More

    ಡ್ರಗ್ಸ್ ಮಟ್ಟ ಹಾಕಲು ಇಲಾಖೆ ಪಣ, ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ

    ಮಂಗಳೂರು/ಉಡುಪಿ: ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಬೆಂಗಳೂರಿಗೆ ಸೀಮಿತವಲ್ಲ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ರಾಜ್ಯಾದ್ಯಂತ ನಡೆಯುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.

    ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

    ಬಂಧಿತರನ್ನು ಪೊಲೀಸ್ ಇಲಾಖೆ ಡ್ರಗ್ಸ್ ಮಾರಾಟಗಾರರು ಮತ್ತು ವ್ಯಸನಿಗಳೆಂದು ಪರಿಗಣಿಸಿ ತನಿಖೆ ನಡೆಸುತ್ತಿದೆ. ಡ್ರಗ್ಸ್ ಸಂಪೂರ್ಣ ಮಟ್ಟ ಹಾಕಲು ಇಲಾಖೆ ಪಣ ತೊಟ್ಟಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಕಾಯ್ದೆಗಳು ಕಠಿಣವಾಗಿದೆ. ಇದಕ್ಕೆ ಪೂರಕವಾಗಿ ದಾಳಿ, ತನಿಖೆ ಯಾವ ರೀತಿ ನಡೆಸಬೇಕೆಂದು ಪೊಲೀಸರಿಗೆ ತರಬೇತಿ ನೀಡಲಾಗಿದೆ. ಮಾದಕ ವಸ್ತುಗಳನ್ನು ನಿಯಂತ್ರಿಸುವಲ್ಲಿ ಎಲ್ಲ ಪೊಲೀಸ್ ಠಾಣೆಗಳಿಗೂ ಜವಾಬ್ದಾರಿ ಇದೆ ಎಂದರು.

    ಡ್ರಗ್ಸ್ ಆಂಧ್ರಪ್ರದೇಶ, ಗೋವಾದಿಂದ ಮಾತ್ರವಲ್ಲ, ವಿದೇಶದಿಂದಲೂ ಬರುತ್ತದೆ. ತಂಬಾಕು, ಕಬ್ಬು ಬೆಳೆ ಜತೆ ಗಾಂಜಾ ಬೆಳೆಸುವ ಬಗ್ಗೆೆ ಮಾಹಿತಿ ದೊರೆತಿದ್ದು, ಕಾರ್ಯಾಚರಣೆ ನಡೆಸಲಾಗುವುದು. ವಿದೇಶೀಯರು ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ಇದ್ದು, ಮಾದಕ ವಸ್ತು ಸಾಗಾಟ, ಸೈಬರ್ ಅಪರಾಧ, ವೇಶ್ಯಾವಾಟಿಕೆ ಮೊದಲಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜತೆಗೂ ಸಮನ್ವಯ ಸಾಧಿಸಲಾಗಿದೆ ಎಂದು ಹೇಳಿದರು.

    ತಿಳಿಯದೆ ಡ್ರಗ್ಸ್ ಸೇವನೆ ಮಾಡಿರಬಹುದು. ಅದರೆ ಪೂರೈಕೆ ಮಾಡುವವರು ತಿಳಿದೇ ಮಾಡಿರುತ್ತಾರೆ. ಡ್ರಗ್ಸ್ ಸೇವನೆಯನ್ನು ತಡೆಯುವುದು ಹೆತ್ತವರು, ಶಿಕ್ಷಕರು ಸೇರಿದಂತೆ ಎಲ್ಲರ ಸಾಮೂಹಿಕ ಹೊಣೆಗಾರಿಕೆ ಎಂದರು.
    ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್, ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್, ದ.ಕ. ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್, ಉಡುಪಿ ಎಸ್ಪಿ ವಿಷ್ಣುವರ್ಧನ್, ಡಿಸಿಪಿಗಳಾದ ವಿನಯ್ ಗಾಂವ್ಕರ್, ಅರುಣಾಂಗ್ಶುಗಿರಿ, ಉಡುಪಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

    ಹೈ ಪ್ರೊಫೈಲ್ ವಿನಾಯಿತಿ ಇಲ್ಲ: ಡ್ರಗ್ಸ್ ವಿರೋಧಿ ಕಾರ್ಯಾಚರಣೆಗೆ ಸರ್ಕಾರ ಮುಕ್ತ ಸ್ವಾತಂತ್ರೃ ನೀಡಿದೆ. ಈ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ. ಕಾನೂನಿನ ಎದುರು ಎಲ್ಲರೂ ಸಮಾನ. ಹೈ ಪ್ರೊಫೈಲ್-ಲೋ ಪ್ರೊಫೈಲ್ ಎಂದು ನೋಡದೆ ಪೊಲೀಸ್ ಇಲಾಖೆ ಡ್ರಗ್ಸ್ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸುತ್ತಿದೆ ಎಂದು ಪ್ರವೀಣ್ ಸೂದ್ ಹೇಳಿದರು.

    ಮಂಗಳೂರು ನಂಟು: ಬೆಂಗಳೂರು ಮತ್ತು ಮಂಗಳೂರು ಡ್ರಗ್ಸ್‌ನ ದೊಡ್ಡ ಹಬ್ ಆಗಿದ್ದು, ಇದನ್ನು ಮಟ್ಟ ಹಾಕಲು ವ್ಯವಸ್ಥಿತ ಕಾರ್ಯಾಚರಣೆ ನಡೆಸುವಂತೆ ಐಜಿಪಿ, ಎಸ್ಪಿಗಳಿಗೆ ಸೂಚಿಸಿದ್ದೇನೆ. ಬೆಂಗಳೂರಿನಲ್ಲಿ ಡ್ರಗ್ಸ್ ಸಾಗಾಟಗಾರರ ಬಂಧನ ಪ್ರಕರಣಗಳಿಗೆ ಸಂಬಂಧಿಸಿ ಮಂಗಳೂರಿನ ನಂಟು ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಏನೂ ಹೇಳಲಾಗದು ಎಂದು ಡಿಜಿಪಿ ಹೇಳಿದರು.

    ಪೊಲೀಸರ ಟಿಎ-ಡಿಎ ಪಾವತಿಗೆ ಸೂಚನೆ: ಕರೊನಾ, ಲಾಕ್‌ಡೌನ್ ಕಾರಣಗಳಿಂದ ಬಾಕಿಯಾಗಿರುವ ಪೊಲೀಸರ ಪ್ರಯಾಣ ಮತ್ತು ತುಟ್ಟಿಭತ್ಯೆ ಪಾವತಿಸಲು ನಿರ್ದೇಶನ ನೀಡಲಾಗಿದೆ. ಬಾಕಿ ಪಾವತಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು. ಪೊಲೀಸರು ಕರೊನಾ ಸಂದರ್ಭದಲ್ಲಿ ಸ್ವಯಂ ರಕ್ಷಣೆ, ಜನರ ರಕ್ಷಣೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಕರೊನಾ ಜತೆಗೆ ಪೊಲೀಸ್ ಕೆಲಸಗಳು ಶೇ.100ರಷ್ಟು ಪುನರಾರಂಭಗೊಂಡಿವೆ. ಇಲಾಖೆಯ ಕಾರ್ಯವೈಖರಿಯನ್ನು ಇನ್ನಷ್ಟು ಪರಿಣಾಮಗೊಳಿಸಲು ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

    112 ಚುರುಕು: ಉಭಯ ಜಿಲ್ಲೆಗಳ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಜನರಿಗೆ ಪೊಲೀಸ್ ಇಲಾಖೆ ಇನ್ನಷ್ಟು ಹತ್ತಿರವಾಗುವ ದೃಷ್ಟಿಯಿಂದ 112 ಸಂಖ್ಯೆ ಚುರುಕಾಗಿ ಅನುಷ್ಠಾನಗೊಳಿಸಬೇಕು. ಇದು ಬೆಂಗಳೂರು ನಗರದಲ್ಲಿ ಉತ್ತಮವಾಗಿ ಕಾರ್ಯಾಚರಿಸುತಿದ್ದು, ಇಡೀ ರಾಜ್ಯದಲ್ಲೂ ಅನುಷ್ಠಾನಗೊಳಿಸಲಾಗುವುದು ಎಂದು ಡಿಜಿಪಿ ತಿಳಿಸಿದರು.

    ಆನ್‌ಲೈನ್ ಬಳಕೆ ಹೆಚ್ಚಳ: ಈ ಮೊದಲು ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿತ್ತು. ಸದ್ಯ ಈ ಪ್ರಕ್ರಿಯೆ ಬದಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಆರಂಭಿಸಿದ್ದೇವೆ. ಕಳೆದ ಆರು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಕರಣದ ಸಾಕ್ಷೃಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕವೇ ದಾಖಲಾಗಲಿದೆ ಎಂದು ಪ್ರವೀಣ್ ಸೂದ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts