More

    ಅಥಣಿ: ದುಡಿಮೆಯಲ್ಲಿ ದಾನ, ಧರ್ಮ ಮಾಡಿ

    ಅಥಣಿ: ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗ ದಾನ, ಧರ್ಮ ಮಾಡಬೇಕು. ಧರ್ಮ, ದಯೆ ಹಾಗೂ ದಾನದ ಮೇಲೆ ಭಾರತ ದೇಶ ನಿಂತಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

    ತಾಲೂಕಿನ ಮಲಾಬಾದ ವಿಮೋಚನಾ ವಸತಿ ಶಾಲೆಯಲ್ಲಿ ಜ.4ರಂದು ದಾಸೋಹಿಗಳ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯಕ್ಕೆ ಮಾತೋಶ್ರೀ ಸೋನಮ್ಮತಾಯಿ ಸುಬ್ರಾಯಗೌಡ ಪಾಟೀಲರ ನಾಮಕರಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಸೇವೆ ಮಾಡುವ ನಿರ್ಮಲ ಭಾವ ಎಲ್ಲರಿಗೂ ಬರಬೇಕು. ದೇವರು ಸಾಕಷ್ಟು ಅನುಗ್ರಹಿಸುತ್ತಾನೆ. ಆದರೆ, ಕೆಲವರಲ್ಲಿ ಅದು ಬರುವುದಿಲ್ಲ. ದೀನ, ದಲಿತರ ಹಾಗೂ ಬಡವರಿಗೆ ನಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ದಾನ ಮಾಡಬೇಕು. ಇಂದು ವಿಶ್ವವೇ ಭಾರತ ದೇಶವನ್ನು ಕೊಂಡಾಡುತ್ತಿದೆ. ಭಾರತ ಎಂಬುದು ಬೆಳಕಿನ ಜ್ಞಾನದ ಕಣಜವಾಗಿದೆ. ಸಾವಿರಾರು ವರ್ಷಗಳ ಹಿಂದೆಯೂ ಸಹ ಮಹಾನ್ ತಪಸ್ವಿ, ಋಷಿ ಮುನಿಗಳು ಉತ್ತಮ ಸಂದೇಶ, ಮಾತುಗಳನ್ನು ಹೇಳಿದ್ದಾರೆ. ಕಣ್ಣು, ಕಿವಿ, ಕೈ, ಮಾತು ಸ್ವಚ್ಛವಾಗಿರಬೇಕು.ಅದು ನಮ್ಮ ಬದುಕನ್ನು ಸಮೃದ್ಧಗೊಳಿಸುತ್ತದೆ. ವಿಜಯಪುರದ ಸೋನಮ್ಮತಾಯಿ ಪಾಟೀಲರ ಸೇವೆ ಮತ್ತು ಬಿ.ಎಲ್.ಪಾಟೀಲರ ಶ್ರಮ ಇದಕ್ಕೆ ಸಾಕ್ಷಿಯಾಗಿದೆ ಎಂದರು.

    ಮೈಸೂರು ಸುತ್ತೂರುಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದವರ ಏಳಿಗೆಗೆ ತಮ್ಮ ಇಡೀ ಬದುಕನ್ನು ಸಮರ್ಪಿಸಿದ ಬಿ.ಎಲ್.ಪಾಟೀಲರ ಕಾರ್ಯ ಶ್ಲಾಘನೀಯ. ಇಲ್ಲಿ ಕಲಿಯುವ ಮಕ್ಕಳಿಗೆ ದಾನ ಮಾಡಿರುವ ಮಹನೀಯರಿಗೆ ಫಲ ಸಿಗಲಿದೆ. ಮುಂದೆ ಅವರ ಮಕ್ಕಳೂ ಕೂಡ ಶಿಕ್ಷಣ ಕಲಿತು ಒಳ್ಳೆಯ ವ್ಯಕ್ತಿಗಳಾಗಿ ದಾನ ಮಾಡುವ ಗುಣ ಬೆಳೆಯಲಿ ಎಂದರು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಆಧುನಿಕ ಅರಿವಿನ ಅನುಭವ ಮಂಟಪವಾಗಿ ವಿಮೋಚನಾ ಶಾಲೆ ಮಾದರಿಯಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ಈ ಸಂಸ್ಥೆಯ ಜೀವಾಳ ದಾನಿಗಳು. ಅವರ ಸಂಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಸುಮಾರು 50ಕ್ಕೂ ಹೆಚ್ಚು ಸ್ವಾಮಿಗಳು ದಾನ ನೀಡಿ, ನಮಗೆ ಆಸರೆಯಾಗಿ ಸಂಸ್ಥೆ ಬೆಳೆಯಲು ಕಾರಣೀಕರ್ತರಾಗಿದ್ದಾರೆ ಎಂದರು.

    ದಾನಿಗಳಾದ ವಿಜಯಪುರದ ಸೋನಮ್ಮತಾಯಿ ಪಾಟೀಲ ಮಾತನಾಡಿದರು. ಬಳಿಕ ಸೋನಮ್ಮತಾಯಿ ಪಾಟೀಲರ ಮೊಮ್ಮಗ ಅಮೆರಿಕದಲ್ಲಿರುವ ಡಾ.ಪ್ರಭುಶಂಕರ ಪಾಟೀಲ ಅವರು ವಿಮೋಚನಾ ಶಾಲೆಗೆ 5 ಲಕ್ಷ ರೂ.ದೇಣಿಗೆ ನೀಡಿದರು. ದಾನಿಗಳು ಮತ್ತು ಬಿ.ಎಲ್.ಪಾಟೀಲ ದಂಪತಿಯನ್ನು ಸತ್ಕರಿಸಲಾಯಿತು. ಮುದಗಲ್ಲದ ಮಹಾಂತ ಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ಸ್ವಾಮೀಜಿ, ಸುತ್ತೂರಿನ ಕಿರಿಯ ದೇಶಿಕೇಂದ್ರ ರಾಜಯೋಗಿಂದ್ರ ಸ್ವಾಮೀಜಿ, ಕುಮುದಾತಾಯಿ, ವಾಗ್ದಾದೇವಿ ತಾಯಿ, ಶಾಂತಾದೇವಿ ಪಾಟೀಲ, ವಿ.ಎಸ್.ಮಾಳಿ, ಸಿದ್ದನಗೌಡ ಪಾಟೀಲ, ಶರದ ಸವದಿ, ಮಲ್ಲಿಕಾರ್ಜುನ ಕನಶೆಟ್ಟಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts