More

    ಬಿಜೆಪಿ ಸಂಸದರಿಗೆ ಮತ ಕೇಳುವ ನೈತಿಕತೆ ಇಲ್ಲ

    ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಬಿಜೆಪಿಯ 25 ಸಂಸದರಿಗೆ ಕರ್ನಾಟಕದಲ್ಲಿ ಮತ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಕಿಡಿಕಾರಿದರು.

    ರಾಜ್ಯ ಬರದಿಂದ ತತ್ತರಿಸಿದ್ದು ಸೆಪ್ಟೆಂಬರ್‌ನಲ್ಲೇ ನಷ್ಟದ ಅಂದಾಜು 18 ಸಾವಿರ ಕೋಟಿ ರೂ. ಅನ್ನು ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಎರಡು ಬಾರಿ ನಾನು, ಒಮ್ಮೆ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ತಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಆದರೂ ಒಂದೇ ಒಂದು ಸಭೆ ನಡೆಸದೇ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
    ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕ ಕೊಡಬೇಕಾದ ಹಣದಲ್ಲಿ 3,544 ಕೋಟಿ ರೂ. ಬಿಡುಗಡೆ ಮಾಡಿ ಕೇವಲ ಶೇ.19ನಷ್ಟು ನೀಡಿದೆ. ಹಣಕಾಸಿನ ಆಯೋಗ ಶಿಫಾರಸು ಮಾಡಿದ 5 ಸಾವಿರ ಕೋಟಿ ರೂ. ನೀಡಿಲ್ಲ. ನಿಯಮದಂತೆ ರಾಜ್ಯದಿಂದ ಸಂಗ್ರಹವಾದ 4.5 ಲಕ್ಷ ಕೋಟಿ ರೂ. ತೆರಿಗೆಯಲ್ಲಿ ಶೇ.13ರಷ್ಟು ಅಂದರೆ 6 ವರ್ಷದಲ್ಲಿ ರಾಜ್ಯಕ್ಕೆ 1.87 ಸಾವಿರ ಕೋಟಿ ರೂ. ಅನ್ನು ಕೇಂದ್ರ ನೀಡಬೇಕಿತ್ತು. ಇಲ್ಲಿಯವರೆಗೆ ಬಿಜೆಪಿಯ 25 ಸಂಸದರು ಇದ್ದರೂ ಅಮಿತ್ ಷಾ ಮತ್ತು ಮೋದಿ ಅವರ ಬಳಿ ರಾಜ್ಯದ ಪರವಾಗಿ ಮಾತನಾಡಿಲ್ಲ, ಅದೇ ಪಕ್ಕದ ರಾಜ್ಯದ ಸಂಸದರು ತಮ್ಮ ರಾಜ್ಯದ ಪ್ರಶ್ನೆ ಬಂದಾಗ ಒಗ್ಗಟ್ಟಾಗಿ ಪಕ್ಷ ಬೇಧ ಮರೆತು ಹೋರಾಡಿ ತಮ್ಮ ಪಾಲನ್ನು ಧಕ್ಕಿಸಿಕೊಳ್ಳುತ್ತಾರೆ. ಆದರೆ ನಮ್ಮ ರಾಜ್ಯದ ಸಂಸದರು ಈ ರೀತಿ ಮಾಡಿಲ್ಲ. ಅವರು ಯಾವ ಮುಖ ಹೊತ್ತು ಮತ ಕೇಳಲು ಹೋಗುತ್ತಾರೆ ಎಂದು ಪ್ರಶ್ನಿಸಿದರು.
    ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಘೋಷಣೆ ಮಾಡಿದ್ದು ಮಾತ್ರ ಬಿ.ಎಸ್.ಯಡಿಯೂರಪ್ಪ, ಆದರೆ ನಿಜವಾಗಿ ಹಣ ಮತ್ತು ಜಾಗ ಕೊಟ್ಟಿದ್ದು, ಸಿದ್ದರಾಮಯ್ಯ ಸರ್ಕಾರ ಎಂದ ಕೃಷಿ ಸಚಿವ, ಮೋದಿ ಅವರು ನಾನೇ ಗ್ಯಾರಂಟಿ ಎಂದು ಹೇಳಿದ್ದು ಬಿಟ್ಟರೆ ದೇಶದ ಜನತೆಗೆ 10 ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೊಡುಗೆ ನೀಡಿಲ್ಲ. ಕರೋನ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಎಲ್ಲ ದೇಶಗಳು ತತ್ತರಿಸಿದ ಬಳಿಕ ಕಟ್ಟಕಡೆಗೆ ಕರೊನಾ ಬಂತು. ಅಷ್ಟರೊಳಗೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು. ಅದರಲ್ಲೂ ಭ್ರಷ್ಟಚಾರ ಮಾಡಿದ್ದಾರೆ ಎಂದು ದೂರಿದರು.
    16 ಲಕ್ಷ ಕೋಟಿ ರೂ. ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದ ನರೇಂದ್ರ ಮೋದಿ, ರೈತರ ಸಾಲಮನ್ನಾ ಮಾಡಿಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದ ಬಳಿಕ ರೈತರ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಲಿದೆ. ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಸ್ಟೈಫಂಡ್ ನೀಡಿ ಉದ್ಯೋಗ ನೀಡುತ್ತೇವೆ. ಮಹಿಳೆಯರಿಗೆ ಕೇಂದ್ರದ ಒಂದು ಲಕ್ಷ, ರಾಜ್ಯದ 24 ಸಾವಿರ ನೀಡುತ್ತೇವೆ. ಗ್ಯಾರಂಟಿಗಳನ್ನು ನಿಲ್ಲಿಸಲು ಬಿಜೆಪಿ ಜೆಡಿಎಸ್ ಮಿತ್ರ ಪಕ್ಷಗಳು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಬಿಜೆಪಿಯವರು ಯಾವತ್ತು ಬಡವರ ಪರ ಇಲ್ಲ ಎಂಬುದು ಸಾಬೀತಾಗಿದೆ ಎಂದರು.
    ಕಾಂಗ್ರೆಸ್ ಪ್ರಮುಖರಾದ ಎಚ್.ಎಸ್.ಸುಂದರೇಶ್, ಎಂ.ಶ್ರೀಕಾಂತ್, ಜಿ.ಡಿ.ಮಂಜುನಾಥ್, ರಮೇಶ್ ಹೆಗಡೆ, ಚಂದನ್, ಚಿನ್ನಪ್ಪ, ಶಿವಾನಂದ್, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

    ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿಗೆ ಅನ್ಯಾಯ
    ಸಂಸದ ಪ್ರಜ್ವಲ್ ರೇವಣ್ಣ ಕುರಿತು ಅಮಿತ್ ಷಾ ಅವರಿಗೆ ಪೆನ್‌ಡೈವ್ ಬಗ್ಗೆ ಮೊದಲೇ ಗೊತ್ತಿತ್ತು. ಹಾಗಾಗಿ ಅವರ ಸ್ಪರ್ಧೆಗೆ ವಿರೋಧಿಸಿದ್ದರು. ಆದರೂ ಜೆಡಿಎಸ್ ವರಿಷ್ಟರ ಒತ್ತಾಯಕ್ಕೆ ಮಣಿದು ಟಿಕೆಟ್ ನೀಡಿದರು. ಇಬ್ಬರು ನೆಂಟಸ್ಥಿಕೆ ಮಾಡಿದ್ದಾರೆ. ಮೋದಿ ಸೇರಿ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡು ಪ್ರಜ್ವಲ್ ಪರ ಮತ ಕೇಳಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ. ಇದು ಗಂಭೀರ ಪ್ರಕರಣವಾಗಿದ್ದು, ಶಿಕ್ಷೆಯಾಗುವುದು ಖಂಡಿತ. ಇದರಿಂದ ಬಜಾವ್ ಆಗಲು ಸಾಧ್ಯವಿಲ್ಲ ಮತ್ತು ಎಸ್‌ಐಟಿ ಈಗಾಗಲೇ ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಸಚಿವ ಚೆಲುವರಾಯಸ್ವಾಮಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts