More

    ಐಸಿಸಿ ದಶಕದ ತಂಡಗಳಿಗೆ ಭಾರತೀಯರದ್ದೇ ಸಾರಥ್ಯ, ಪಾಕ್ ಕ್ರಿಕೆಟಿಗರಿಗೆ ನಿರಾಸೆ!

    ನವದೆಹಲಿ: ಐಸಿಸಿ ಭಾನುವಾರ ಪ್ರಕಟಿರುವ ದಶಕದ ತಂಡಗಳ ನಾಯಕತ್ವ ಭಾರತೀಯರಿಗೆ ಒಲಿದಿದೆ. ಏಕದಿನ ಮತ್ತು ಟಿ20 ತಂಡಗಳಿಗೆ ಎಂಎಸ್ ಧೋನಿ ನಾಯಕರಾಗಿದ್ದರೆ, ವಿರಾಟ್ ಕೊಹ್ಲಿ ಟೆಸ್ಟ್ ತಂಡಕ್ಕೆ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ಮೂರೂ ಪ್ರಕಾರದ ದಶಕದ ತಂಡಗಳಲ್ಲೂ ಸ್ಥಾನ ಪಡೆದಿರುವ ವಿಶ್ವದ ಏಕೈಕ ಆಟಗಾರರೆನಿಸಿದ್ದಾರೆ. ದಶಕದ ಟಿ20, ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಕ್ರಮವಾಗಿ 4, 3 ಮತ್ತು 2 ಭಾರತೀಯರು ಸ್ಥಾನ ಪಡೆದಿದ್ದಾರೆ.

    ಈ ವರ್ಷ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ೋಷಿಸಿದ ಧೋನಿ, ಏಕದಿನ-ಟಿ20 ತಂಡಗಳಿಗೆ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ರೋಹಿತ್ ಶರ್ಮ ಏಕದಿನ ಮತ್ತು ಟಿ20 ತಂಡಗಳಲ್ಲಿ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ಟಿ20 ತಂಡದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಮತ್ತು ಟೆಸ್ಟ್ ತಂಡದಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಇದ್ದಾರೆ.

    ಇದನ್ನೂ ಓದಿ: ಕೋಟ್ಲಾ ಸ್ಟೇಡಿಯಂನಿಂದ ತನ್ನದೇ ಹೆಸರು ತೆಗೆಸಲು ಬಿಷನ್ ಸಿಂಗ್ ಬೇಡಿ ಹೋರಾಟ!

    ಕಳೆದ 10 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಆಟಗಾರರನ್ನು ಕ್ರಿಕೆಟ್ ಪ್ರೇಮಿಗಳ ಆನ್‌ಲೈನ್ ಮತದಾನ ಪ್ರಕ್ರಿಯೆಯಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ವದೆಲ್ಲೆಡೆ 15 ಲಕ್ಷ ಅಭಿಮಾನಿಗಳು 53 ಲಕ್ಷ ಮತಗಳನ್ನು ಚಲಾಯಿಸಿದ್ದಾರೆ.

    ಮೂರು ತಂಡಗಳಲ್ಲಿ ಪಾಕ್ ಕ್ರಿಕೆಟಿಗರಿಲ್ಲ!
    ದಶಕದ ತಂಡಗಳ ಆಯ್ಕೆ ಪ್ರಕ್ರಿಯೆ ವೇಳೆ ಕಳೆದ 10 ವರ್ಷಗಳ ಪೈಕಿ ಕನಿಷ್ಠ 5 ವರ್ಷಗಳಲ್ಲಿ ಸ್ಥಿರ ನಿರ್ವಹಣೆ ತೋರಿರುವ ಆಟಗಾರರನ್ನು ಪರಿಗಣಿಸಲಾಗಿದೆ. ಆದರೆ ಈ ಸಮಯದಲ್ಲಿ ಪಾಕಿಸ್ತಾನದ ಒಬ್ಬನೇ ಒಬ್ಬ ಆಟಗಾರನೂ ಸ್ಥಿರ ನಿರ್ವಹಣೆ ತೋರಿಲ್ಲ. ಹೀಗಾಗಿ ಟೆಸ್ಟ್, ಏಕದಿನ, ಟಿ20 ತಂಡಗಳಲ್ಲಿ ಪಾಕಿಸ್ತಾನದ ಒಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ. ಟಿ20 ತಂಡದಲ್ಲಿ ಭಾರತದ ಗರಿಷ್ಠ ನಾಲ್ವರು ಆಟಗಾರರು ಸ್ಥಾನ ಪಡೆದು ಪ್ರಾಬಲ್ಯ ಸಾಧಿಸಿದ್ದರೆ, ಇಂಗ್ಲೆಂಡ್‌ನ ಒಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ. ಏಕದಿನ ತಂಡದಲ್ಲೂ ಭಾರತದಿಂದ ಗರಿಷ್ಠ ಮೂವರು ಸ್ಥಾನ ಪಡೆದಿದ್ದಾರೆ. ಟೆಸ್ಟ್ ತಂಡದಲ್ಲಿ ಮಾತ್ರ ಇಂಗ್ಲೆಂಡ್ ಪ್ರಾಬಲ್ಯ ಸಾಧಿಸಿದ್ದು, ಗರಿಷ್ಠ ನಾಲ್ವರು (ಅಲಸ್ಟೈರ್ ಕುಕ್, ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್‌ಸನ್) ಸ್ಥಾನ ಪಡೆದಿದ್ದಾರೆ. ಟೆಸ್ಟ್ ತಂಡಕ್ಕೆ ಶ್ರೀಲಂಕಾದ ಕುಮಾರ ಸಂಗಕ್ಕರ ವಿಕೆಟ್ ಕೀಪರ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಮತ್ತು ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಏಕದಿನ-ಟಿ20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟಿಗರು (ಕ್ರಿಸ್ ಗೇಲ್, ಕೈರಾನ್ ಪೊಲ್ಲಾರ್ಡ್) ಟಿ20 ತಂಡದಲ್ಲಿ ಮಾತ್ರ ಇದ್ದಾರೆ.

    ಇದನ್ನೂ ಓದಿ: ನ್ಯೂಜಿಲೆಂಡ್‌ಗೆ ಬಲ ತುಂಬಿದ ಕೇನ್ ವಿಲಿಯಮ್ಸನ್ 23ನೇ ಶತಕ

    ಮಹಿಳಾ ತಂಡದಲ್ಲಿ ಮಿಥಾಲಿ, ಜೂಲನ್
    ಮಹಿಳೆಯರ ದಶಕದ ಏಕದಿನ ತಂಡದಲ್ಲಿ ಭಾರತದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಸ್ಥಾನ ಪಡೆದಿದ್ದಾರೆ. ದಶಕದ ಟಿ20 ತಂಡದಲ್ಲಿ ಭಾರತದ ಹರ್ಮಾನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಿ20 ತಂಡದಲ್ಲಿ ಸ್ಫೋಟಕ ಎಡಗೈ ಬ್ಯಾಟುಗಾರ್ತಿ ಸ್ಮತಿ ಮಂದನಾ ಸ್ಥಾನ ಪಡೆಯದಿರುವುದು ಅಚ್ಚರಿಯಾಗಿದೆ.

    ಐಸಿಸಿ ದಶಕದ ತಂಡಗಳು (ಬ್ಯಾಟಿಂಗ್ ಕ್ರಮಾಂಕ ಪ್ರಕಾರ):
    ಟೆಸ್ಟ್: ಅಲಸ್ಟೈರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ (ನಾಯಕ), ಸ್ಟೀವನ್ ಸ್ಮಿತ್, ಕುಮಾರ ಸಂಗಕ್ಕರ (ವಿ.ಕೀ), ಬೆನ್ ಸ್ಟೋಕ್ಸ್, ಆರ್. ಅಶ್ವಿನ್, ಡೇಲ್ ಸ್ಟೈನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್‌ಸನ್.
    ಏಕದಿನ: ರೋಹಿತ್ ಶರ್ಮ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಶಕೀಬ್ ಅಲ್ ಹಸನ್, ಧೋನಿ (ನಾಯಕ, ವಿ.ಕೀ), ಬೆನ್ ಸ್ಟೋಕ್ಸ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಇಮ್ರಾನ್ ತಾಹಿರ್, ಲಸಿತ್ ಮಾಲಿಂಗ.
    ಟಿ20: ರೋಹಿತ್ ಶರ್ಮ, ಕ್ರಿಸ್ ಗೇಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಗ್ಲೆನ್ ಮ್ಯಾಕ್ಸ್‌ವೆಲ್, ಎಂಎಸ್ ಧೋನಿ (ನಾಯಕ, ವಿ.ಕೀ), ಕೈರಾನ್ ಪೊಲ್ಲಾರ್ಡ್, ರಶೀದ್ ಖಾನ್, ಜಸ್‌ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ.
    ಮಹಿಳೆಯರ ಏಕದಿನ: ಅಲಿಸ್ಸಾ ಹೀಲಿ, ಸೂಜಿ ಬೇಟ್ಸ್, ಮಿಥಾಲಿ ರಾಜ್, ಮೆಗ್ ಲ್ಯಾನಿಂಗ್ (ನಾಯಕಿ), ಸ್ಟೆಫಾನಿ ಟೇಲರ್, ಸಾರಾ ಟೇಲರ್ (ವಿ.ಕೀ), ಎಲ್ಲಿಸ್ ಪೆರ‌್ರಿ, ಡೇನ್ ವಾನ್ ನೈಕರ್ಕ್, ಮರಿಜಾನೆ ಕಾಪ್, ಜೂನಲ್ ಗೋಸ್ವಾಮಿ, ಅನಿಸಾ ಮೊಹಮದ್.
    ಮಹಿಳೆಯರ ಟಿ20: ಅಲಿಸ್ಸಾ ಹೀಲಿ (ವಿ.ಕೀ), ಸೋಫಿ ಡಿವೈನ್, ಸೂಜಿ ಬೇಟ್ಸ್, ಮೆಗ್ ಲ್ಯಾನಿಂಗ್ (ನಾಯಕಿ), ಹರ್ಮಾನ್‌ಪ್ರೀತ್ ಕೌರ್, ಸ್ಟೆಫಾನಿ ಟೇಲರ್, ಡಿಯೇಂಡ್ರಾ ಡಾಟಿನ್, ಎಲ್ಲಿಸ್ ಪೆರ‌್ರಿ, ಅನ್ಯಾ ಶ್ರುಬ್ಸೋಲ್, ಮೆಗನ್ ಸ್ಕಾಟ್, ಪೂನಂ ಯಾದವ್.

    ಇದನ್ನೂ ಓದಿ: ತೆಂಡುಲ್ಕರ್ ಪುತ್ರ ಅರ್ಜುನ್‌ಗೆ ಈ ಬಾರಿ ಮುಂಬೈ ತಂಡದ ಬಾಗಿಲು ತೆರೆಯುವುದು ಡೌಟ್!

    ಇಂದು ವೈಯಕ್ತಿಕ ಪ್ರಶಸ್ತಿ ಪ್ರಕಟ
    ದಶಕದ ಐಸಿಸಿ ಏಕದಿನ, ಟಿ20, ಟೆಸ್ಟ್ ಆಟಗಾರರ ಸಹಿತ ವೈಯಕ್ತಿಕ ಪ್ರಶಸ್ತಿಗಳನ್ನು ಐಸಿಸಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಿದೆ. ವರ್ಚುವಲ್ ಸಮಾರಂಭದ ಮೂಲಕ ಈ ಪ್ರಶಸ್ತಿಗಳ ವಿತರಣೆಯೂ ಆಗಲಿದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಅವರು ದಶಕದ ಆಟಗಾರ ಸಹಿತ ಎಲ್ಲ 4 ಪ್ರಶಸ್ತಿ ಗೆಲುವಿನ ರೇಸ್‌ನಲ್ಲಿದ್ದಾರೆ.

    ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

    ಅಜಿಂಕ್ಯ ರಹಾನೆ ಶತಕದಾಟ, ಭಾರತಕ್ಕೆ ಇನಿಂಗ್ಸ್ ಮುನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts