More

    ಧನ್ವಂತರಿ|ಕರೊನಾಕ್ಕೆ ಜಲನೇತಿ ಮದ್ದಾಗಬಹುದೇ?

    ಧನ್ವಂತರಿ|ಕರೊನಾಕ್ಕೆ ಜಲನೇತಿ ಮದ್ದಾಗಬಹುದೇ?ಕೋವಿಡ್-19 ಅಥವಾ ಕರೊನಾದ ಸಮಸ್ಯೆ ಪ್ರಾರಂಭವಾದಾಗಿನಿಂದ ಹಲವಾರು ಔಷಧಗಳು, ವಿಧಾನಗಳು, ಚಿಕಿತ್ಸೆಗಳು ಫಲಕಾರಿಯಾಗಬಹುದು ಎಂದು ಊಹಿಸಿದರೂ ಇಲ್ಲಿಯವರೆಗೆ ಯಾವುದೂ ಸರಿಯಾಗಿ ಫಲ ನೀಡಿಲ್ಲ. ಆದರೆ ಇವುಗಳಲ್ಲಿ ಕೆಲವು ವಿಧಾನಗಳು ಹೇಗೆಂದರೆ – ನಾವು ಅವನ್ನು ಅನುಸರಿಸುವುದರಿಂದ ಕರೊನಾದ ಸಮಸ್ಯೆ ದೂರವಾಗುವುದು ಖಚಿತವಿಲ್ಲವಾದರೂ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅಂಥವುಗಳಲ್ಲಿ ಒಂದು ಜಲನೇತಿ. ಯೋಗಶಾಸ್ತ್ರದಲ್ಲಿ ಹೇಳಿದ ಆರು ರೀತಿಯ ಶುದ್ಧಿಕ್ರಿಯೆಗಳಲ್ಲಿ ಇದೂ ಒಂದು. ‘ಹಠಯೋಗ ಪ್ರದೀಪಿಕಾ’ ಗ್ರಂಥದಲ್ಲಿ, ‘ಕಪಾಲಶೋಧಿನೀ ಚೈವ ದಿವ್ಯದೃಷ್ಟಿಪ್ರದಾಯಿನೀ | ಜತ್ರೂರ್ಧ್ವಜಾತ ರೋಗೌಘಂ ನೇತಿರಾಶು ನಿಹಂತಿ ಚ || ಎಂದಿದ್ದಾರೆ. ‘ನೇತಿಯು ನೆಗಡಿ, ಶೀತ ಹಾಗೂ ಇತರ ಕಫ ರೋಗಗಳನ್ನು ದೂರ ಮಾಡುತ್ತದೆ. ನೇತ್ರವಿಕಾರ, ಕೂದಲು ಬೆಳ್ಳಗಾಗುವುದು, ತಲೆನೋವು ಮೊದಲಾದ ಕಾಯಿಲೆಗಳಲ್ಲಿ ನೇತಿಯು ಅತ್ಯಂತ ಲಾಭಪ್ರದ. ಅಂದರೆ ಕತ್ತಿನ ಮೇಲಿನ ಎಲ್ಲ ರೋಗಗಳನ್ನು ವಾಸಿ ಮಾಡುತ್ತದೆ’ ಎಂಬುದು ತಾತ್ಪರ್ಯ.

    ಸಾವಿರಾರು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿರುವ, ನೀಡುತ್ತಿರುವ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯ ಮುಖ್ಯಸ್ಥ ಡಾ. ಧನಂಜಯ್ ಕೇಳ್ಕರ್ ಅವರು ಜಲನೇತಿ ಸಹಾಯವಾಗಬಹುದು ಎಂಬುದನ್ನು ತಮ್ಮ ಆಸ್ಪತ್ರೆಯ ಉದಾಹರಣೆಯೊಂದಿಗೆ ಹೇಳುತ್ತಾರೆ. ಅವರ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶ್ರೂಷಕಿಯರನ್ನು 600 ಜನರ ಎರಡು ಗುಂಪು ಮಾಡಿದರು. ಒಂದು ಗುಂಪು ನಿತ್ಯ ಜಲನೇತಿ ಮಾಡಿದರೆ ಇನ್ನೊಂದು ಗುಂಪು ಮಾಡಲಿಲ್ಲ. ಅಷ್ಟೊಂದು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಜಲನೇತಿ ಮಾಡುತ್ತಿದ್ದ ಗುಂಪಿನವರಲ್ಲಿ ಯಾರಿಗೂ ಇಲ್ಲಿಯವರೆಗೆ ಸೋಂಕು ತಗುಲಿಲ್ಲ. ಆದರೆ ಜಲನೇತಿ ಮಾಡದ ಗುಂಪಿನಲ್ಲಿ 22 ಜನರಿಗೆ ಸೋಂಕು ತಗುಲಿದೆ. ಜಲನೇತಿಯ ಕಾರಣದಿಂದ ಮೂಗಿನ ಒಳಗಿನ ಲೋಳೆಯ ಪದರದ ಮೇಲೆ ಕುಳಿತುಕೊಳ್ಳುವ ವೈರಸ್ ಸಂಗ್ರಹವಾಗುವುದು ಕಡಿಮೆಯಾಗುತ್ತದೆಂಬುದು ಅವರ ಅನಿಸಿಕೆ. ಈ ಸಂಶೋಧನೆಯನ್ನು ಇನ್ನೂ ಕೆಲವು ತಿಂಗಳು ಮುಂದುವರಿಸಿ ಸ್ಪಷ್ಟ ಚಿತ್ರಣ ನೀಡುತ್ತೇನೆ ಎನ್ನುತ್ತಾರೆ ಅವರು. ಸಂಶೋಧನಾ ವರದಿ ಏನೇ ಬರಲಿ, ಆರೋಗ್ಯವನ್ನು ಕಾಪಾಡಲು ಇದು ಸಹಾಯ ಮಾಡುವುದಂತೂ ನಿಜ.

    ಪ್ರಕೃತಿಚಿಕಿತ್ಸೆ ಮತ್ತು ಯೋಗಪದ್ಧತಿಯಲ್ಲಿ ಜಲನೇತಿಯನ್ನು ರೋಗನಿರೋಧಕವಾಗಿ ಬಳಸುವುದರ ಜತೆಗೆ ಅಲರ್ಜಿ, ಪದೇಪದೆ ನೆಗಡಿಯಾಗುವ ಸಮಸ್ಯೆ, ಅಸ್ತಮಾ, ಸೈನಸ್​ಗೆ ಸಂಬಂಧಪಟ್ಟ ಸಮಸ್ಯೆಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ಇನ್ನುಳಿದ ಸಮಸ್ಯೆಗಳನ್ನು ಗುಣಪಡಿಸಲು ಬಳಸುತ್ತಾರೆ. ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ತುಂಬ ಸಮಸ್ಯೆಗಳಲ್ಲಿ ಜಲನೇತಿ ಪರಿಣಾಮಕಾರಿ ಎಂಬುದನ್ನು ಇತ್ತೀಚಿನ ಎಷ್ಟೋ ಸಂಶೋಧನೆಗಳೂ ದೃಢಪಡಿಸಿವೆ.

    ನಮ್ಮ ದೇಹದ ಉಷ್ಣತೆಯಷ್ಟೇ ಬಿಸಿಯಿರುವ ಅರ್ಧ ಲೋಟ ನೀರಿಗೆ ಒಂದು ಚಮಚ ಉಪ್ಪು ಹಾಕಬೇಕು. ಪ್ರಕೃತಿಚಿಕಿತ್ಸೆ ಅಥವಾ ಯೋಗಕೇಂದ್ರಗಳಲ್ಲಿ ಸಿಗುವ ನೇತಿ ಲೋಟ ಅಥವಾ ನೇತಿ ಪಾಟ್ ತೆಗೆದುಕೊಂಡು ಅದರಲ್ಲಿ ಈ ಉಪ್ಪುನೀರನ್ನು ಹಾಕಿಕೊಳ್ಳಬೇಕು. ಉಪ್ಪು ಹಾಕುವುದರಿಂದ ಆ ನೀರಿನ ಮತ್ತು ನಮ್ಮ ದೇಹದೊಳಗಿನ ದ್ರವಗಳ ಹಿಮ್ಮುಖ ಒತ್ತಡವು ಸಮನಾಗಿರುವುದರಿಂದ ನಮ್ಮ ಮೂಗಿನ ಒಳಗಿನ ಲೋಳೆಪದರಕ್ಕೆ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ. ಒಂದುವೇಳೆ ಕಿರಿಕಿರಿಯೆನಿಸಿದರೆ ಉಪ್ಪು ಹೆಚ್ಚು ಅಥವಾ ಕಡಿಮೆ ಆಯಿತು ಎಂದರ್ಥ. ಆ ನೀರಿಗೆ ಕಣ್ಣೀರಿನ ರುಚಿ ಇರಬೇಕು ಎಂದು ವೈದ್ಯಕೀಯ ಗ್ರಂಥಗಳು ಹೇಳುತ್ತವೆ.

    ಇದನ್ನೂ ಓದಿ: 31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ಈಗ ಮುಂದೆ ಬಾಗಿ ನಿಂತುಕೊಂಡು ತಲೆಯನ್ನು ಬಲಗಡೆ ಮತ್ತು ಸ್ವಲ್ಪ ಹಿಂದಕ್ಕೆ ವಾಲಿಸಿ ಎಡಗಡೆಯ ಹೊಳ್ಳೆಯಲ್ಲಿ ನೇತಿಲೋಟದ ತುದಿಯನ್ನು ಇಟ್ಟು, ಬಾಯಿಯಲ್ಲಿ ಉಸಿರಾಡುತ್ತ ನೀರು ಹೊಳ್ಳೆಯಲ್ಲಿ ಹರಿಯುವಂತೆ ಲೋಟವನ್ನು ಬಾಗಿಸಬೇಕು. ಆಗ ಬಲಗಡೆ ಹೊಳ್ಳೆಯ ಮೂಲಕ ನೀರು ಹೊರಗೆ ಹರಿದುಹೋಗುತ್ತದೆ. ಅರ್ಧ ನೀರು ಖಾಲಿಯಾಗುತ್ತಿದ್ದಂತೆ ಲೋಟವನ್ನು ತೆಗೆದು ತಲೆ ನೇರ ಮಾಡಿ; ಎಡಗಡೆ ಬಾಗಿ ಇದೇ ವಿಧಾನವನ್ನು ಪೂರ್ತಿ ನೀರು ಖಾಲಿಯಾಗುವವರೆಗೆ ಪುನರಾವರ್ತಿಸಬೇಕು. ನಂತರ ನೇರವಾಗಿ ನಿಂತು ಎಡ ಹೊಳ್ಳೆಯನ್ನು ಮುಚ್ಚಿ ಬಲಹೊಳ್ಳೆಯಲ್ಲಿ 5ರಿಂದ 10 ಬಾರಿ ಕಪಾಲಭಾತಿ ಮಾಡಿದಂತೆ ಉಸಿರಾಡಿ ಒಳಗೆ ಉಳಿದುಕೊಂಡ ನೀರನ್ನು ಹೊರಹಾಕಬೇಕು. ಎಡಗಡೆಯಲ್ಲೂ ಇದೇ ರೀತಿ ಮಾಡಬೇಕು. ಜಲನೇತಿ ಮಾಡುವಾಗ ಬಾಗಿದಂತೆ ಎರಡೂ ಕಡೆ ಬಾಗಿಯೂ ಇದೇ ರೀತಿ ಮಾಡಬೇಕು. ಇಲ್ಲವಾದರೆ ಸೈನಸ್​ಗಳಲ್ಲಿ ನೀರು ಉಳಿದು ನೆಗಡಿ, ಸೈನಸೈಟಿಸ್ ಮುಂತಾದ ತಾತ್ಕಾಲಿಕ ಸಮಸ್ಯೆಗಳಾಗಬಹುದು.

    ಮುಂಜಾನೆ ಖಾಲಿಹೊಟ್ಟೆಯಲ್ಲಿ ಜಲನೇತಿಯನ್ನು ಮಾಡುವುದು ಸೂಕ್ತ. ಆವಶ್ಯಕತೆಗೆ ಅನುಸಾರವಾಗಿ ಯಾವಾಗ ಬೇಕಿದ್ದರೂ ಮಾಡಬಹುದು. ಮೂಗಿನಲ್ಲಿ ರಕ್ತಸ್ರಾವವಿದ್ದವರು ಮಾಡಬಾರದು. ಕೇವಲ ಇದನ್ನು ಓದಿ ಮಾಡುವ ಬದಲು ಪರಿಣಿತರಿಂದಲೇ ಕಲಿತುಕೊಳ್ಳಬೇಕು.

    ರಾಜ್ಯದಲ್ಲಿ ಇಂದು ಹೊಸ ಕೋವಿಡ್​ 19 ಪ್ರಕರಣ 2062; ಮರಣ ಪ್ರಮಾಣ 54

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts