More

    ಒಂದನೇ ತರಗತಿಗೆ 111 ಮಕ್ಕಳು

    ಸಂದೀಪ್ ಸಾಲ್ಯಾನ್ ಬಂಟ್ವಾಳ

    2019-20ನೇ ಶೈಕ್ಷಣಿಕ ವರ್ಷ ಇನ್ನೂ ಮುಕ್ತಾಯವಾಗಿಲ್ಲ. ನಾಲ್ಕು ತಿಂಗಳು ಬಾಕಿ ಇರುವಾಗಲೇ ಮುಂದಿನ ಶೈಕ್ಷಣಿಕ ವರ್ಷಕ್ಕೆ (2020-21)ಒಂದನೇ ತರಗತಿಯ ದಾಖಲಾತಿ ಪೂರ್ಣಗೊಂಡಿದೆ!

    ಇದ್ಯಾವುದೋ ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಯ ಸ್ಥಿತಿ ಇರಬಹುದು ಎಂಬುದು ನಿಮ್ಮ ಊಹೆ ನಿಮ್ಮದಾಗಿದ್ದರೆ ತಪ್ಪು. ಈ ಹೊಸ ದಾಖಲೆ ಸೃಷ್ಟಿಸಿರುವುದು ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ.
    2015ರಲ್ಲಿ 33ಮಕ್ಕಳಿದ್ದ ಕಾರಣಕ್ಕೆ ಮುಚ್ಚುವ ಹಂತ ತಲುಪಿದ್ದ ಶಾಲೆ 2019ರ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ 108 ಮಕ್ಕಳನ್ನು ದಾಖಲಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಈ ವರ್ಷವೂ ಬ್ಯಾನರ್ ಪ್ರಚಾರವಿಲ್ಲ. ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಕೂಡ ಮಾಡದಿದ್ದರೂ
    ಅವಧಿಗೆ ಮುನ್ನವೇ ಶಾಲೆಯ ಒಂದನೇ ತರಗತಿ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ನಿರೀಕ್ಷೆಗಿಂತಲೂ ಅಧಿಕ ವಿದ್ಯಾರ್ಥಿಗಳು ಶಾಲೆ ಪ್ರವೇಶ ಬಯಸಿದ್ದಾರೆ. ಈಗಾಗಲೇ ಒಂದನೇ ತರಗತಿಗೆ 111 ಮಕ್ಕಳು, ಎಲ್‌ಕೆಜಿಗೆ 70 ಹಾಗೂ ಯುಕೆಜಿಗೆ 83 ಮಕ್ಕಳು ದಾಖಲಾಗಿದ್ದು, ಒಂದನೇ ಎ, ಬಿ, ಸಿ, ತರಗತಿಗಳನ್ನು ತೆರೆಯಲಾಗಿದೆ. ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆ ಮುಚ್ಚುತ್ತಿದೆ ಎನ್ನುವ ಈ ಕಾಲಘಟ್ಟದಲ್ಲಿ ಹೊಸ ಶಿಕ್ಷಣ ಕ್ರಾಂತಿಗೆ ದಡ್ಡಲಕಾಡು ಶಾಲೆ ಮುನ್ನುಡಿ ಬರೆದಿದೆ.

    ಏನು ಕಾರಣ?
    ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ, ಸರ್ಕಾರದಿಂದ ಮಾತ್ರವಲ್ಲದೆ ಶಾಲಾ ದತ್ತು ಸಂಸ್ಥೆಯಿಂದಲೂ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳ ವಿತರಣೆ, ಸುಂದರ ಶಾಲಾ ಪರಿಸರ, ಮೂರು ಅಂತಸ್ತಿನಲ್ಲಿರುವ ಸುಸಜ್ಜಿತ ಶಾಲಾ ಕೊಠಡಿ, ತರಗತಿಗೊಬ್ಬರಂತೆ ಶಿಕ್ಷಕರ ನಿಯೋಜನೆ, ಕರಾಟೆ, ಯೋಗ, ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಗಳ ಉಚಿತ ತರಬೇತಿ, ವಿದ್ಯಾರ್ಥಿಗಳನ್ನು ಕರೆದೊಯ್ಯಲು 4 ಬಸ್ಸಿನ ವ್ಯವಸ್ಥೆ. ಹೀಗೆ ಖಾಸಗಿ ಶಾಲೆಯ ವ್ಯವಸ್ಥೆಯನ್ನು ಮೀರಿಸುವ ಸೌಲಭ್ಯಗಳು ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವುದರಿಂದ ಸಹಜವಾಗಿಯೇ ಪಾಲಕರ ಆಕರ್ಷಣೆ ದಡ್ಡಲಕಾಡು ಶಾಲೆಯತ್ತ ಸೆಳೆದಿದೆ. ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ದಡ್ಡಲಕಾಡು ಶಾಲೆಯನ್ನು ದತ್ತು ಸ್ವೀಕರಿಸಿದ ಬಳಿಕ ಶಾಲೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಂಟು ನೂರರ ಗಡಿ ದಾಟಿದೆ.


    ಒಂದನೇ ಹಾಗೂ ಪೂರ್ವಪ್ರಾಥಮಿಕ ತರಗತಿಗತಿಗಳಿಗೆ ಫೆಬ್ರವರಿ ಆರಂಭದಿಂದ ದಾಖಲಾತಿ ಆರಂಭಿಸಿದ್ದೇವೆ. ಒಂದನೇ ತರಗತಿಗೆ 111 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಇನ್ನೂ ಅನೇಕ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಲು ಬರುತ್ತಿದ್ದಾರೆ. ತರಗತಿಯಲ್ಲಿ ಸ್ಥಳವಕಾಶ, ಶಿಕ್ಷಕರ ಲಭ್ಯತೆಗೆ ಅನುಗುಣವಾಗಿ ಮಕ್ಕಳ ಸೇರ್ಪಡೆಯನ್ನು ಸೀಮಿತಗೊಳಿಸಿದ್ದೇವೆ.
    ಮೌರೀಸ್ ಡಿಸೋಜ
    ಮುಖ್ಯ ಶಿಕ್ಷಕ, ದಡ್ಡಲಕಾಡು ಶಾಲೆ


    ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಇದರಿಂದಾಗಿ ಸರ್ಕಾರಿ ಶಾಲೆಗಳ ಮೇಲೆ ಪಾಲಕರಿಗೆ ಹೆಚ್ಚಿನ ಒಲವು ಮೂಡಿತ್ತು. 108 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಮೂಲಕ ದಡ್ಡಲಕಾಡು ಸರ್ಕಾರಿ ಶಾಲೆ ರಾಜ್ಯದಲ್ಲಿಯೇ ಹೊಸ ಸಂಚಲನ ಮೂಡಿಸಿತ್ತು. ಇದರಿಂದಾಗಿ ಈ ಬಾರಿ ಸರತಿಯಲ್ಲಿ ನಿಂತು ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿದ್ದಾರೆ. ಇಂತಹ ಸರ್ಕಾರಿ ಶಾಲೆ ರಾಜ್ಯದ ಪ್ರತಿ ಗ್ರಾಮದಲ್ಲೊಂದು ನಿರ್ಮಾಣ ಆಗಬೇಕು. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ತುದಿಗಾಲಲ್ಲಿ ನಿಲ್ಲುವಂತೆ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ತೋರಿಸಿಕೊಟ್ಟಿದೆ.
    ಪ್ರಕಾಶ್ ಅಂಚನ್
    ಅಧ್ಯಕ್ಷ, ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ದಡ್ಡಲಕಾಡು







    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts