More

    ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ

    ಮಂಡ್ಯ: ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿದ್ದಾನೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್.

    ಕೆಲ ದಿನಗಳ ಹಿಂದೆ ಈತನ ಸಾಧನೆ ಕುರಿತು ಚರ್ಚೆ ನಡೆದಿತ್ತು. ಈತ ಹಲವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ. ಆತನ ಭಾಷಣಗಳನ್ನು ಯೂಟ್ಯೂಬ್​ನಲ್ಲಿ ಲಕ್ಷಾಂತರ ಜನ ವೀಕ್ಷಿಸಿ, ಶಹಬ್ಬಾಸ್​ಗಿರಿ ಕೊಟ್ಟಿದ್ದರು. ದೇಶಕ್ಕಾಗಿ ದೊಡ್ಡ ಕೊಡುಗೆ ನೀಡುತ್ತಿದ್ದಾನೆ, ಆತನ ದೇಶಪ್ರೇಮ ಎಲ್ಲರಿಗೂ ಮಾದರಿ ಎಂದು ಹಲವರು ಲಕ್ಷಗಟ್ಟಲೇ ಹಣ ಕೊಟ್ಟು ಪ್ರೋತ್ಸಾಹಿಸಿದ್ದರು. ಆದರೆ, ಆತ ಅಸಲಿ ವಿಜ್ಞಾನಿಯೇ ಅಲ್ಲ. ಅಸಲಿಗೆ ಬಿಎಸ್​ಸಿ ಪದವಿಯನ್ನೂ ಪೂರ್ಣಗೊಳಿಸಿಲ್ಲ ಎಂಬ ವಿಚಾರ ಈಗ ಬಯಲಾಗಿದೆ.

    ‘ಮಿಕ್ಸಿಯಲ್ಲಿನ ಮೋಟಾರ್ ಹಾಗೂ ಟಿವಿಯ ಬಿಡಿಭಾಗಗಳನ್ನು ಬಳಸಿ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನ್ನ ಡ್ರೋನ್​ಗೆ 2018ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್​ಸ್ಟೀನ್ ಚಿನ್ನದ ಪದಕ, ಅಂತಾರಾಷ್ಟ್ರೀಯ ಡ್ರೋನ್ ಎಕ್ಸ್​ಪೋದಲ್ಲಿ ಗೋಲ್ಡ್ ಮೆಡಲ್, ಸಿಬಿಟ್​ನಲ್ಲಿ ಮೊದಲ ಬಹುಮಾನ ಬಂದಿದೆ. 2017ರ ಜಪಾನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ರೋಬೋಟಿಕ್ ಪ್ರದರ್ಶನದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ನನಗೆ ಸುಮಾರು 87 ದೇಶಗಳು ಕೆಲಸಕ್ಕೆ ಆಫರ್ ನೀಡಿವೆ.

    ಆದರೆ, ನನ್ನ ಸೇವೆ ಏನಿದ್ದರೂ ನನ್ನ ದೇಶಕ್ಕೆ ಮಾತ್ರ’ ಎಂದು ಪ್ರತಾಪ್ ಹೇಳುತ್ತಿದ್ದ. ಹಲವು ಬೃಹತ್ ವಿದ್ಯಾಸಂಸ್ಥೆಗಳು ಅಭಿನಂದಿಸಿ, ಆತನ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿ ಸಿದ್ದವು. ‘ಜರ್ಮನಿಗೆ ಹೋಗಲು ಹಣ ಇರಲಿಲ್ಲ. ನನ್ನ ತಾಯಿ ತಾಳಿ ಕೊಟ್ಟರು. ನಾನು 300 ಕೆಜಿ ಭಾರವನ್ನು ಡ್ರೋನ್​ನಲ್ಲಿ ಸಾಗಿಸಿದೆ…’ ಹೀಗೆ ಕಥೆ ಹೇಳುತ್ತಿದ್ದ ಪ್ರತಾಪ್, ತಾನು ತಯಾರಿಸಿರುವ ಡ್ರೋನ್​ಗಳನ್ನು ಈವರೆಗೆ ಎಲ್ಲಿಯೂ ಪ್ರದರ್ಶನ ಮಾಡಿಲ್ಲ.

    ಐಷಾರಾಮಿ ಜೀವನ

    ‘ದೇಶಕ್ಕೆ ಕೊಡುಗೆ ನೀಡಬೇಕೆಂದು ಪಣ ತೊಟ್ಟಿದ್ದೇನೆ’ ಎಂದು ಭಾಷಣ ಬಿಗಿಯುತ್ತಿದ್ದ ಪ್ರತಾಪ್​ಗೆ ಹಣ ನೀರಿನಂತೆ ಹರಿದು ಬಂದಿದೆ. ಆತನ ಸಂಶೋಧನೆಗೆ ಸಹಾಯವಾಗಲಿ ಎಂದು ಜನತೆ ಕಣ್ಣುಮುಚ್ಚಿಕೊಂಡು ಹಣ ನೀಡಿದ್ದಾರೆ. ಹಣದ ಹರಿವು ಹೆಚ್ಚಳವಾಗುತ್ತಿದ್ದಂತೆ ಆತ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿ ಮನೆ ಖರೀದಿಸಿದ್ದಾನೆ. ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎನ್ನಲಾಗಿದೆ.

    ನನ್ನ ಮಗ ಪ್ರತಾಪ್ ಡ್ರೋನ್ ಸಂಶೋಧನೆ ಮಾಡಿರುವುದು ನಿಜ. ಕೆಲವರು ಬೇಕಂತ ಅಪಪ್ರಚಾರ ಮಾಡುತ್ತಿದ್ದಾರೆ. ಸದ್ಯದಲ್ಲೇ ಆತ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರಲಿದ್ದಾನೆ.

    | ಮರಿಮಾದಯ್ಯ ಅಲಿಯಾಸ್ ರಮೇಶ್ ಪ್ರತಾಪ್ ತಂದೆ

    ಯಾರಿಗೂ ಡ್ರೋನ್ ತೋರಿಸಿಲ್ಲ

    ಅದ್ಭುತವಾದ ಡ್ರೋನ್ ಕಂಡುಹಿಡಿದಿರುವುದಾಗಿ ಹೇಳುವ ಪ್ರತಾಪ್, ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿಲ್ಲ. ನೆರವು ನೀಡಿದ ಮಠದ ಶ್ರೀಗಳು ಸುತ್ತೂರು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ ಹೇಳಿದಾಗ ಅದರ ಪೇಟೆಂಟ್ ಮಿಸ್ ಆಗಿಬಿಡುತ್ತದೆ ಎಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನ ಡ್ರೋನ್ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳನ್ನು ಕೂಡ ಸಂಸ್ಥೆಗಾಗಲಿ, ಮಾಧ್ಯಮಗಳಿಗಾಗಲಿ ಈತನಕ ತೋರಿಸಿಲ್ಲ.

    ಕರೆ ಸ್ವೀಕರಿಸುತ್ತಿಲ್ಲ: ಪ್ರತಾಪ್​ನನ್ನು ಸಂರ್ಪಸಲು ವಿಜಯವಾಣಿ ಹಲವು ಬಾರಿ ಮೊಬೈಲ್​ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

    ಡ್ರೋನ್ ಸಂಶೋಧನೆ ನಡೆಸಿರುವುದಾಗಿ ಹೇಳಿರುವ ಎನ್.ಎಂ. ಪ್ರತಾಪ್ ಈಗ ನಮ್ಮ ಸಂಪರ್ಕದಲ್ಲಿಲ್ಲ. ಬಿಎಸ್ಸಿಯಲ್ಲಿ ಎರಡು ವಿಷಯವನ್ನು ಉಳಿಸಿಕೊಂಡಿದ್ದು, ಪದವಿ ಪೂರ್ಣಗೊಂಡಿಲ್ಲ. ಊಟಿ ರಸ್ತೆಯ ಜೆಎಸ್​ಎಸ್ ಕಾಲೇಜಿನಲ್ಲಿ ಆತ ವ್ಯಾಸಂಗ ಮಾಡುತ್ತಿದ್ದ. ಜಪಾನ್​ನಲ್ಲಿ ಭಾಗವಹಿಸಿ ಬಹುಮಾನ ಬಂದಿದೆ, ಜರ್ಮನ್​ಗೆ ಹೋಗಲು ಡ್ರೋನ್ ತಯಾರು ಮಾಡಬೇಕು ನೆರವು ನೀಡುವಂತೆ ಕೇಳಿದ್ದ. ಪ್ರತಿಭೆ ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನಿರ್ದೇಶನದ ಮೇರೆಗೆ ಹಂತ ಹಂತವಾಗಿ ನೆರವು ನೀಡಲಾಯಿತು. ಆದರೆ ಈಗ ಏನಾಗಿದೆ ಎನ್ನುವುದು ಸರಿಯಾಗಿ ನಮಗೆ ಗೊತ್ತಿಲ್ಲ.

    | ಪ್ರೊ.ಬಿ.ವಿ.ಸಾಂಬಶಿವಯ್ಯ ಮುಖ್ಯ ಕಾರ್ಯ ನಿರ್ವಾಹಕರು, ಜೆಎಸ್​ಎಸ್ ಕಾಲೇಜು ಮೈಸೂರು

    ಪ್ರತಾಪ್ ಮಾತಿನ ಮೂಲಕ ಜನರಿಗೆ ಪಂಗನಾಮ ಹಾಕಿದ್ದಾನೆ. ಮಾತೇ ಅವನ ದೊಡ್ಡ ಸಾಧನೆ. ಡ್ರೋನ್ ಅನ್ನು ಮಠಕ್ಕೆ ತಂದು ತೋರಿಸಿಲ್ಲ. ನೀಡಿದ ಹಣಕ್ಕೆ ಲೆಕ್ಕ ಕೊಟ್ಟಿಲ್ಲ. ಅದನ್ನು ಕೇಳುತ್ತಾರೆಂಬ ಕಾರಣದಿಂದ ಮಠ, ವಿದ್ಯಾಸಂಸ್ಥೆಯತ್ತ ಸುಳಿಯುತ್ತಿಲ್ಲ.

    | ಹೆಸರು ಹೇಳಲಿಚ್ಛಿಸದ ಉಪನ್ಯಾಸಕ

    | ಮಾದರಹಳ್ಳಿ ರಾಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts