More

    ಸಿಬಿಐ ಹೆಸರಲ್ಲೂ ಧೋಖಾ; ಎಂಟು ರಾಜ್ಯಗಳಲ್ಲಿ ವಂಚನೆ

    ಬೆಂಗಳೂರು: ಆದಾಯ ತೆರಿಗೆ, ಜೀವ ವಿಮೆ, ಸರ್ಕಾರಿ ನೌಕರಿ ಹೆಸರಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಕಿಡಿಗೇಡಿಗಳೀಗ ಭ್ರಷ್ಟರು, ಕ್ರಿಮಿನಲ್​ಗಳಿಗೆ ದುಃಸ್ವಪ್ನವಾಗಿರುವ ಸಿಬಿಐ ಹೆಸರನ್ನೂ ದುರ್ಬಳಕೆ ಮಾಡಿಕೊಂಡು 8 ರಾಜ್ಯಗಳಲ್ಲಿ ವಸೂಲಿಗಿಳಿದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

    ಉತ್ಸಾಹಿ ಯುವ ಸಮೂಹಕ್ಕಾಗಿ ಇದೇ ಮೊದಲ ಬಾರಿಗೆ ಇಂಟರ್ನ್​ಶಿಪ್ ಅವಕಾಶ ಕಲ್ಪಿಸಲು ಸಿಬಿಐ ಹೊಸ ಯೋಜನೆ ರೂಪಿಸಿದೆ. 6- 8 ವಾರಗಳ ಅವಧಿಯ ಇಂಟರ್ನ್​ಶಿಪ್​ಗೆ ಅರ್ಜಿ ಸಹ ಆಹ್ವಾನಿಸಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ವಂಚಕರು, ಸಿಬಿಐ ಹೊರಡಿಸಿರುವ ಜಾಹೀರಾತನ್ನೇ ಹೋಲುವಂತೆ ನಕಲಿ ಜಾಹೀರಾತು ಸೃಷ್ಟಿಸಿ ಇ ಮೇಲ್, ವೆಬ್​ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾವಿರಾರು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ವಿಚಾರ ಸಿಬಿಐ ಗಮನಕ್ಕೆ ಬಂದಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ಕೊಟ್ಟಿರುವ ಸಿಬಿಐ ಅಧಿಕಾರಿಗಳು, ಮೋಸ ಹೋದವರಿದ್ದರೆ ದೂರು ಸಲ್ಲಿಸುವಂತೆ ಹೇಳಿದ್ದಾರೆ.

    ಉದ್ಯೋಗದ ಸುಳ್ಳು ಭರವಸೆ: ಸಿಬಿಐ ತರಬೇತಿ ವೇಳೆ ಅಭ್ಯರ್ಥಿಗಳಿಗೆ ನಿಯಮಾವಳಿಯಂತೆ ನಿಶ್ಚಿತ ಹಣ ಅಥವಾ ವೇತನ ನೀಡಲಾಗುತ್ತದೆ. ವಾಸ್ತವ್ಯಕ್ಕೆ ಕೊಠಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ತರಬೇತಿ ಮುಗಿದ ಮೇಲೆ ಸಿಬಿಐನಲ್ಲೇ ಉದ್ಯೋಗ ಕೊಡಲಾಗುತ್ತದೆ ಎಂದೂ ನಂಬಿಸಲಾಗುತ್ತದೆ. ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತಮ್ಮ ಸ್ವ-ವಿವರ, ಶೈಕ್ಷಣಿಕ ಪ್ರಮಾಣ ಪತ್ರ, ಫೋಟೋ ಮತ್ತು ಶುಲ್ಕ ಪಾವತಿ ಮಾಡುವಂತೆ ಏಜೆನ್ಸಿ ಹಾಗೂ ವೆಬ್​ಸೈಟ್​ಗಳಲ್ಲಿ ಜಾಹೀರಾತು ಕೊಟ್ಟು ಮೋಸ ಮಾಡಲಾಗುತ್ತಿದೆ. ಇನ್ನೂ ಕೆಲವರು ಇ ಮೇಲ್ ಕಳುಹಿಸಿ ವಂಚಿಸುತ್ತಿದ್ದಾರೆ ಎಂದು ಸಿಬಿಐ ಹೇಳಿದೆ.

    ಸಿಬಿಐ ಹೇಳೋದೇನು?: ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಇದು ಉದ್ಯೋಗಾವಕಾಶದ ಯೋಜನೆ ಅಲ್ಲ. ಇಂಟರ್ನ್​ಶಿಪ್​ಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ವಾಸ್ತವ್ಯ ಮತ್ತು ಪ್ರಯಾಣ ವೆಚ್ಚ ಭರಿಸಿಕೊಳ್ಳಬೇಕು. ತರಬೇತಿ ಮುಗಿದ ಮೇಲೆ ಸಿಬಿಐನಲ್ಲಿ ನೌಕರಿ ಕೊಡುವುದಿಲ್ಲ. ಇದು ಕೇವಲ 6 ರಿಂದ 8 ವಾರಗಳ ತರಬೇತಿಯಷ್ಟೇ. ಅಲ್ಲದೇ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ನಿಗದಿತ ವಿಷಯಗಳಲ್ಲಿ ಓದುತ್ತಿರುವ 30 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

    ಆನ್​ಲೈನ್ ವ್ಯವಸ್ಥೆ ಇಲ್ಲ: ಉತ್ತರ ಪ್ರದೇಶದ ಘಾಜಿಯಾಬಾದ್​ನ ಸಿಬಿಐ ಅಕಾಡೆಮಿ, ಎಸ್​ಪಿ (ತರಬೇತಿ ವಿಭಾಗ) ಇವರ ವಿಳಾಸಕ್ಕೆ ಸಂಪೂರ್ಣ ಮಾಹಿತಿ ತುಂಬಿದ್ದ ಅರ್ಜಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಬೇಕು. ಅರ್ಜಿ ಸಲ್ಲಿಕೆಗೆ ಸಿಬಿಐ ಆನ್​ಲೈನ್ ವ್ಯವಸ್ಥೆ ಮಾಡಿಲ್ಲ.

    ಜಾಬ್ ಚೀಟಿಂಗ್ ಹೆಚ್ಚಳ: ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಗಳ ಸೋಗಿನಲ್ಲಿ ಆನ್​ಲೈನ್​ನಲ್ಲಿ ಅರ್ಜಿ ಆಹ್ವಾನಿಸಿ ಇಂಟರ್​ವ್ಯೂ ನಡೆಸಿ ಪೂರ್ವಾಪರ ಪರಿಶೀಲಿಸುವ ನೆಪದಲ್ಲಿ ಲಕ್ಷಾಂತರ ರೂ. ಪಡೆದು ಮೋಸ ಮಾಡಿರುವ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಬೆಂಗಳೂರಿನಲ್ಲಿಯೇ 2017ರಲ್ಲಿ 172 ಜಾಬ್ ಚೀಟಿಂಗ್ ಕೇಸು ದಾಖಲಾಗಿವೆ. 2018ರಲ್ಲಿ 382; 2019ರಲ್ಲಿ 485 ಎಫ್​ಐಆರ್ ಆಗಿವೆ.

    ಇಲ್ಲಿಗೆ ದೂರು ಕೊಡಿ

    ಸಿಬಿಐ ಅಧಿಕೃತ ಅಕಾಡೆಮಿ ಮತ್ತು ವೆಬ್​ಸೈಟ್​ನಲ್ಲಿ ಅರ್ಜಿ ಡೌನ್​ಲೋಡ್ ಮಾಡಿಕೊಂಡು ಅಂಚೆ ಮೂಲಕ ಕಳುಹಿಸಿದರಷ್ಟೇ ಅರ್ಜಿ ಪರಿಗಣನೆಯಾಗುತ್ತದೆ. ನಕಲಿ ನೇಮಕಾತಿ ಏಜೆನ್ಸಿಗಳು, ವೆಬ್​ಸೈಟ್​ಗಳನಲ್ಲಿ ಅರ್ಜಿ ಸಲ್ಲಿಸಿದರೆ ಮಾನ್ಯತೆ ಇಲ್ಲ. ನಕಲಿ ವೈಬ್​ಸೈಟ್​ಗಳಲ್ಲಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ ವಂಚನೆಗೆ ಒಳಗಾದರೆ ಅದಕ್ಕೆ ಸಿಬಿಐ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದೆ. ಮೋಸಕ್ಕೆ ಒಳಗಾಗಿದ್ದರೆ ಠಟಠ್ಟಿಜಚ್ಚಛಃಚಿಜಿ.ಜಟಡ.ಜ್ಞಿ ವೆಬ್​ಸೈಟ್​ಗೆ ದೂರು ನೀಡುವಂತೆ ಸಿಬಿಐ ಸೂಚನೆ ಕೊಟ್ಟಿದೆ.

    ಯಾವ ನಗರಗಳಲ್ಲಿ ವಂಚನೆ?

    ಬೆಂಗಳೂರು, ದೆಹಲಿ, ಕೋಲ್ಕತ, ಚೆನ್ನೈ, ಹೈದರಾಬಾದ್, ಲಖನೌ, ಚಂಡೀಗಡ, ಮುಂಬೈನಲ್ಲಿ ಇಂಟರ್ನ್​ಶಿಪ್ ಸ್ಕೀಂ ಜಾರಿಗೆ ತರಲಾಗುತ್ತಿದೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ವಂಚಕರ ಜಾಲ ಸಕ್ರಿಯವಾಗಿದೆ.

    ಅರ್ಜಿಯಲ್ಲೇನಿದೆ?

    ಮೊದಲ ಬಾರಿಗೆ ಸಿಬಿಐ ತನ್ನ ಸಿಬಿಐ ಅಕಾಡೆಮಿ ಮತ್ತು ಜ್ಞಿಠಿಛ್ಟಿ್ಞಜಚ್ಝಚ.ಟಞ ಮೂಲಕ 2020ರಲ್ಲಿ ಇಂಟರ್ನ್ ಶಿಪ್ ಯೋಜನೆ ಆರಂಭಿಸಲಾಗುತ್ತಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಪದವೀಧರ, ಸ್ನಾತಕೋತ್ತರ ಅಥವಾ ಸಂಶೋಧನ ವಿದ್ಯಾರ್ಥಿಗಳಾದ ಭಾರತೀಯ ಪ್ರಜೆಗಳಿಂದ ಇಂಟರ್ನ್ ಶಿಪ್​ಗೆ ಅರ್ಜಿ ಆಹ್ವಾನಿಸಿದೆ. ಕಾನೂನು, ಸೈಬರ್, ದತ್ತಾಂಶ ವಿಶ್ಲೇಷಣೆ, ಅಪರಾಧ ಶಾಸ್ತ್ರ, ನಿರ್ವಹಣೆ, ಅರ್ಥಶಾಸ್ತ್ರ, ವಾಣಿಜ್ಯ ಮತ್ತು ವಿಧಿವಿಜ್ಞಾನ, ಡಿಜಿಟಲ್ ಫೋರೆನ್ಸಿಕ್ಸ್ ಸಂಬಂಧಿಸಿದ ವಿಷಯಗಳಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. 30 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, 6 ರಿಂದ 8 ವಾರಗಳ ಇಂಟರ್ನ್​ಶಿಪ್ ಅವಧಿ ಇರಲಿದೆ. ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು, ಕೋಲ್ಕತ, ಲಖನೌ ಮತ್ತು ಚಂಡೀಗಢ ಸಿಬಿಐ ಶಾಖೆಗಳಲ್ಲಿ ತರಬೇತಿ ನೀಡಲಾಗುತ್ತದೆ.

    ಕೋಟಿ ಕೋಟಿ ಲೂಟಿ

    ಸರ್ಕಾರಿ ಉದ್ಯೋಗ ಅಥವಾ ಇನ್ನಾವುದೇ ತರಬೇತಿಗಳಿಗೆ ಅರ್ಜಿ ಆಹ್ವಾನಿಸಿದಾಗ 250 ರೂ.ನಿಂದ 500 ರೂ.ವರೆಗೆ ಶುಲ್ಕ ನಿಗದಿಪಡಿಸಲಾಗಿರುತ್ತದೆ. ಪೊಲೀಸ್ ಇಲಾಖೆಯ ಸಬ್ ಇನ್​ಸ್ಪೆಕ್ಟರ್ ಅಥವಾ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ 2 ರಿಂದ 4 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿರುವ ಕಾರಣ ಅಲ್ಲಿ ಉದ್ಯೋಗ ಸಿಗುತ್ತದೆಂದರೆ ಸಹಜವಾಗಿಯೇ ಅಭ್ಯರ್ಥಿಗಳಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಂತರ ರೂ. ಲೂಟಿ ಹೊಡೆಯಲು ಕಿಡಿಗೇಡಿಗಳು ಸಂಚು ರೂಪಿಸಿದ್ದಾರೆ.

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts