ ಪ್ರತೀಕ್ ಶೆಟ್ಟಿ … ಎಲ್ಲರ ಕೆಲಸವೂ ಗಮನಸೆಳೆಯುವಂತಿದೆ. ಅದರಲ್ಲೂ ಮೂಡ್​ಗೆ ತಕ್ಕಂತೆ ಚಿತ್ರವನ್ನು ನೋಡಿಸಿಕೊಂಡು ಹೋಗುವ ಅಜನೀಶ್ ಅವರ ಹಿನ್ನೆಲೆ ಸಂಗೀತ ಹೆಚ್ಚು ಅಂಕ ಪಡೆಯುತ್ತದೆ. ರಿಷಬ್ ಇಲ್ಲಿ ಮತ್ತೊಮ್ಮೆ ‘ಬೆಲ್​ಬಾಟಂ’ನ ದಿವಾಕರನನ್ನು ನೆನಪಿಸುವಂತಹ ಅಭಿನಯ ಮಾಡಿದ್ದಾರೆ. ಗಾನವಿ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ವಿಲನ್ ಆಗಿ ಪ್ರಮೋದ್ ಶೆಟ್ಟಿ ಇಷ್ಟವಾಗುತ್ತಾರೆ. ಒಟ್ಟಾರೆ, ‘ಹೀರೋ’ ಯಾವುದೇ ಸಂದೇಶ, ಗಂಭೀರತೆ ಇಲ್ಲದ ಶುದ್ಧ ಟೈಂಪಾಸ್ ಚಿತ್ರ. ಮನರಂಜನೆಗಾಗಿ ‘ಹೀರೋ’ಗಿರಿ ಅಪ್ಪಿಕೊಳ್ಳಬಹುದು.

    ಕೆಲಸಕ್ಕೆ ಹೋಗಿದ್ದ ಹೆಂಡತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!; ಪತ್ನಿಯ ಶೀಲದ ಕುರಿತು ಅನುಮಾನ?

    ಕಳಸದ ಯುವತಿ ದುಬೈನಲ್ಲಿ ಸಾವು; ಒಂದು ವರ್ಷದ ಹಿಂದಷ್ಟೇ ಆಗಿತ್ತು ವಿವಾಹ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts