More

    ವಸತಿ ನಿಲಯದಲ್ಲಿ ತಪ್ಪದ ವಿದ್ಯಾರ್ಥಿಗಳ ನರಕಯಾತನೆ

    ಧೂಳಖೇಡ: ಚಡಚಣ ತಾಲೂಕಿನ ಧೂಳಖೇಡ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಮೂಲ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವಂತಾಗಿದೆ.
    ಗ್ರಾಮದಲ್ಲಿನ ವಸತಿ ನಿಲಯಯದಲ್ಲಿ 72 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಬಳಿಯ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಹೋಗಿದ್ದು, ಅದನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ. ಆದರೆ, ಅಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
    ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಶೌಚಗೃಹದ ವ್ಯವಸ್ಥೆ ಇಲ್ಲವಾಗಿದೆ. ಅನಿವಾರ್ಯವಾಗಿ ಒಂದು ಕಿಮೀ ದೂರ ಬಯಲು ಶೌಚಕ್ಕೆ ತೆರಳಬೇಕಿದೆ. ಇನ್ನೂ ರಾತ್ರಿ ವೇಳೆ ಶೌಚಕ್ಕಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ನಿಲಯದಲ್ಲಿ ಸ್ನಾನದ ಕೋಣೆಗಳು ಇಲ್ಲ. ಬಯಲಿನಲ್ಲೇ ಸ್ನಾನ ಮಾಡಬೇಕಿದೆ. ಅದು ನಿತ್ಯ ತಣ್ಣೀರಿನ ಸ್ನಾನವೇ ಗತಿಯಾಗಿದೆ.

    ಕಳಪೆ ಆಹಾರ

    ನಿಲಯದಲ್ಲಿ ಊಟದ ಮೇನು ಪ್ರಕಾರ ಪೌಷ್ಟಿಕ ಆಹಾರ ನೀಡುತ್ತಿಲ್ಲ. ವಿದ್ಯಾರ್ಥಿಗಳು ಊಟದ ಬಗ್ಗೆ ಪ್ರಶ್ನಿಸಿದರೆ ಅಡುಗೆ ಸಿಬ್ಬಂದಿ ಹೊಡೆಯುತ್ತಾರೆ ಎಂಬುದು ವಿದ್ಯಾರ್ಥಿಗಳ ಆರೋಪ. ನಿಲಯದ ಸಿಪಾಯಿ, ಅಡುಗೆ ಸಹಾಯಕಿ ಒಂದೇ ಮನೆಯವರು ಹಾಗೂ ಬಾಡಿಗೆ ಕಟ್ಟಡ ಅವರದ್ದೇ ಆಗಿದ್ದರಿಂದ ಭಯದಿಂದ ಅವರು ನೀಡಿದ ಊಟವನ್ನೇ ಮಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
    ಅಲ್ಲದೇ, ರಾತ್ರಿ ವೇಳೆ ಇಲ್ಲಿ ಕಾವಲುಗಾರರೂ ಇಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಭಯದಲ್ಲೇ ನಿದ್ರಿಸುವಂತಾಗಿದೆ.
    ಅಧಿಕಾರಿಗಳ ಸುಳಿವೇ ಇಲ್ಲ
    ಸ್ವಂತ ಕಟ್ಟಡವಿಲ್ಲದೆ ಒಂದು ವರ್ಷದಿಂದ ಬಾಡಗೆ ಮನೆಯಲ್ಲಿ ವಿದ್ಯಾರ್ಥಿಗಳು ಸೌಲಭ್ಯವಂಚಿತವಾಗಿವಾಗಿದ್ದರೂ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಅಧಿಕಾರಿಗಳು ಭೇಟಿ ನೀಡಿ ಸ್ವಂತ ಕಟ್ಟಡಕ್ಕೆ ಸರಿಯಾದ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಿಕೊಂಡಬೇಕು.

    ಸ್ವಂತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಸಾಕಷ್ಟು ಸಲ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಶಿರನಾಳ ಗ್ರಾಮದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಕಟ್ಟಡದ ಸ್ಥಳ ಗುರುತು ಮಾಡಿ ಮಂಜೂರಾತಿಗೆ ಕಳುಹಿಸಲಾಗಿದೆ. ಶೀಘ್ರ ಸಮಸ್ಯೆಗಳನ್ನು ಪರಿಹರಿಸುವೆ.
    ಪುಂಡಲೀಕ ಗೊಂದಳಿ, ನಿಲಯಪಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts