More

  ಜನರ ಸಹಕಾರದಿಂದ ಶೃಂಗೇರಿ ಕ್ಷೇತ್ರ ಅಭಿವೃದ್ಧಿ

  ಶೃಂಗೇರಿ: ಶೃಂಗೇರಿ ಶ್ರೀ ಶಾರದಾಪೀಠದ ಆಡಳಿತಾಧಿಕಾರಿಯಾಗಿ ಹಲವು ಸಂಕಷ್ಟಗಳನ್ನು ಎದುರಿಸಿದ್ದರೂ ಕ್ಷೇತ್ರದ ನಾಗರಿಕರು ತೋರಿದ ವಾತ್ಸಲ್ಯದಿಂದ ಕ್ಷೇತ್ರದ ಬೆಳವಣಿಗೆ ಮಾಡಲು ಸಾಧ್ಯವಾಗಿದೆ ಎಂದು ಮಠದ ಪ್ರಧಾನ ಸಲಹೆಗಾರ ಡಾ. ವಿ.ಆರ್.ಗೌರೀಶಂಕರ್ ತಿಳಿಸಿದರು.

  ಮಂಗಳವಾರ ಡಾ. ವಿ.ಆರ್.ಗೌರೀಶಂಕರ್ ಅಭಿನಂದನಾ ಸಮಿತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಕಾರ್ಯ ನಿರ್ವಹಿಸಬೇಕಾದರೆ ಪ್ರಯತ್ನ ನಿರಂತರವಾಗಿ ಇರಬೇಕು. ಜತೆಗೆ ಜಗನ್ಮಾತೆ ಹಾಗೂ ಜಗದ್ಗುರುಗಳ ಅನುಗ್ರಹ ಇರಬೇಕು. ಆಗ ಮಾತ್ರ ಸುಲಲಿತವಾಗಿ ಸಾಧನೆ ಮೆಟ್ಟಿಲು ಏರಬಹುದು ಎಂದರು.1991ರಲ್ಲಿ ಸೇತುವೆ ಕಟ್ಟುವಾಗ ನಮ್ಮಲ್ಲಿ ಹಣದ ಕೊರತೆ ಇದ್ದರೂ ಭಕ್ತರ ಸಹಕಾರದಿಂದ ನಿರ್ಮಾಣ ಮಾಡಲಾಯಿತು. ಪ್ರಸ್ತುತ ಶೃಂಗೇರಿ ಪೀಠ ನಿರಂತರವಾಗಿ ಅಭಿವೃದ್ಧಿ ಹೊಂದಲು ಸರ್ವರೂ ಕಾರಣಕರ್ತರು. ಜನಸಾಮಾನ್ಯರ ಜತೆ ಸಂಪರ್ಕದಲ್ಲಿದ್ದು ಅವರ ಕುಂದುಕೊರತೆಗಳಿಗೆ ಪರಿಹಾರ ನೀಡಲು ಮಠ ಸನ್ನದ್ಧವಾಗಿದೆ. ಕ್ಷೇತ್ರದ ಅಡಕೆ ಬೆಳೆಗಾರರ ಸಂಕಷ್ಟಗಳನ್ನು ಪರಿಹಾರಕ್ಕೆ ಜಗದ್ಗುರುಗಳ ಅನುಗ್ರಹ ನಿರಂತರವಾಗಿದೆ ಎಂದು ಹೇಳಿದರು. ಕಾಶಿ, ಅಯೋಧ್ಯೆ ಮಂದಿರದಂತೆ ಶೃಂಗೇರಿ ಪೀಠ ಮತ್ತಷ್ಟು ಬೆಳವಣಿಗೆ ಕಾಣಲು ಎಲ್ಲರ ಸಹಕಾರ ಅಗತ್ಯ. ಸಂಘಟನಾತ್ಮಕವಾಗಿ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವ ಮನಸ್ಸು ನಮ್ಮಲ್ಲಿ ಹೆಚ್ಚಾಗಬೇಕು ಎಂದರು.ಸಮಿತಿ ಅಧ್ಯಕ್ಷ ಜಿ.ಎಂ.ಸತೀಶ್ ಮಾತನಾಡಿ, ಕ್ಷೇತ್ರದ ಎಲ್ಲ ದೇವಾಲಯಗಳು, ಬೃಹತ್ ರಾಜಗೋಪುರ, ಶಂಕರಗಿರಿ ಹೀಗೆ ಶೃಂಗೇರಿಯಿಂದ ಕಾಶ್ಮೀರ ತನಕ ಹಲವು ದೇವಾಲಯಗಳ ನಿರ್ಮಾಣಕ್ಕೆ ಕಾರಣಕರ್ತರಾದ ಡಾ. ವಿ.ಆರ್.ಗೌರೀಶಂಕರ್ ಅವರ ಸತ್ಕಾರ್ಯ ಸರ್ವರಿಗೂ ಮಾದರಿ. ಮಠದಿಂದ ಶಾಲೆಗಳಿಗೆ ಅನ್ನದಾಸೋಹವನ್ನು ಪ್ರಥಮವಾಗಿ ನೀಡಿದ ಕೀರ್ತಿ ಶೃಂಗೇರಿ ಮಠಕ್ಕೆ ಸಲ್ಲುತ್ತದೆ. ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಜನಸಾಮಾನ್ಯರಿಗೆ ಆರ್ಥಿಕ ಸಹಕಾರ, ಆಸ್ಪತ್ರೆ ನಿರ್ಮಾಣ, ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿ ಡಾ. ವಿ.ಆರ್.ಗೌರೀಶಂಕರ್ ಅವರಿಗೆ ಸಲ್ಲುತ್ತದೆ. ಶೃಂಗೇರಿ ಕ್ಷೇತ್ರವನ್ನು ಉನ್ನತೀಕರಿಸಿ ವರ್ಷಕ್ಕೆ 60 ಲಕ್ಷದಷ್ಟು ಪ್ರವಾಸಿಗರನ್ನು ಸೆಳೆಯುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. ಇಲ್ಲಿನ ವಸತಿಗೃಹಗಳು-ಅಂಗಡಿ ಮುಂಗಟ್ಟುಗಳು ಆರ್ಥಿಕವಾಗಿ ಸಬಲವಾಗಲು ಶ್ರಮಿಸಿದ್ದಾರೆ ಎಂದು ಹೇಳಿದರು. ಸಮಿತಿ ಪದಾಧಿಕಾರಿ ಎ.ಎಸ್.ನಯನ ಮಾತನಾಡಿ, ಡಾ. ವಿ.ಆರ್.ಗೌರೀಶಂಕರ್ ಶೃಂಗೇರಿ ಮಠ ಹಾಗೂ ಜನಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ಮತ್ತಷ್ಟು ಅಭಿವೃದ್ಧಿಯಾಗಲು ಡಾ. ವಿ.ಆರ್.ಗೌರೀಶಂಕರ್ ಮಾರ್ಗದರ್ಶನ ಅವಶ್ಯಕ ಎಂದರು. ಡಾ. ವಿ.ಆರ್.ಗೌರೀಶಂಕರ್ ಅವರನ್ನು ಹಿರಿಯ ವಿದ್ವಾಂಸರಾದ ವೈಕುಂಠಪುರ ಶ್ರೀಕಂಠ ಭಟ್ ಗೌರವಿಸಿದರು. ಪತ್ನಿ ಗೀತಾ ಅವರನ್ನು ಸಮಿತಿ ಪದಾಧಿಕಾರಿಗಳಾದ ಪುಷ್ಪ್ಪಾಲಕ್ಷ್ಮೀನಾರಾಯಣ್, ಸೌಮ್ಯಾ ವಿಜಯ್‌ಕುಮಾರ್ ಗೌರವಿಸಿದರು. ಕ್ಷೇತ್ರದ ಸಂಘ-ಸಂಸ್ಥೆಗಳಿಂದಲೂ ಗೌರವಿಸಲಾಯಿತು. ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ, ಸಮಿತಿ ಕಾರ್ಯದರ್ಶಿ ಬಿ.ಕೆ.ರವಿ, ಕೋಶಾಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ, ಪದಾಧಿಕಾರಿ ಕುಮಾರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts