More

    ಈ 21 ದಿನಗಳಲ್ಲಿ ನಿಮ್ಮ ಆರೋಗ್ಯ ಹೇಗೆ ಸುಧಾರಿಸಿರುತ್ತೆ ನೋಡಿ…

    ಈ 21 ದಿನಗಳಲ್ಲಿ ನಿಮ್ಮ ಆರೋಗ್ಯ ಹೇಗೆ ಸುಧಾರಿಸಿರುತ್ತೆ ನೋಡಿ...ಪ್ರಾಯ ಮೂವತ್ತರ ಹದಿಹರೆಯದ ವ್ಯಕ್ತಿ ದಿಢೀರನೆ ಬಂದು ‘ಡಾಕ್ಟ್ರೇ, ನಾನು ಗೆದ್ದಿದ್ದೇನೆ, ಸಿಗರೇಟು ಸೇವನೆಯನ್ನು ಪೂರ್ಣವಾಗಿ ನಿಲ್ಲಿಸಿಬಿಟ್ಟೆ’ ಎಂದಾಗ ಆತನ ಕಣ್ಣಂಚುಗಳಲ್ಲಿ ಆನಂದಬಾಷ್ಪ ಹನಿಯತೊಡಗಿತ್ತು. ನಾನೂ ಆನಂದದಿಂದ ಅನಿರ್ವಚನೀಯನಾಗಿದ್ದೆ. ಕಾರಣವಿಲ್ಲದೆ ಅಲ್ಲ. ಆ ವ್ಯಕ್ತಿಯ ಬದುಕಿನಲ್ಲಿ ಅದೆಷ್ಟೋ ಹುಟ್ಟುಹಬ್ಬಗಳು, ಹೊಸವರ್ಷದ ದಿನಗಳು, ವಿಶೇಷ ದಿನಗಳು ಹಾದುಹೋಗಿದ್ದವು. ಪ್ರತಿ ಸಂದರ್ಭದಲ್ಲೂ ಧೂಮಪಾನ ಬಿಡುತ್ತೇನೆಂದು ಆತ ಮಾಡುತ್ತಿದ್ದ ಸಂಕಲ್ಪಗಳೆಲ್ಲ ನುಚ್ಚುನೂರಾಗಿ ಹೋಗಿದ್ದವು. ಆಶಯ ಪೂರೈಸಲು ಅನಿರೀಕ್ಷಿತವಾಗಿ, ಅಯೋಜಿತವಾಗಿ ಬಂದು ನಿಂತ 21 ದಿನಗಳ ಬಿಡುವೇ ಬೇಕಾಯಿತು ನೋಡಿ. ಧೂಮಪಾನ ವ್ಯಸನದಿಂದ ದೂರ ಸರಿಯಬೇಕೆಂಬ ಆಸೆಯೇನೋ ಆತನಿಗೆ ಇತ್ತು. ಆದರೆ ಮನೆಮಂದಿಗೆ ಈ ವ್ಯಸನದ ಸುಳಿವೂ ಇರಲಿಲ್ಲ! ಈಗ ಹಾಗಲ್ಲ, ದಿನಪೂರ್ತಿ ಕುಟುಂಬದವರ ಸಹವಾಸ. ಮನೆಬಿಟ್ಟು ಕದಲುವಂತಿಲ್ಲ. ಕೊಂಡುಕೊಳ್ಳೋಣ ಎಂದರೆ ಅಂಗಡಿಗಳೂ ತೆರೆದಿಲ್ಲ. ಹೋಗಲಿ, ಇದ್ದುದರನ್ನು ಸೇದೋಣವೆಂದರೆ ಅದಕ್ಕೆ ಸ್ಥಳವಾದರೂ ಎಲ್ಲಿದೆ? ಗುಟ್ಟು ರಟ್ಟಾಗುವ ಅಂಜಿಕೆ! ಚಟ ಹೋಗಲು ಇವೆರಡೇ ಸಾಕಾಯಿತು ನೋಡಿ!

    ಮದ್ಯಪಾನ, ಧೂಮಪಾನದಂತಹ ಸಾಮಾಜಿಕ ಪಿಡುಗುಗಳಿಂದ ಹೊರಬರಲು ಮನಸ್ಸಿದ್ದ ಅದೆಷ್ಟೋ ಜನರಿಗೆ 21 ದಿನಗಳ ಈ ದಿಗ್ಬಂಧನ ಅಪರೂಪದ ಮಾರ್ಗವನ್ನು, ಅವಕಾಶವನ್ನು ಕಲ್ಪಿಸಿದೆ. ಇಂತಹ ಬಿಡುವು ಜೀವನದಲ್ಲಿ ಮತ್ತೊಮ್ಮೆ ಬರದು. ಹಾಗೆ ನೋಡಿದರೆ ಇಂತಹ ವ್ಯಸನಗಳಿಂದ ದೂರವಾಗಲು 21 ದಿನಗಳೆಂದರೆ ಯಥೇಚ್ಛವಾಯಿತು. ಭಾರತದಿಂದ ಅಮೆರಿಕಕ್ಕೆ ಪ್ರವಾಸ ಹೋದ 80 ವರ್ಷ ಪ್ರಾಯದ ವ್ಯಕ್ತಿಗೆ ತಾನು ನಿದ್ರಿಸುವ ನಡುರಾತ್ರಿ ಹೊತ್ತಿನಲ್ಲಿ ಮಧ್ಯಾಹ್ನದ ಪುಷ್ಕಳ ಭೋಜನ ಮಾಡುವ ಯೋಗ ಬಂದಿರುತ್ತದೆ. ಇಲ್ಲಿಯ ರಾತ್ರಿಯ ವೇಳೆಯಲ್ಲಿ ಅಲ್ಲಿ ಮಲವಿಸರ್ಜನೆ ಸಮಯ ಎದುರಾಗುತ್ತದೆ. ಎಂಬತ್ತು ವರ್ಷಗಳ ಈ ಹವ್ಯಾಸಗಳನ್ನೇ ಒಂದೆರಡು ವಾರಗಳಲ್ಲಿ ಬದಲಿಸಲು ಸಾಧ್ಯವಾಗುತ್ತದೆ ಎಂದಮೇಲೆ ಎಲ್ಲ ಅಭ್ಯಾಸಗಳನ್ನೂ ಕೋವಿಡ್-19 ನೀಡಿದ ಬಿಡುವಿನ ವೇಳೆಯಲ್ಲಿ ತಿದ್ದಿಕೊಳ್ಳಲು ಯಾಕೆ ಸಾಧ್ಯವಾಗುವುದಿಲ್ಲ?

    ಬದಲಾವಣೆ ಎಂಬುದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಹಾಗೆಂದು ಬದಲಾವಣೆಯಿಂದ ಒಳಿತೂ ಆಗಬಹುದು, ಕೆಡುಕೂ ಆಗಬಹುದು. ಬಾಳಿನಲ್ಲಾಗುವ ಒಳಿತು ಸ್ವಯಂಪ್ರೇರಿತವಾಗಿಯೇ ಆಗಬೇಕೆಂದೇನೂ ಇಲ್ಲ, ಹೇರಿಕೆಯಿಂದಲೂ ಆಗಬಹುದೆಂಬುದಕ್ಕೆ ಇದೊಂದು ಸಾಕ್ಷಿ. ಮನೆಯಲ್ಲಿ ಸಂಬಂಧಗಳ ಸುಧಾರಣೆ, ತನ್ನ ಜೀವನದ ಆತ್ಮವಿಮರ್ಶೆ, ವೃತ್ತಿಯಲ್ಲಿ ಕೌಶಲ ಹೆಚ್ಚಿಸಲು ಮಾಡಿಕೊಳ್ಳಬೇಕಾದ ಮಾರ್ಪಾಡುಗಳ ಪರಾಮರ್ಶೆ, ನಡೆದು ಬಂದ ದಾರಿಯ ಅವಲೋಕನ, ಮುಂದಿನ ಹಾದಿಯ ಚಿಂತನ ಮಂಥನ ಎಲ್ಲದಕ್ಕೂ ಅತ್ಯಂತ ಪ್ರಶಸ್ತ ಕಾಲವಿದು. ಕೆಲಸಕ್ಕೆ ಸೇರುವಾಗಲಾದರೂ ಅಷ್ಟೇ. ಸಂಬಳವೆಷ್ಟು, ಕೆಲಸದ ಅವಧಿ ಎಷ್ಟು, ರಜೆಗಳು ಎಷ್ಟು – ಈ ಮೂರನ್ನೇ ವಿಚಾರಿಸಿ ವೃತ್ತಿ ಬದುಕಿಗೆ ಕಾಲಿಟ್ಟ ಅನೇಕ ಮಂದಿ ಸಿಗುತ್ತಾರೆ! ವೃತ್ತಿಯಲ್ಲಿ ಇರಬೇಕಾದ ನೈಪುಣ್ಯ, ಪ್ರಾವೀಣ್ಯ, ಕೌಶಲಗಳ ಬಗ್ಗೆ ಒಂದಿನಿತೂ ಚಿಂತಿಸಿರುವುದಿಲ್ಲ. ತಾನು ಬಾಳಿದ್ದು ಸಾರ್ಥಕವಾಗಬೇಕಾದರೆ ವೃತ್ತಿ ಬದುಕು ಮೌಲ್ಯಯುತ ಆಗಿರಬೇಕು. ಹೀಗೆ ಜೀವನದ ಮೌಲ್ಯವರ್ಧನೆಗೆ ಆಯುರ್ವೆದ ಹಲವಾರು ಸೂತ್ರಗಳನ್ನು ಪೋಣಿಸಿಕೊಟ್ಟಿದೆ. ಅವುಗಳ ಅನುಷ್ಠಾನದಿಂದ ಬದುಕು ಸ್ವಸ್ಥವಷ್ಟೇ ಅಲ್ಲ, ಸಾರ್ಥಕವೂ, ಸುಂದರವೂ ಆಗಲಿದೆ.

    ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಶುಲ್ಕ ವಿಧಿಸಬಾರದು: ಸುಪ್ರೀಂ ಕೋರ್ಟ್​ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts