More

    ಪ್ರಧಾನಿ ಮೋದಿ ಡ್ರೋನ್​ ಪ್ರತಾಪ್​​ರನ್ನು ಡಿಆರ್​ಡಿಒ ವಿಜ್ಞಾನಿಯಾಗಿ ನೇಮಿಸಿದ್ರಾ? ಏನಿದರ ಸತ್ಯಾಂಶ?

    ನವದೆಹಲಿ: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್​ ಪ್ರತಾಪ್​ರದ್ದೇ ಮಾತು. ಯುವ ವಿಜ್ಞಾನಿ ಎಂದು ನಂಬಿಸಿ ಪ್ರತಾಪ್​ ಕಟ್ಟುಕತೆ ಕಟ್ಟಿದ್ದಾರೆ ಎಂದು ಆರೋಪಿಸಿ ಜಾಲತಾಣದಲ್ಲಿ ಟ್ರೋಲ್​ ಮಾಡಲಾಗುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಾಪ್​ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಯ ವಿಜ್ಞಾನಿಯಾಗಿ ನೇಮಕ ಮಾಡಿದ್ದರು ಎಂಬ ಸಂದೇಶ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಬೂಮ್​ ವೆಬ್​ಸೈಟ್​ ಫ್ಯಾಕ್ಟ್​ಚೆಕ್​ ನಡೆಸಿದೆ.

    ಬೂಮ್​ ವೆಬ್​ಸೈಟ್​ ಜತೆಗೆ ಮಾತನಾಡಿರುವ ಪ್ರತಾಪ್​, ಡಿಆರ್​ಡಿಒ ವಿಜ್ಞಾನಿಯಾಗುವಂತೆ ಪ್ರಧಾನಿ ಮೋದಿ ಅವರು ಯಾವುದೇ ಆಫ್​ರ್​ ನೀಡಿರಲಿಲ್ಲ ಎಂದು ನಿರಾಕರಿಸಿದ್ದಾರೆ. ಗಮನಾರ್ಹವೆಂದರೆ, ಪ್ರತಾಪ್​ ಇನ್ನೂ ಮಾಸ್ಟರ್​ ಡಿಗ್ರಿ ಸಹ ಪೂರ್ಣಗೊಳಿಸಿಲ್ಲ. ಅಲ್ಲದೇ ಡಿಗ್ರಿಯಲ್ಲಿ ಎರಡು ವಿಷಯ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಮುಖ್ಯವಾಗಿ ಡಿಆರ್​ಡಿಒ ಮಟ್ಟದ ಹುದ್ದೆ ಪಡೆಯಲು ಮಾಸ್ಟರ್​ ಡಿಗ್ರಿ ಪಡೆದಿರಲೇಬೇಕು.

    ಇದನ್ನೂ ಓದಿ: ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ

    ಟ್ವಿಟರ್​ ಬಳಕೆದಾರ ಅಮಿತ್​ ಸಿಂಗ್​ ರಜಾವತ್​ ಎಂಬುವರು ಪ್ರತಾಪ್​ ಕುರಿತಾದ ಫೋಟೋವೊಂದನ್ನು ಶೇರ್​ ಮಾಡಿದ್ದು, ಬರೆದಿರುವ ಅಡಿಬರಹದ ಸಾರಾ ಹೀಗಿದೆ. ಪ್ರಧಾನಿ ಮೋದಿಯವರಿಂದ ನೇಮಕವಾದ ಡಿಆರ್​ಡಿಒ ವಿಜ್ಞಾನಿಯ ಆಸಕ್ತಿದಾಯಕ ಕತೆ ಇದು. ಇವರ ಹೆಸರು ಪ್ರತಾಪ್​, ವಯಸ್ಸು ಕೇವಲ 21 ವರ್ಷ. ಇವರು ತಿಂಗಳಲ್ಲಿ 28 ದಿವಸ ವಿದೇಶಕ್ಕೆ ಪ್ರಯಾಣ ಮಾಡುತ್ತಾರೆ. ತಮ್ಮ ಸಂಸ್ಥೆಗೆ ಸೇರಲು ಫ್ರಾನ್ಸ್​ ಸಹ ಆಫರ್​ ನೀಡಿತ್ತು. ತಿಂಗಳಿಗೆ 16 ಲಕ್ಷ ಸಂಬಳ, 5 ಬಿಎಚ್​ಕೆ ಮನೆ ಮತ್ತು 2.5 ಕೋಟಿ ರೂ. ಮೌಲ್ಯದ ಕಾರು ನೀಡುವುದಾಗಿ ಆಫರ್​ ಮಾಡಿತ್ತು. ಆದರೆ, ಈತ ಅದನೆಲ್ಲವನ್ನು ನಿರಾಕರಿಸಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಸೂಕ್ತ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಹಾಗೂ ಡಿಆರ್​ಡಿಒಗೆ ಸೂಚಿಸಿದ್ದಾರೆ ಎಂದು ಬರೆದುಕೊಂಡಿದ್ದರು. ಅಲ್ಲದೆ, ಪ್ರತಾಪ್​ ನಡೆದು ಬಂದು ಹಾದಿಯ ಬಗ್ಗೆಯೂ ಬರೆದುಕೊಂಡಿದ್ದರು.

    ಪ್ರಧಾನಿ ಮೋದಿ ಡ್ರೋನ್​ ಪ್ರತಾಪ್​​ರನ್ನು ಡಿಆರ್​ಡಿಒ ವಿಜ್ಞಾನಿಯಾಗಿ ನೇಮಿಸಿದ್ರಾ? ಏನಿದರ ಸತ್ಯಾಂಶ?

    ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದ್ದೇನು?
    ಪ್ರತಾಪ್​ ಡಿಆರ್​ಡಿಒ ವಿಜ್ಞಾನಿ ಎಂದು ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಹುಡುಕಾಡಿದಾಗ ಪ್ರತಾಪ್​ ಕುರಿತಾದ ಕೆಲ ವಿವರ ಬಂದಿದೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದರ ಡ್ರೋನ್​ ವಿಜ್ಞಾನಿ ಎಂದು ವೆಬ್​ಸೈಟ್​ ಒಂದರಲ್ಲಿ ಬಂದ ವರದಿ ಪತ್ತೆಯಾಗಿದೆ. ಆ ವರೆದಿಯಲ್ಲಿ ಕಳೆದ ವರ್ಷದ ಆಗಸ್ಟ್​ನಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದ ವೇಳೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಡ್ರೋನ್​ ಸಹಾಯ ನೀಡಿದ್ದಾಗಿ ಉಲ್ಲೇಖವಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋ ಸಹ ವೈರಲ್​ ಆಗಿದೆ.

    ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಬಡತನದ ಬೇಗೆ ಕಟ್ಟುಕಥೆ: ಅವನ ಕುಟುಂಬ ಹಿನ್ನೆಲೆ ಏನು ಗೊತ್ತಾ?

    ಇದು ಸತ್ಯವೇ ಎಂದು ತಿಳಿಯಲು ಬೂಮ್​ ಮಾಧ್ಯಮ ಪ್ರತಾಪ್​ ಅವರನ್ನು ಸಂಪರ್ಕಿಸಿದೆ. ಡಿಆರ್​ಡಿಒ ವಿಜ್ಞಾನಿ ಎಂಬುದನ್ನು ಅಲ್ಲಗೆಳೆದ ಪ್ರತಾಪ್​ ಪ್ರವಾಹ ಸಮಯಲ್ಲಿ ಡ್ರೋನ್​ ನೀಡಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲದೆ, ಫ್ರಾನ್ಸ್​ನಿಂದ ಆಫರ್​ ಬಂದಿದ್ದಾಗಿಯೂ ಒಪ್ಪಿಕೊಂಡು ನಾನು ಬೆಂಗಳೂರಲ್ಲಿ ಲ್ಯಾಬ್​ ಅಳವಡಿಸಬೇಕೆಂಬ ಕಾರಣಕ್ಕೆ ಆಫರ್​ ತಿರಸ್ಕರಿಸಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಸದ್ಯ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಪ್ರತಾಪ್​ ತಿಳಿಸಿದ್ದರು.

    ಇದಲ್ಲದೆ, ಭಾರತ ಸರ್ಕಾರದ ನೇಮಕಾತಿ ಹಾಗೂ ಮೌಲ್ಯಮಾಪನ ಕೇಂದ್ರದ ಪ್ರಕಾರ, ಪ್ರವೇಶ ಹಂತದಲ್ಲಿ ವಿಜ್ಞಾನಿಯಾಗಿ ಡಿಆರ್​ಡಿಒ ಸಂಸ್ಥೆಗೆ ನೇಮಕಗೊಳ್ಳಲು ವಿಜ್ಞಾನ ವಿಷಯಗಳು, ಗಣಿತ ಅಥವಾ ಮನೋವಿಜ್ಞಾನ ಅಥವಾ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪ್ರಥಮ ದರ್ಜೆ ಪದವಿ ಹೊಂದಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲೋಹಶಾಸ್ತ್ರ ಅಥವಾ ಸಮಾನ ಅರ್ಹತೆಯನ್ನು ಹೊಂದಿರಬೇಕು.

    ಆದರೆ, ಪ್ರತಾಪ್​ ಈ ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಇನ್ನು ಮಾಸ್ಟರ್​ ಡಿಗ್ರಿಯ ಹಂತವನ್ನೇ ತಲುಪಿಲ್ಲ. ಮಾಸ್ಟರ್​ ಡಿಗ್ರಿ ಮಾಡಿದರೆ ಡಿಆರ್​ಡಿಒದಲ್ಲಿ ಕೆಲಸ ಮಾಡುವುದಾಗಿಯೂ ಹೇಳಿಕೊಂಡಿದ್ದರು.

    ಇದನ್ನೂ ಓದಿ: ‘ಕರ್ನಾಟಕದ ನೆರೆ ಹಾವಳಿಯಲ್ಲೂ ನನ್ನದೇ ಡ್ರೋನ್‌ ಬಳಕೆ- ಸತ್ಯ ಶೀಘ್ರ ಬಹಿರಂಗಪಡಿಸುವೆ‘

    ಬಯಲಾಯಿತು ಪ್ರತಾಪ್​ ಅಸಲಿಯತ್ತು
    ಇದೀಗ ಪ್ರತಾಪ್​ ಇಷ್ಟು ದಿನ ಹೇಳಿರುವುದೆಲ್ಲ ಕಟ್ಟುಕತೆ ಎಂಬುದು ಬಹಿರಂಗವಾಗಿದೆ. ಅದ್ಭುತವಾದ ಡ್ರೋನ್ ಕಂಡುಹಿಡಿದಿರುವುದಾಗಿ ಹೇಳುವ ಪ್ರತಾಪ್, ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿಲ್ಲ. ನೆರವು ನೀಡಿದ ಮಠದ ಶ್ರೀಗಳು ಸುತ್ತೂರು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ ಹೇಳಿದಾಗ ಅದರ ಪೇಟೆಂಟ್ ಮಿಸ್ ಆಗಿಬಿಡುತ್ತದೆ ಎಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನ ಡ್ರೋನ್ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳನ್ನು ಕೂಡ ಸಂಸ್ಥೆಗಾಗಲಿ, ಮಾಧ್ಯಮಗಳಿಗಾಗಲಿ ಈತನಕ ತೋರಿಸಿಲ್ಲ. ತನ್ನ ವಿರುದ್ಧ ಬಗ್ಗೆ ಪ್ರತಾಪ್​ನನ್ನು ಸಂಪರ್ಕಿಸಲು ವಿಜಯವಾಣಿ ಹಲವು ಬಾರಿ ಮೊಬೈಲ್​ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಇನ್ನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಾನು ಹೇಳಿದ್ದು ಸತ್ಯವೇ. ಮುಂದಿನ ದಿನಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲದಕ್ಕೂ ಉತ್ತರ ನೀಡುವೇ ಎಂದಿದ್ದಾರೆ. (ಏಜೆನ್ಸೀಸ್​)

    ಯಾಮಾರಿಬಿಟ್ಟೆನಪ್ಪಾ… ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ: ಜಗ್ಗೇಶ್‌ ನೋವಿನ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts