More

    ಧನ್ವಂತರಿ: ಸಿಯಾಟಿಕ ನಿವಾರಿಸುವ ಮನೆಮದ್ದುಗಳು

    ಧನ್ವಂತರಿ: ಸಿಯಾಟಿಕ ನಿವಾರಿಸುವ ಮನೆಮದ್ದುಗಳುಸೊಂಟದ ನರದ ನೋವಿಗೆ ಸಿಯಾಟಿಕ ಎನ್ನುತ್ತಾರೆ. ಈ ಸಮಸ್ಯೆ ಇರುವವರಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಹೇಳಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮೊದಲು ಒಮ್ಮೆ ಸುಲಭ ದಾರಿಗಳನ್ನು ಪಾಲಿಸಿ ಸಮಸ್ಯೆಯನ್ನು ಕಡಿಮೆ ಮಾಡಿಸಿಕೊಳ್ಳಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ. ಮನೆಯಲ್ಲಿಯೇ ನಾವು ಅನುಸರಿಸಬಹುದಾದ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

    ಪಾರಿಜಾತದ ಎಲೆಗಳೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಮಾಡಿದ ಕಷಾಯ ಕುಡಿಯುವುದರಿಂದ ಸಿಯಾಟಿಕ ಸಮಸ್ಯೆ ಹತೋಟಿಗೆ ಬರಲು ಸಹಾಯವಾಗುತ್ತದೆ.

    ಸಣ್ಣದಾಗಿ ಹೆಚ್ಚಿದ 10 ಗ್ರಾಂ ಕಡ್ಲಂ ಕಡಲೆ ಅಥವಾ ಕಳ್ಳಂಗಡಲೆಯ ಗಿಡಕ್ಕೆ ಒಂದು ಲೋಟ ಹಾಲು, ಮೂರು ಲೋಟ ನೀರು ಹಾಕಿ ಅದು ಒಂದು ಲೋಟಕ್ಕೆ ಬರುವಷ್ಟು ಕುದಿಸಿ ಕ್ಷೀರಪಾಕ ತಯಾರಿಸಬೇಕು. ಇದನ್ನು 45 ದಿನಗಳ ಕಾಲ ಪ್ರತಿನಿತ್ಯ ಕುಡಿಯಬೇಕು. ಲಕ್ಕಿಗಿಡದ ಬೇರಿನ ಅರ್ಧ ಚಮಚ ಪುಡಿಯನ್ನು ಒಂದು ಚಮಚ ತುಪ್ಪ ಅಥವಾ ಶುದ್ಧ ಎಳ್ಳಣ್ಣೆಯ ಜತೆಗೆ ಸೇರಿಸಿ ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳಬೇಕು.

    ಎಷ್ಟೋ ಬಾರಿ ಹೊಟ್ಟೆಯಲ್ಲಿ ವಾಯು ತುಂಬಿದಾಗ ಅಥವಾ ಹೊಟ್ಟೆಯುಬ್ಬರ ಆದಾಗ ಸಮಸ್ಯೆ ಉಲ್ಬಣಿಸುತ್ತದೆ. ಆಗ ಒಂದು ಲೋಟ ಮಜ್ಜಿಗೆಗೆ ತುಪ್ಪದಲ್ಲಿ ಹುರಿದ ಚಿಟಿಕೆ ಇಂಗು, ಸ್ವಲ್ಪ ಸೈಂಧವ ಲವಣ, ಕಾಳುಮೆಣಸು, ಜೀರಿಗೆ, ಹಿಪ್ಪಲಿ ಪುಡಿಯನ್ನು ಎರಡು ಚಿಟಿಕೆ ಹಾಕುವುದರಿಂದ ಹೊಟ್ಟೆಯುಬ್ಬರ ಸಮಸ್ಯೆ ಕಡಿಮೆ ಆಗುತ್ತದೆ. ಕೆಲವೊಮ್ಮೆ ಸಿಯಾಟಿಕಾದಲ್ಲಿ ಬಿಗಿತ ಹೆಚ್ಚಾಗಿರುತ್ತದೆ. ಇಂಥ ಸಂದರ್ಭದಲ್ಲಿ ಮೂರರಿಂದ ಐದು ಗ್ರಾಂ ಔಡಲಗಿಡದ ಬೇರಿಗೆ ಸ್ವಲ್ಪ ಜೀರಿಗೆ, ನಾಲ್ಕು ಲೋಟ ನೀರು ಹಾಕಿ ಒಂದು ಲೋಟಕ್ಕೆ ಬರುವಷ್ಟು ಕುದಿಸಿ ಕಷಾಯ ಮಾಡಿ ದಿನಕ್ಕೆರಡು ಬಾರಿ ಕುಡಿಯಬೇಕು.

    ನಿತ್ಯ ಎಣ್ಣೆಯ ಮಸಾಜ್ ಮಾಡಿಕೊಳ್ಳುವವರಿಗೆ, ವ್ಯಾಯಾಮ ಮಾಡುವವರಿಗೆ, ಮಲಮೂತ್ರಾದಿ ವಿಸರ್ಜನಾ ಕಾರ್ಯವನ್ನು ತಡೆಯದೆ ಇರುವವರಿಗೆ, ಹೆಚ್ಚು ವಾಯು ಉತ್ಪತ್ತಿ ಆಹಾರಗಳನ್ನು ಸೇವಿಸದೆ ಇರುವವರಿಗೆ, ಸರಿಯಾದ ಸಮಯದಲ್ಲಿ ಊಟ ಮಾಡುವವರಿಗೆ, ಕಾಳಜಿಯಿಂದ ಕೆಲಸ ಮಾಡುವವರಿಗೆ (ಭಾರ ಎತ್ತುವುದು, ಹೆಚ್ಚು ನಡೆಯುವುದು, ಮೆಟ್ಟಿಲುಗಳನ್ನು ಏರುವುದು ಇತ್ಯಾದಿ) ಸಿಯಾಟಿಕ ಸಮಸ್ಯೆ ಬರುವ ಸಂಭವ ಕಡಿಮೆ.

    ಸಮಸ್ಯೆ ಅತೀ ಹೆಚ್ಚಾಗಿ ಕಾಡುತ್ತಿದ್ದಲ್ಲಿ ಮುದ್ರಾ ಚಿಕಿತ್ಸೆ, ಪ್ರಕೃತಿಚಿಕಿತ್ಸೆಯನ್ನು ಪಡೆಯಬಹುದು. ಹಿಂದೆ ಬಾಗುವ ವ್ಯಾಯಾಮಗಳನ್ನು ಮಾಡುವುದು ಈ ನಿಟ್ಟಿನಲ್ಲಿ ಹೆಚ್ಚು ಸಹಕಾರಿ. ಆದರೆ ಗುರುಮುಖೇನ ಕಲಿತು ಸರಿಯಾಗಿ ಮಾಡಬೇಕು. ಇಲ್ಲದಿದ್ದಲ್ಲಿ ನೋವು ಉಲ್ಬಣವಾಗುವ ಸಂಭವವೂ ಇರುತ್ತದೆ.

    ಪ್ರತಿನಿತ್ಯ ಸ್ವಲ್ಪ ಮಟ್ಟಿಗಾದರೂ ಸಾಂಬಾರಪದಾರ್ಥಗಳನ್ನು ಬಳಸಬೇಕು. ಸಾಂಬಾರ ಪದಾರ್ಥಗಳಲ್ಲಿ ಮುಖ್ಯವಾಗಿ ಶುಂಠಿ, ಅರಿಶಿಣ, ಚಕ್ಕೆ, ಜೀರಿಗೆ, ಇಂಗು, ಮೆಂತ್ಯ ಬಳಕೆ ಉತ್ತಮ. ಹೀಗೆ ಬಳಸುವಾಗ ತುಪ್ಪ, ಬೆಣ್ಣೆ, ತೆಂಗಿನ ತುರಿ ಇತ್ಯಾದಿಗಳಿಂದ ಒಳ್ಳೆಯ ಕೊಬ್ಬನ್ನು ಪೂರೈಸಿಕೊಳ್ಳುವುದೂ ಅಗತ್ಯ. ಅಕ್ಯುಪಂಕ್ಚರ್ ಚಿಕಿತ್ಸೆ ಪರಿಣಾಮಕಾರಿ. ಫಿಸಿಯೋಥೆರಪಿ ಚಿಕಿತ್ಸೆಗಳಾದ ಐ.ಎಫ್.ಟಿ, ಅಲ್ಟ್ರಾಸೌಂಡ್, ಟ್ರಾಕ್ಷನ್ ಚಿಕಿತ್ಸೆಗಳು, ಮಾಯ್ಚಹೀಟ್, ಇನಾನ್ಪ್ರಾರೆಡ್ ಇನ್ನಿತರ ಬಿಸಿ ಚಿಕಿತ್ಸೆಗಳು, ಬೆನ್ನುಹುರಿ ಸ್ನಾನದಂಥ ನೀರಿನ ಚಿಕಿತ್ಸೆಗಳು ಸಹಕಾರಿ. ಹೆಚ್ಚು ನೋವು ಇರುವಾಗ 10-15 ದಿನ ಗಟ್ಟಿ ಹಾಸಿಗೆಯ ಮೇಲೆ ಎರಡು ಕಂಬಳಿ ಹಾಸಿ ಅದರ ಮೇಲೆ ಮಲಗಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts