More

    ಅತಿಸಾರ ಭೇದಿ ನಿಯಂತ್ರಣಕ್ಕೆ ಅಭಿಯಾನ; 1.54 ಲಕ್ಷ ಮಕ್ಕಳಿಗೆ ಓಆರ್‌ಎಸ್

    ಚಿತ್ರದುರ್ಗ: ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಒಆರ್‌ಎಸ್ ಮತ್ತು ಮಾತ್ರೆಗಳನ್ನು ಮನೆ-ಮನೆಗೆ ತಲುಪಿಸಿ, ಅತಿಸಾರ ಭೇದಿ ನಿಯಂತ್ರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ಆ.1ರಿಂದ 14 ರವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಒಗ್ಗೂಡಿ ಯಶಸ್ವಿಗೊಳಿಸಬೇಕು ಎಂದು ತಾಕೀತು ಮಾಡಿದರು.

    ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, ಕಳೆದ ಏಳು ವರ್ಷಗಳಿಂದಲೂ ಈ ಕಾರ್ಯಕ್ರಮ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಅತಿಸಾರ ನಿಯಂತ್ರಣ ಪಾಕ್ಷಿಕ ಅಂಗವಾಗಿ ತಾಲೂಕು ಮಟ್ಟದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೆಚ್ಚು ಮಾಹಿತಿ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕಿದೆ ಎಂದರು.

    ಜಂತುಹುಳು ನಿಯಂತ್ರಣ ಕಾರ್ಯಕ್ರಮ:
    ರಾಷ್ಟೀಯ ಜಂತುಹುಳು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಗಸ್ಟ್ 10ರಂದು ಆಚರಿಸುತ್ತಿದ್ದು, 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಅಲ್ಬಂಡ್‌ಜೋಲ್ ಮಾತ್ರೆ ವಿತರಿಸಬೇಕು. ಯಾವುದೇ ಮಕ್ಕಳು ಇದರಿಂದ ಹೊರಗುಳಿಯಬಾರದು. ಪ್ರತಿಯೊಬ್ಬರಿಗೂ ಮಾತ್ರೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ ನೀಡಿದರು.

    1.54 ಲಕ್ಷ ಮಕ್ಕಳಿಗೆ ಓಆರ್‌ಎಸ್:
    ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1.54 ಲಕ್ಷ ಮಕ್ಕಳನ್ನು ಗುರುತಿಸಿದ್ದು, ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಓಆರ್‌ಎಸ್ ದ್ರಾವಣ, ಝಿಂಕ್ ಮಾತ್ರೆಗಳನ್ನು ನೀಡಲು ಕ್ರಮ ವಹಿಸಲಾಗಿದೆ. ಮಕ್ಕಳಲ್ಲಿ ತೀವ್ರವಾದ ಅತಿಸಾರ ಭೇದಿ ಕಂಡುಬಂದರೆ ತಾಯಂದಿರು ಓಆರ್‌ಎಸ್ ದ್ರಾವಣವನ್ನು ಹೇಗೆ ತಯಾರಿಸಿ ಕೊಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಡಾ.ಕುಮಾರಸ್ವಾಮಿ ತಿಳಿಸಿದರು.

    ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ:
    ಜಿಲ್ಲೆಯಲ್ಲಿ ಆ.16ರಿಂದ ಸೆಪ್ಟೆಂಬರ್ 3ರವರೆಗೆ 14 ದಿನಗಳ ಕಾಲ ಕುಷ್ಟ ರೋಗ ಪತ್ತೆ ಹಚ್ಚಲು ಪಲ್ಸ್ ಪೊಲಿಯೋ ಮಾದರಿಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು ಇದರ ಸಮೀಕ್ಷೆ ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲ ಸಮೀಕ್ಷೆಗಳಿಗಿಂತ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ ವಿಭಿನ್ನವಾಗಿರಲಿದೆ ಎಂದು ಕುಷ್ಟರೋಗ ನಿವಾರಣಾಧಿಕಾರಿ ಡಾ.ರೂಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts