More

    ಜಿ.ಪಂ. ನಾಲ್ವರ ಸದಸ್ಯತ್ವ ಅನರ್ಹ

    ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿಯ ನಾಲ್ವರ ಸದಸ್ಯತ್ವ ಅನರ್ಹಗೊಳಿಸಿ ಧಾರವಾಡ ಹೈಕೋರ್ಟ್ ಗುರುವಾರ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ್ದ ಅನರ್ಹತೆ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಅನರ್ಹ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.

    ಗರಗ ಕ್ಷೇತ್ರದ ರತ್ನಾ ಪಾಟೀಲ, ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರ, ತಬಕದ ಹೊನ್ನಿಹಳ್ಳಿ ಕ್ಷೇತ್ರದ ಮಂಜವ್ವ ಹರಿಜನ ಹಾಗೂ ಗಳಗಿ ಕ್ಷೇತ್ರ ಅಣ್ಣಪ್ಪ ದೇಸಾಯಿ ಅನರ್ಹಗೊಂಡ ಸದಸ್ಯರು.

    ಜಿ.ಪಂ. ಹಿಂದಿನ ಅಧ್ಯಕ್ಷರಾಗಿದ್ದ ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಈ ನಾಲ್ವರು ಸದಸ್ಯರು ಅಡ್ಡ ಮತದಾನ ಮಾಡಿದ್ದರು. ನಾಲ್ವರ ಸದಸ್ಯತ್ವ ರದ್ದು ಮಾಡಲು ಕೋರಿ ಚೈತ್ರಾ ಶಿರೂರ ಹಾಗೂ ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಈರಣ್ಣ ಜಡಿ ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಚುನಾವಣಾ ಆಯೋಗವು ನಾಲ್ವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿತ್ತು. ಅದಕ್ಕೆ ಸದಸ್ಯರು ತಡೆಯಾಜ್ಞೆ ತಂದಿದ್ದರು. ಅಲ್ಲದೆ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ವಿಪ್ ಉಲ್ಲಂಘಿಸಿದ್ದ ನಾಲ್ವರು ಸದಸ್ಯರು ಧಾರವಾಡ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕರೊನಾ ಸಂದರ್ಭದಲ್ಲಿ ಕೇವಿಯಟ್ ಇದ್ದರೂ ತಡೆಯಾಜ್ಞೆ ಪಡೆದು ಪ್ರಕರಣವನ್ನು ಮುಂದುವರಿಸಿದ್ದರು.

    ಚೈತ್ರಾ ಶಿರೂರ ಪರ ರಾಜ್ಯ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಸರ್ಜನ್ ಪೋಯಾ ಹಾಗೂ ಈರಣ್ಣ ಜಡಿ ಪರ ಹಿರಿಯ ವಕೀಲ ಅರುಣ ಜೋಶಿ ಹಾಗೂ ಅವಿನಾಶ ಅಂಗಡಿ ವಾದ ಮಂಡಿಸಿದ್ದರು. ಅನರ್ಹ ಸದಸ್ಯರ ಪರ ಮಾಜಿ ಅಡ್ವೋಕೇಟ್ ಜನರಲ್ ಪೊನ್ನಪ್ಪ ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಾಧೀಶರಾದ ಕೃಷ್ಣಕುಮಾರ ಅವರು, ಚುನಾವಣಾ ಆಯೋಗದ ಆದೇಶ ಎತ್ತಿ ಹಿಡಿದು ಆದೇಶ ಹೊರಡಿಸಿದರು.

    ಮುಂದಿನ ದಾರಿ: ಅನರ್ಹ ಸದಸ್ಯರು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ದ್ವಿ ಸದಸ್ಯ ಪೀಠದಲ್ಲಿ ಪ್ರಶ್ನಿಸಬಹುದು. ಆದರೆ ದ್ವಿ ಸದಸ್ಯ ಪೀಠದಲ್ಲಿ ಚೈತ್ರಾ ಶಿರೂರ ಹಾಗೂ ಈರಣ್ಣ ಜಡಿ ಪರವಾಗಿ ವಕೀಲರಾದ ಅರುಣ ಜೋಶಿ ಹಾಗೂ ಅವಿನಾಶ ಅಂಗಡಿ ಈಗಾಗಲೇ ಕೇವಿಯಟ್ ಸಲ್ಲಿಸಿದ್ದಾರೆ.

    ಕಾನೂನು ಹೋರಾಟಕ್ಕೆ ಸಂದ ಜಯ: 22 ಸದಸ್ಯ ಬಲದ ಧಾರವಾಡ ಜಿ.ಪಂ.ಗೆ ಪ್ರಸಕ್ತ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 11, ಕಾಂಗ್ರೆಸ್​ನ 10 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದರು. ಸಾಮಾನ್ಯ ಮಹಿಳಾ ಮೀಸಲಾತಿ ಬಂದಾಗ ಜಿಲ್ಲೆಯ ಬಿಜೆಪಿ ಮುಖಂಡರು ಕೋಳಿವಾಡ ಕ್ಷೇತ್ರದ ಚೈತ್ರಾ ಶಿರೂರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಹೆಬ್ಬಳ್ಳಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಹೀಗಾಗಿ ಬಿಜೆಪಿ ಸದಸ್ಯ ಬಲ 10ಕ್ಕೆ ಇಳಿದರೂ ಪಕ್ಷೇತರ ಸದಸ್ಯ ಶಿವಾನಂದ ಕರಿಗಾರ ಬಿಜೆಪಿ ಬೆಂಬಲಿಸಿದ್ದರು. ನಂತರ ನಡೆದ ರಾಜಕೀಯ ವಿದ್ಯಮಾನದಲ್ಲಿ ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಬಿಜೆಪಿಯಿಂದ ಗೆದ್ದಿದ್ದ ಜ್ಯೋತಿ ಬೆಂತೂರ, ಅಣ್ಣಪ್ಪ ದೇಸಾಯಿ, ರತ್ನಾ ಪಾಟೀಲ, ಮಂಜವ್ವ ಹರಿಜನ ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ್ದರು. ಹಾಗಾಗಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್​ನ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷರಾಗಿದ್ದಾರೆ. ಅಧಿಕಾರ ಕಳೆದುಕೊಂಡ ಬಿಜೆಪಿಯ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ, ಪಕ್ಷದ ಮುಖಂಡರ ನೆರವಿನೊಂದಿಗೆ ಕಾನೂನು ಹೋರಾಟ ಮುಂದುವರಿಸಿದ್ದರು. ರಾಜ್ಯ ಚುನಾವಣಾ ಆಯೋಗದಲ್ಲಿ ಜಯ ಗಳಿಸಿದ್ದರೂ, ಅನರ್ಹಗೊಂಡ ಸದಸ್ಯರಿಗೆ ತಡೆಯಾಜ್ಞೆ ಸಿಕ್ಕಿತ್ತು. ಇದೀಗ ಹೈಕೋರ್ಟ್​ನಲ್ಲಿ ನಡೆದ ಕಾನೂನು ಹೋರಾಟದಲ್ಲಿ ಚೈತ್ರಾ ಶಿರೂರ ಮತ್ತೊಮ್ಮೆ ಜಯ ಗಳಿಸಿದ್ದಾರೆ.

    ನಮ್ಮದು ಅಧಿಕಾರಕ್ಕಾಗಿ ನಡೆದ ಕಾನೂನು ಹೋರಾಟವಲ್ಲ. ಪಕ್ಷಕ್ಕೆ ದ್ರೋಹ ಬಗೆಯುವವರಿಗೆ ಪಾಠವಾಗಬೇಕು ಎಂದು ನಡೆಸಿದ ಕಾನೂನು ಹೋರಾಟ. ಇದರಲ್ಲಿ ಜಯ ಸಿಕ್ಕಿದೆ. ನಾಲ್ವರು ಸದಸ್ಯರಿಗೆ ಕಾನೂನಿನ ಅಡಿ ಶಾಸ್ತಿಯಾಗಿದೆ.

    | ಚೈತ್ರಾ ಶಿರೂರ ಜಿ.ಪಂ. ಮಾಜಿ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts