More

    ಭಕ್ತರು- ಮಠಾಧೀಶರ ಸಮ್ಮಿಲನ

    ಹುಬ್ಬಳ್ಳಿ: ಅಲ್ಲಿ ಒಂದೇ ವೇದಿಕೆಯಲ್ಲಿ ನೂರಾರು ಮಠಾಧೀಶರು ಜಾತಿ-ಮತ- ಪಂಥ- ಭೇದ- ಭಾವ ಮರೆತು ಸಮಾನವಾಗಿ ಕುಳಿತುಕೊಂಡಿದ್ದರು.. ಸಾವಿರಾರು ಭಕ್ತರು ತದೇಕಚಿತ್ತದಿಂದ ಸಂತರ ಹಿತನುಡಿಗಳನ್ನು ಆಲಿಸುತ್ತಿದ್ದರು.. ಮಠಗಳು ಹೇಗಿರಬೇಕು, ಮಠಾಧೀಶರು- ಭಕ್ತರ ಪಾತ್ರ ಏನು ಎಂಬ ಕುರಿತ ಸತ್ ಚಿಂತನೆಗೆ ಆ ವೇದಿಕೆ ಸಾಕ್ಷಿಯಾಯಿತು.

    ಸಹೃದಯಿ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಗದಗನ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಶತಮಾನೋತ್ಸವದ ಅಂಗವಾಗಿ ಭೈರಿದೇವರಕೊಪ್ಪದ ಶ್ರೀ ಶಿವಾನಂದ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಭಕ್ತ ಸಮಾವೇಶ’ದಲ್ಲಿ ಕಂಡುಬಂದ ದೃಶ್ಯವಿದು. ನಾಡಿನ ನೂರಕ್ಕೂ ಅಧಿಕ ಮಠಾಧೀಶರು- ಭಕ್ತರ ಸಮ್ಮಿಲನ ಅದಾಗಿತ್ತು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಸಂತರನ್ನು ಸ್ವಾಗತಿಸಿದರು.

    ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗಜ್ಯೋತಿ ಬಸವಣ್ಣವರು ಜಾತಿ- ಮತ- ಭೇದ ಇಲ್ಲದೇ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು. ಅದೇ ಮಾದರಿಯ ಕೆಲಸವನ್ನು ಸಹೃದಯಿ ಮಠಾಧಿಪತಿಗಳ ಒಕ್ಕೂಟ ಮಾಡುತ್ತಿದೆ. ಸೂಕ್ಷ್ಮ ವಾತಾವರಣವಿರುವ ಸಂದರ್ಭದಲ್ಲಿ ಇದು ಸ್ತುತ್ಯರ್ಹವಾಗಿದೆ ಎಂದರು.

    ಶಿರೋಳ ರಾಮಾಪುರ ಮಠದ ಶ್ರೀ ಶಂಕರಾರೂಢ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ ಹಿಂದುರಾಷ್ಟ್ರ. ನಾವೆಲ್ಲ ಭಾರತಾಂಬೆಯ ಮಕ್ಕಳು. ರಾಷ್ಟ್ರೀಯತೆಯ ಆಧಾರದಲ್ಲಿ ಮಠಗಳನ್ನು ಯಾವ ರೀತಿ ಸಮಾಜಮುಖಿ ಮಾಡಬೇಕು ಎಂಬ ಕೆಲಸವವನ್ನು ಸಹೃದಯಿ ಮಠಾಧಿಪತಿಗಳ ಒಕ್ಕೂಟ ಮಾಡುತ್ತಿದೆ ಎಂದರು.

    ಬಂಜಾರ ಪೀಠದ ಶ್ರೀ ಸೋಮಲಿಂಗ ಸ್ವಾಮೀಜಿ, ಹನುಮಾಪುರ ಕಾಲಗುಡ್ಡ ಮಠದ ಶ್ರೀ ಅಮರೇಶ್ವರ ಸ್ವಾಮೀಜಿ, ಅಂಬಿಗರ ಚೌಡಯ್ಯ ಶ್ರೀಗಳು, ಹಳೇ ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಕರಿಕಟ್ಟಿ ಶ್ರೀ ಬಸವರಾಜ ಸ್ವಾಮೀಜಿ, ಕಲಘಟಗಿ ಹನ್ನೆರೆಡು ಮಠದ ಶ್ರೀಗಳು, ವಿಜಯಪುರದ ಯೋಗೀಶ್ವರಿ ಮಾತಾ ಸೇರಿ ಅನೇಕ ಸಂತ ಮಹಂತರು ಉಪಸ್ಥಿತರಿದ್ದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

    ಕನೇರಿ ಶ್ರೀಗಳ ನೇತೃತ್ವ

    ಕೊಲ್ಲಾಪುರದ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಹೃದಯಿ ಮಠಾಧಿಪತಿಗಳ ಒಕ್ಕೂಟದ ನೇತೃತ್ವ ವಹಿಸಿದ್ದಾರೆ. ಕನೇರಿ ಶ್ರೀಗಳು ಸಾವಯವ ಕೃಷಿ ಮೂಲಕ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಠ ಇತರ ಮಠಗಳಿಗೆ ಮಾದರಿ ಯಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಕನೇರಿ ಶ್ರೀಗಳನ್ನು ‘ರಾಷ್ಟ್ರೀಯ ಕೃಷಿ ನೀತಿ ಆಯೋಗದ ಸದಸ್ಯ’ರನ್ನಾಗಿ ನೇಮಕ ಮಾಡಿದೆ ಎಂದು ಶಿರೋಳ ರಾಮಾಪುರ ಮಠದ ಶ್ರೀ ಶಂಕರಾರೂಢ ಸ್ವಾಮೀಜಿ ಹೇಳಿದರು.

    ಇಂಗ್ಲಿಷ್ ಬಂದರೆ ಮಾತ್ರ ಮಠಾಧೀಶ

    ಒಂದು ಮಠಕ್ಕೆ ಮಠಾಧೀಶರನ್ನು ನೇಮಿಸುವಾಗ ಹಲವರು ಆತನ ಜಾತಿ ಯಾವುದು ಎಂದು ನೋಡುತ್ತಿದ್ದರು. ಇತ್ತೀಚೆಗೆ ಜಾತಿ ಜತೆಗೆ ಆತನಿಗೆ ಇಂಗ್ಲಿಷ್ ಬರುತ್ತದೆಯೋ ಎಂಬುದನ್ನೂ ನೋಡುತ್ತಿದ್ದಾರೆ ಎಂದು ಗದಗ ಶಿವಾನಂದ ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು. ಮತಾಂತರದಂಥ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಒಕ್ಕೂಟ ರಚಿಸಲಾಗಿದೆ. ಒಬ್ಬ ಹಿಂದು ಬೇರೆ ಧರ್ಮಕ್ಕೆ ಮತಾಂತರವಾದರೆ ಹಿಂದು ಧರ್ಮಕ್ಕೆ ಒಬ್ಬ ಶತ್ರು ಹುಟ್ಟಿದಂತೆ ಎಂಬುದನ್ನು ಮರೆಯಬಾರದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts