More

    ರಾಮೇಶ್ವರ ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ

    ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಅಂಗವಾಗಿ ಪಟ್ಟಣದ ಶ್ರೀ ರಾಮೇಶ್ವರ ದೇವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ಜರುಗಿತು. ದೇವರ ರಥಾರೋಹಣ ನಡೆಯುತ್ತಿದ್ದಂತೆ ಭಕ್ತರು ಅಡಕೆ ಮುಂತಾದ ವರ್ಷದ ಹೊಸ ಫಲಗಳನ್ನು ರಥಕ್ಕೆ ಅರ್ಪಿಸಿ ಕೃತಾರ್ಥಭಾವ ತಾಳಿದರು. ಜಯಘೋಷ ಮುಗಿಲು ಮುಟ್ಟಿತ್ತು. ಪ್ರಧಾನ ಅರ್ಚಕರಾದ ರಾಜಶೇಖರ ಭಟ್, ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆದವು.

    ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರೆಯ ಮೂರೂ ದಿನಗಳ ಕಾಲ ರಾಮೇಶ್ವರ ಮಿತ್ರವೃಂದದಿಂದ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದು, ಶುಕ್ರವಾರ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಶಾಸಕ ಆರಗ ಜ್ಞಾನೇಂದ್ರ ಸ್ವತಃ ಊಟ ಬಡಿಸಿದರು.
    ಪುರಾಣ ಪ್ರಸಿದ್ಧವಾದ ಎಳ್ಳಮಾವಾಸ್ಯೆ ಜಾತ್ರೆಗೆ ನಾಡಿನ ಅನೇಕ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಹೊರಗಿನಿಂದ ಬರುವ ಭಕ್ತರಿಗೆ ಸ್ಥಳೀಯರು ತೋರುತ್ತಿರುವ ಆತ್ಮೀಯ ಆತಿಥ್ಯ ಕೂಡಾ ಜಾತ್ರೆಯ ಮಹತ್ವವನ್ನು ಇಮ್ಮಡಿಗೊಳಿಸಿದೆ. ಜಾತ್ರೆಗೆ ಸೇರುವ ಜನರ ಸುರಕ್ಷತೆಗಾಗಿ ಡಿವೈಎಸ್‌ಪಿ ಗಜಾನನ ಸುತಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥ್ಥಗೌಡ ತಂಡದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಸಿಟಿವಿ ಮತ್ತು ಡ್ರೋಣ್ ಕ್ಯಾಮೆರಾ ಸಹ ಬಳಸಲಾಗುತ್ತಿದೆ.
    ತಹಸೀಲ್ದಾರ್ ಜಕ್ಕನಗೌಡರ್, ಡಿವೈಎಸ್‌ಪಿ ಗಜಾನನ ಸುತಾರ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಜಾತ್ರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸಿರಿಬೈಲ್ ಧರ್ಮೇಶ್, ಪಪಂ ಮುಖ್ಯಾಧಿಕಾರಿ ಕುರಿಯಾ ಕೋಸ್ ಸೇರಿದಂತೆ ಅನೇಕ ಗಣ್ಯರು ಪೂಜಾಕೈಂಕರ್ಯಗಳಿಗೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts