More

    ಧರ್ಮದರ್ಶನ ಅಂಕಣ | ಮನ-ಮನೆಗೆ ಚೈತನ್ಯಶಕ್ತಿಯಾಗುವ ಉದ್ಯಾನ…

    ಧರ್ಮದರ್ಶನ ಅಂಕಣ | ಮನ-ಮನೆಗೆ ಚೈತನ್ಯಶಕ್ತಿಯಾಗುವ ಉದ್ಯಾನ…ನಮ್ಮ ಇಡೀ ದಿನದ ಕಾರ್ಯಚಟುವಟಿಕೆಗಳಿಗೆ ಶಕ್ತಿ, ಚೈತನ್ಯ, ಉತ್ಸಾಹ ದೊರೆಯುವುದು ನಮ್ಮ ಮುಂಜಾನೆಯ ಚಟುವಟಿಕೆಗಳಿಂದ. ಇದು ಎಲ್ಲರಿಗೂ ತಿಳಿದಿರುವಂಥದ್ದೇ ಆದರೂ ಅನೇಕರು ಅದೆಷ್ಟೋ ದಿನಗಳನ್ನು ಒತ್ತಡ, ಬೇಸರ, ಖಿನ್ನತೆ ಹೀಗೆ ಅನೇಕ ಕಾರಣಗಳಿಂದ ನೀರಸವಾಗಿ ಕಳೆಯುತ್ತಾರೆ. ಪ್ರತಿ ದಿನವೂ, ಪ್ರತಿ ಕ್ಷಣವೂ ಹೊಸದೊಂದು ಅವಕಾಶವೇ ಆಗಿದೆ. ಅದನ್ನು ಹೇಗೆ ಬಳಸಬೇಕೆಂಬ ವಿವೇಚನೆ ಅವರವರಿಗೆ ಬಿಟ್ಟದ್ದು. ಮುಂಜಾನೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ಯೋಗ, ವ್ಯಾಯಾಮ, ಪಾರ್ಕ್​ಗಳಲ್ಲಿ ಜಾಗಿಂಗ್ ಮಾಡುವವರು, ಅಥವಾ ಬೇಗ ಎದ್ದು ತೋಟ, ಗದ್ದೆ, ಅಥವಾ ಬೇರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವವರು, ತಡವಾಗಿ ಎದ್ದೇಳುವವರಿಗಿಂತ ಹೆಚ್ಚಿನ ಉತ್ಸಾಹದಿಂದ ಇಡೀ ದಿನವನ್ನು ಕಳೆಯುತ್ತಾರೆ ಎಂಬುದು ಸಂಶೋಧನೆಗಳಿಂದಲೂ ದೃಢಪಟ್ಟಿದೆ.

    ನಮ್ಮ ಸನಾತನ ಪದ್ಧತಿಯಲ್ಲಿ ಗೃಹಿಣಿಯರು ಮುಂಜಾನೆ ಎದ್ದು ಶುಚಿರ್ಭತರಾಗಿ ತುಳಸಿ ಕಟ್ಟೆಗೆ ನೀರೆರೆದು ಪೂಜೆ ಮಾಡುತ್ತಿದ್ದರು. ಈಗಲೂ ಅನೇಕರು ಇದನ್ನು ಆಚರಣೆ ಮಾಡುತ್ತಿದ್ದಾರೆ. ಮುಂಜಾನೆ ಸೂರ್ಯೋದಯದ ವಾತಾವರಣ, ಗಾಳಿ ಎಲ್ಲವೂ ಶುಭ್ರವಾಗಿರುತ್ತದೆ. ಈ ತಿಳಿಯಾದ ಪರಿಸರ ಮೈ-ಮನಕ್ಕೆ ನವಚೈತನ್ಯ ತಂದುಕೊಡುತ್ತದೆ. ಮನೆ ಹಾಗೂ ಸುತ್ತಮುತ್ತಲಿನ ಪರಿಸರವೂ ಸ್ವಚ್ಛ, ಸುಂದರವಾಗಿದ್ದಾಗ ಮನೆಯವರೆಲ್ಲರೂ ಉಲ್ಲಾಸದಿಂದ ಇರಲು ಸಾಧ್ಯ. ಮನೆ ಸುಂದರವಾಗಿ ಕಾಣಬೇಕೆಂದು ವಿವಿಧ ವಿನ್ಯಾಸಗಳಿಂದ ಮನೆ ನಿರ್ವಿುಸುತ್ತಾರೆ. ವಿವಿಧ ಬಣ್ಣಗಳನ್ನು ಬಳಿಯುತ್ತಾರೆ. ಸುಂದರವಾದ ಹೂ ಗಿಡಗಳನ್ನು ತಂದು ಮನೆಯ ಎದುರು, ಸುತ್ತ-ಮುತ್ತ ನೆಟ್ಟು ಪೋಷಿಸುತ್ತಾರೆ.

    ಬಹುತೇಕ ಎಲ್ಲರ ಮನೆಯ ಎದುರು, ಸುತ್ತ-ಮುತ್ತ ಕನಿಷ್ಠ ನಾಲ್ಕೈದು ಬಗೆಯ ಹೂವಿನ ಗಿಡಗಳನ್ನಾದರೂ ಕಾಣಬಹುದು. ಹೆಚ್ಚಾಗಿ ಹಳ್ಳಿಗಳಲ್ಲಿ ದಾಸವಾಳ, ಕನಕಾಂಬರ, ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೀಗೆ ವಿವಿಧ ಹೂಗಳನ್ನು ಮನೆಯಂಗಳದಲ್ಲಿ ನೆಡುತ್ತಾರೆ. ಪೇಟೆ-ಪಟ್ಟಣಗಳಲ್ಲಿ ಸ್ಥಳಾವಕಾಶ ಕೊರತೆಯಿಂದ ಕುಂಡಗಳಲ್ಲಿ ನೆಟ್ಟು ಬೆಳೆಸುತ್ತಾರೆ. ಹಾಗೂ ಸಾಮಾನ್ಯ ಹೂ ಗಿಡಗಳಲ್ಲದೆ ಆರ್ಕಿಡ್, ಅಂಥೋರಿಯಂ ಹೀಗೆ ವಿವಿಧ ತಳಿಗಳ ಗಿಡಗಳನ್ನು ನೆಟ್ಟು ಮನೆಯನ್ನು ಅಂದಗಾಣಿಸುತ್ತಾರೆ. ಹೂತೋಟ, ಕೈತೋಟ ಎನ್ನುತ್ತಾ ಹೂ-ಗಿಡಗಳನ್ನು ಹಾಗೂ ತರಕಾರಿಗಳನ್ನು ಬೆಳೆಸುವ ಹವ್ಯಾಸ ವನ್ನಾಗಿಸಿಕೊಂಡವರೂ ಇದ್ದಾರೆ.

    ವಿಶೇಷವಾಗಿ ಮಹಿಳೆಯರು ನಿತ್ಯ ಕೆಲಸಗಳನ್ನು ನಿರ್ವಹಿಸಿಕೊಂಡು ತರಹೇವಾರಿ ಹೂ ಗಿಡಗಳನ್ನು ಬೆಳೆಸುವಲ್ಲಿ, ಅವುಗಳ ಆರೈಕೆ ಮಾಡುವಲ್ಲಿ ನಿಷ್ಣಾತರು. ಅವರು ಹೂ-ಗಿಡಗಳನ್ನು ಸಂಗ್ರಹಿಸುವ ಪರಿಯೇ ಚಂದ. ಸಂಬಂಧಿಕರ, ಸ್ನೇಹಿತರ ಮನೆಗಳಿಗೆ ಕಾರ್ಯಕ್ರಮ ಅಥವಾ ಇನ್ನಿತರ ಕಾರಣಗಳಿಗೆ ಭೇಟಿ ಕೊಟ್ಟಾಗ ಅವರ ಮನೆಯಲ್ಲಿರುವ ಹೂ ಗಿಡಗಳ ಮೇಲೆ ಕಣ್ಣಾಡಿಸಿಯಾಗಿರುತ್ತದೆ. ಅವುಗಳಲ್ಲಿ ನಮ್ಮ ಮನೆಯಲ್ಲಿ ಯಾವೆಲ್ಲ ಗಿಡಗಳಿಲ್ಲ ಎಂದು ನೋಡಿಕೊಂಡು, ಎಲ್ಲ ಮುಗಿಸಿ ಹೊರಡುವಾಗ ‘ನಿಮ್ಮ ಹೂ ಗಿಡಗಳು ಚಂದ ಉಂಟು. ಓ ಅದು ನೋಡಿ ಒಂದೇ ಗಿಡದಲ್ಲಿ 2-3 ಬಣ್ಣಗಳ ಹೂ ಬಿಡುವ ಕಸಿ ದಾಸವಾಳ ಅದರ ಗೆಲ್ಲು ಕೊಟ್ಟರೆ ಒಳ್ಳೆಯದಿತ್ತು’ ಎಂದಾಗ ಮನೆಯವರು ‘ಓ ಅದಕ್ಕೇನಂತೆ ಯಾವುದ ಬೇಕು ಅದನ್ನು ತಗೋಳಿ’ ಎಂದು ಉದಾರವಾಗಿ ನೀಡುತ್ತಾರೆ. ತಮ್ಮ ಮಕ್ಕಳಂತೆಯೇ ಪ್ರೀತಿ-ಕಾಳಜಿಯಿಂದ ಸಾಕಿದ ಹೂ ಗಿಡಗಳನ್ನು ತುಂಡು ಮಾಡಿಕೊಡಲು ಯಾರಿಗಾದರೂ ಕಷ್ಟವೇ. ಇದನ್ನು ಅರಿತುಕೊಂಡು ಮನೆಯಾಕೆಗೆ ಕೊಂಚವೂ ಬೇಜಾರಾಗದ ರೀತಿಯಲ್ಲಿ ಹೂ ಗಿಡವನ್ನು ಪಡೆಯಲು ಬೇಕಾದ ಮಾತಿನ ಚಾಕಚಕ್ಯತೆ ಇರುವುದು ಹೆಣ್ಣಲ್ಲೇ. ಈಗಂತೂ ಅಲ್ಲಲ್ಲಿ ನರ್ಸರಿಗಳಿದ್ದು, ಬೇಕಾದ ಹೂ ಗಿಡಗಳನ್ನು ತಂದು ನೆಡಬಹುದು. ಹೆಚ್ಚು ಹಣ ನೀಡಿದರೆ ನರ್ಸರಿಯವರೇ ಮನೆಗೆ ಬಂದು ವೆಚ್ಚಕ್ಕೆ ತಕ್ಕನಾದ ಚಂದದ ಹೂ ತೋಟ ಮಾಡಿ ಕೊಡುತ್ತಾರೆ. ಬೇಕಾದರೆ ಅವರೇ ನಿರ್ವಹಣೆ ಮಾಡುವ ವ್ಯವಸ್ಥೆಯೂ ಇದೆ.

    ರಾಮಾಯಣದಲ್ಲಿ ಹೇಳಿದಂತೆ ರಾವಣನು ಸೀತೆಯ ಮೇಲೆ ಮೋಹಗೊಂಡು, ಆಕೆಯನ್ನು ಅಪಹರಿಸಿ ಅಶೋಕವನದಲ್ಲಿ ಇರಿಸಿ ಯಾವುದೇ ಕುಂದು-ಕೊರತೆಗಳಾಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡುತ್ತಾನೆ. ಅಶೋಕವನದ ಕುರಿತಾಗಿ ವಾಲ್ಮೀಕಿ ಸುಂದರವಾಗಿ ವರ್ಣಿಸಿದ್ದಾರೆ. ಯಾವುದೇ ರೀತಿಯ ಶೋಕವನ್ನು ದೂರ ಮಾಡುವ ವಾತಾವರಣ ಅಲ್ಲಿತ್ತು ಹಾಗೂ ಅದು ಹೆಚ್ಚಾಗಿ ಅಶೋಕ ವೃಕ್ಷಗಳಿಂದ ಕೂಡಿತ್ತು. ಅದರಿಂದ ಅದನ್ನು ಅಶೋಕವನ ಎಂದು ಹೆಸರಿಸಿರಬಹುದು. ಅಶೋಕವನ ಸಾಕಷ್ಟು ವಿಸ್ತಾರವಾಗಿದ್ದು, ನದ- ನದಿಗಳು ಮೈದುಂಬಿ ಹರಿಯುತ್ತಿದ್ದವು. ವಿವಿಧ ಜಾತಿಯ ಮರ, ಗಿಡ, ಬಳ್ಳಿಗಳು ಅಲ್ಲಿದ್ದವು. ಹೇರಳ ಹಣ್ಣು-ಹಂಪಲುಗಳು, ಫಲ-ಪುಷ್ಪಗಳಿಂದ ಅಶೋಕವನ ತುಂಬಿತ್ತು. ಖಗ-ಮೃಗಗಳೂ ಅಲ್ಲಿದ್ದವು. ಅಲ್ಲಿ ಗಾಳಿ ಬೀಸಿದಾಗ ತರುಲತೆಗಳೆಡೆ ಯಿಂದ ಸಂಗೀತವೇ ಗಾಳಿಯಲ್ಲಿ ಹೊಮ್ಮುವಂತೆ ಭಾಸವಾಗುತ್ತಿದ್ದಂತೆ.

    ಧರ್ಮಸ್ಥಳಕ್ಕೆ ಬರುವ ಅನೇಕರು ದೇವಾಲಯದ ಎದುರಿಗಿರುವ ಲಲಿತೋದ್ಯಾನ -ಹೂ ತೋಟಕ್ಕೆ ಒಂದು ಬಾರಿಯಾದರೂ ಭೇಟಿ ನೀಡುತ್ತಾರೆ ಎಂದು ಭಾವಿಸುತ್ತೇನೆ. ಈ ಹೂ ತೋಟದ ನಿರ್ಮಾಣ ಬಹಳಷ್ಟು ಹಿಂದಿನ ಕಾಲದಲ್ಲೇ ಆಗಿತ್ತು. ಶ್ರೀ ಸ್ವಾಮಿಯ ಪೂಜೆಗೆ ಬೇಕಾದ ಹೂವುಗಳನ್ನು ಬೆಳೆಸಲಾಗುತ್ತದೆ. ಕಳೆದ ವರ್ಷದಲ್ಲಿ ಹೂ ತೋಟವನ್ನು ಪುನರ್ ನಿರ್ಮಾಣ ಮಾಡಲಾಯಿತು. ನನ್ನ ಶ್ರೀಮತಿ ಹೇಮಾವತಿ ಹಾಗೂ ತಮ್ಮ ಹರ್ಷೇಂದ್ರ ಕುಮಾರ್​ನ ಪತ್ನಿ ಸುಪ್ರಿಯಾ ಇವರೆಲ್ಲ ಹೂ ಗಿಡಗಳನ್ನೆಲ್ಲ ಆಯ್ಕೆ ಮಾಡಿ ಹೂದೋಟವನ್ನು ಮತ್ತಷ್ಟು ಸುಂದರಗೊಳಿಸುವಲ್ಲಿ ಶ್ರಮಿಸಿದ್ದಾರೆ. ವಿವಿಧ ಕಡೆಗಳಿಂದ ಬೇರೆ ಬೇರೆ ಗಿಡಗಳನ್ನು ನೆಟ್ಟು ಮುತುವರ್ಜಿ ವಹಿಸಿದ್ದಾರೆ. ಕ್ಷೇತ್ರಕ್ಕೆ ಬಂದ ಭಕ್ತರು ದೇವರ ದರ್ಶನದ ಜತೆಗೆ ಸುಂದರ ಪರಿಸರದಲ್ಲಿ ದೇಹ-ಮನಸ್ಸಿನ ಆಯಾಸ ಪರಿಹರಿಸಿಕೊಳ್ಳಲಿ ಎಂಬ ಆಶಯ ನಮ್ಮದು. ಪ್ರತಿ ವರ್ಷ ಕ್ಷೇತ್ರದ ವಿಷು ಜಾತ್ರೆ ಹಾಗೂ ಲಕ್ಷ ದೀಪೋತ್ಸವ ಸಂದರ್ಭಗಳಲ್ಲಿ ಜಾತ್ರೆಯ 2ನೇ ದಿನ ಶ್ರೀ ಸ್ವಾಮಿಗೆ ಉದ್ಯಾನೋತ್ಸವ ನಡೆಯಲಿದ್ದು, ಈ ವೇಳೆ ಲಲಿತೋದ್ಯಾನದ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ಉದ್ಯಾನದಲ್ಲಿ ಒಮ್ಮೆ ತಿರುಗಾಡಿದರೆ ಮನಸ್ಸಿಗೆ ಹಾಯೆನಿಸುತ್ತದೆ.

    ರಾಮಾಯಣ, ಮಹಾಭಾರತದಲ್ಲಿ ಮಾತ್ರವಲ್ಲದೆ ರಾಜ-ಮಹಾರಾಜರ ಕಾಲದಲ್ಲಿಯೂ ಉದ್ಯಾನಗಳ ಕಲ್ಪನೆಯಿತ್ತು. ರಾಜ-ರಾಣಿಯರ ವಿಹಾರಕ್ಕಾಗಿಯೇ ಅರಮನೆಯಲ್ಲಿ ಉದ್ಯಾನವನ್ನು ಮೀಸಲಿಡುತ್ತಿದ್ದರು. ಮನೆಯಲ್ಲಿ ಸಣ್ಣ-ಪುಟ್ಟ ಕೈತೋಟಗಳಿರುವಂತೆ ಊರಿಗೊಂದು ಉದ್ಯಾನವಿದ್ದರೆ ಇನ್ನೂ ಚಂದ. ಮನಸ್ಸು ಮಾಡಿದರೆ ಇಡೀ ಊರನ್ನೇ ಉದ್ಯಾನವನ್ನಾಗಿಸಬಹುದು. ಬೆಂಗಳೂರನ್ನು ರಾಷ್ಟ್ರದ ಉದ್ಯಾನ ನಗರಿ ಎಂದು ಗುರುತಿಸಲಾಗುತ್ತದೆ. ಕಬ್ಬನ್ ಪಾರ್ಕ್, ಲಾಲ್​ಬಾಗ್​ನಿಂದಾಗಿ ಮಾತ್ರವಲ್ಲದೆ ವಿಶೇಷ ವಾತಾವರಣದಿಂದಾಗಿ ಅನೇಕರಿಗೆ ಬೆಂಗಳೂರು ನೆಚ್ಚಿನ ತಾಣವಾಗಿದೆ. ಉದ್ಯಾನ ಎಂದರೆ ಕೇವಲ ಕಣ್ಮನ ಸೆಳೆಯುವ ಹೂ-ಗಿಡಗಳಿಂದ ತುಂಬಿರಬೇಕೆಂದೇನಿಲ್ಲ. ಅದು ಸಸ್ಯ, ಪ್ರಾಣಿ ಸಂಪತ್ತು ಅಥವಾ ಜೀವ ವೈವಿಧ್ಯದ ಸಂರಕ್ಷಣಾ ತಾಣವಾಗಿರಲೂಬಹುದು. ಜಿಮ್ ಕಾರ್ಬೆಟ್, ಕಾಜಿರಂಗ, ಗಿರ್, ಸುಂದರ್​ಬನ್, ಸಾತ್ಪುರ, ಎರಾವಿಕುಲಂ ಹೀಗೆ ಅನೇಕ ರಾಷ್ಟ್ರೀಯ ಉದ್ಯಾನಗಳು ದೇಶದಲ್ಲಿದ್ದು, ಅವೆಲ್ಲ ಜೀವ ಸಂಕುಲಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ವಿದೇಶಗಳಲ್ಲೂ ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುತ್ತಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮರ-ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ. ಮರುಭೂಮಿ ಎನಿಸಿಕೊಂಡ ದುಬೈ, ಅಬುದಾಬಿಯಲ್ಲಿ ಅದ್ಭುತವಾದ ಹೂವು ಗಿಡಗಳ ಸಂಗ್ರಹ ಮಾಡಿದ್ದಾರೆ. ಈಗೀಗ ನಮ್ಮಲ್ಲೂ ಹಲವರು ಈ ರೀತಿಯ ಪ್ರಯೋಗ ಮಾಡಿ ಯಶಸ್ವಿಯಾಗಿ ದ್ದಾರೆ. ಟೆರೇಸ್ ಮೇಲೆ ಹೂ- ಗಿಡಗಳು ಮಾತ್ರವಲ್ಲದೆ ತರಕಾರಿ, ಭತ್ತವನ್ನೂ ಬೆಳೆದವರು ನಮ್ಮಲ್ಲಿದ್ದಾರೆ. ಕೈತೋಟದಿಂದ ಸಾಕಷ್ಟು ಪ್ರಯೋಜನವಿದೆ. ಹೂ ಗಿಡಗಳು ಮನೆಯ ಪರಿಸರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆಲವೊಂದು ಜಾತಿಯ ಸಸ್ಯಗಳು ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಹೊರಸೂಸುತ್ತವೆ. ಮನೆಯಲ್ಲಿ ಉಳಿಕೆಯಾಗುವ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿಸಿ ಅವುಗಳಿಗೆ ಬಳಸಬಹುದು. ನಗರ ಪ್ರದೇಶಗಳಲ್ಲಿ ಅನೇಕರು ಇಂತಹ ಮಾದರಿ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಗಳು ಹೆಚ್ಚಬೇಕಿದೆ.

    ಬೆಂಗಳೂರಿನ ವಿಮಾನ ನಿಲ್ದಾಣದ ದಾರಿಯಲ್ಲಿರುವ ಹೂವಿನ ಗಿಡಗಳು ಆಕರ್ಷಕವಾಗಿವೆ. ಬಣ್ಣ-ಬಣ್ಣದ ವಿದ್ಯುತ್​ದೀಪಗಳನ್ನು, ವೃತ್ತಗಳಲ್ಲಿ ಮೂರ್ತಿ, ಆಕೃತಿಗಳನ್ನು ನಿರ್ವಿುಸುತ್ತಾ ನಗರವನ್ನು ಮತ್ತಷ್ಟು ಚೆಂದವಾಗಿರಿಸಲು ಪ್ರಯತ್ನಿಸುತ್ತಿದ್ದೇವೆ. ವಿದ್ಯುತ್ ಅಲಂಕಾರ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಚಂದ ಕಾಣಬಹುದು. ಅದರ ಜೊತೆಗೆ ಮರ ಗಿಡಗಳನ್ನು ಬೆಳೆಸಿದರೆ ಚಂದದ ಜತೆ ಪರಿಸರ ಸಂರಕ್ಷಣೆಯೂ ಆಗುವುದು. ನಗರ, ಹಳ್ಳಿಯ ರಸ್ತೆಗಳ ಇಕ್ಕೆಲಗಳಲ್ಲಿ, ಕೆರೆಗಳ ಪಕ್ಕದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಣ್ಣ-ಸಣ್ಣ ಗಿಡ ಮರಗಳನ್ನು ಬೆಳೆಸುವ ಪ್ರಯತ್ನ ಮಾಡಬಹುದು. ಇವುಗಳು ಆಮ್ಲಜನಕ ನೀಡುವುದಲ್ಲದೆ ನೆರಳು, ತಂಪನ್ನು ನೀಡುತ್ತವೆ. ಮನಸ್ಸಿಗೂ ಆಹ್ಲಾದವನ್ನುಂಟು ಮಾಡುತ್ತವೆ. ಜತೆಗೆ ಪ್ರಕೃತಿ ಸಂರಕ್ಷಣೆಯೂ ಆಗುತ್ತದೆ.

    ನಮ್ಮ ಉಜಿರೆ-ಧರ್ಮಸ್ಥಳ ರಸ್ತೆಯಲ್ಲಿ ಸಿದ್ಧವನದ ಪರಿಸರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹೂ ಗಿಡಗಳನ್ನು ಬೆಳೆಸಿ ಆ ಪರಿಸರವನ್ನು ಹಸಿರುಮಯವನ್ನಾಗಿ ಮಾಡಲಾಗಿದೆ. ನಮ್ಮ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ. ಯಶೋವರ್ಮ ಅವರು ಕೆಲವು ವರ್ಷಗಳ ಹಿಂದೆ ಇಂತಹ ಆಲೋಚನೆಯನ್ನು ಹುಟ್ಟು ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ಗಿಡ-ಮರಗಳನ್ನು ಹೂ ಗಿಡಗಳನ್ನು ನೆಟ್ಟರು. ಕಾಲೇಜು, ವಿದ್ಯಾರ್ಥಿ ನಿಲಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ ಅವುಗಳಿಗೆ ಬಳಸುವ ಯೋಜನೆ ಹಾಕಿಕೊಂಡರು. ಇದರಿಂದ ನೀರಿನ ಮರುಬಳಕೆಯೂ ಆಯಿತು, ಗಿಡಗಳಿಗೆ ನೀರುಣಿಸಿದಂತೆಯೂ ಆಯಿತು. ಈ ರಸ್ತೆಯಲ್ಲಿ ಪ್ರಯಾಣಿಸುವ ಅನೇಕರು ಅಲ್ಲಿ ವಾಹನ ನಿಲ್ಲಿಸಿ, ಹೂಗಳ ಬಳಿ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ಇತ್ತೀಚೆಗೆ ನನ್ನ ಭೇಟಿಗೆ ಬಂದಿದ್ದ ಕುಟುಂಬವೊಂದು ಉಜಿರೆ ದಾಟಿದ ತಕ್ಷಣ ವಿದೇಶದಲ್ಲಿದ್ದೇವೆಯೋ ಎಂದು ಭಾಸವಾಗುತ್ತದೆ ಎಂದರು. ಸ್ವಚ್ಛ ಪರಿಸರ, ಮರ-ಗಿಡ, ಹೂಗಳನ್ನು ನೋಡಿದಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಒತ್ತಡ, ಉದ್ವೇಗ, ಬೇಸರ, ಖಿನ್ನತೆಯಿಂದ ಕೂಡಿದ ಮನಸ್ಸಿನ ನೋವುಗಳೆಲ್ಲ ಮರೆಯಾಗುತ್ತವೆ. ಅಂತಹ ಪರಿಸರವನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳಬೇಕಾದ ಅಗತ್ಯವಿದೆ. ಊರಿಗೊಂದು ಶಾಲೆ ಇರುವಂತೆ ಊರಿಗೊಂದು ವನ ನಿರ್ವಿುಸುವುದು ಅಷ್ಟೇನೂ ಕಷ್ಟಕರವಾದ ಕೆಲಸವಲ್ಲ. ಹಾಗಾಗಿ ಪ್ರತಿ ಊರಿನಲ್ಲೊಂದು ಉದ್ಯಾನ ನಿರ್ವಣವಾಗಲಿ ಎಂದು ಹಾರೈಸೋಣ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts