More

    ಅಭಿವೃದ್ಧಿ ಸಹಿಸದೆ ಟೀಕೆ -ಶಾಸಕ ಉಮೇಶ ಕತ್ತಿ

    ಹುಕ್ಕೇರಿ: ದೇಶ ಮತ್ತು ಜನತೆ ಮಹಾಮಾರಿ ಕರೊನಾ ವೈರಸ್‌ನಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಯಾದವರು ಜನರಲ್ಲಿ ಬದುಕಿನ ಭರವಸೆ ತುಂಬಬೇಕಾದ ಅವಶ್ಯಕತೆ ಇದೆ. ಆದರೆ, ವಿರೋಧ ಪಕ್ಷದವರು ಸರ್ಕಾರ ಅವ್ಯವಹಾರ ನಡೆಸುತ್ತಿದೆ ಎಂದು ಹುಯಿಲೆಬ್ಬಿಸುತ್ತಿರುವುದು ಶೋಚನೀಯ ಸಂಗತಿ ಎಂದು ಶಾಸಕ ಉಮೇಶ ಕತ್ತಿ ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ನಿಮಿತ್ತ ಮಂಗಳವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ಸರ್ವತಾ ಸಲ್ಲದು. ರಾಜ್ಯ ಸರ್ಕಾರ ತಪ್ಪು ಮಾಡಿದ್ದರೆ ಆಧಾರ ಸಹಿತ ಆರೋಪಿಸಬೇಕು. ವಿರೋಧ ಪಕ್ಷದವರು ಆಡಳಿತ ಪಕ್ಷವನ್ನು ವಿರೋಧಿಸುವ ಉದ್ದೇಶದಿಂದ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡರು. ಬಳಿಕ ಅನಿರೀಕ್ಷಿತವಾಗಿ ಅತಿವೃಷ್ಟಿ ಉಂಟಾಯಿತು. ಇದನ್ನು ಸಮರ್ಥವಾಗಿ ಯಡಿಯೂರಪ್ಪ ನಿರ್ವಹಿಸಿದರು.

    ಹಿಂದಿನ ಸರ್ಕಾರ ನಡೆಸಿದ ದುರಾಡಳಿತದ ಲೋಪ ಸರಿಪಡಿಸಿಕೊಳ್ಳುವಷ್ಟರಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಕರೊನಾ ರೋಗ ವಕ್ಕರಿಸಿದೆ. ಇದರಿಂದ ಇಡೀ ಜಗತ್ತೇ ಸಂಕಷ್ಟದಲ್ಲಿದೆ. ಇದರ ನಿಯಂತ್ರಣಕ್ಕಾಗಿ ಹಲವಾರು ಕ್ರಮ ಕೈಗೊಂಡ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ಅಭಿನಂದಿಸಿದೆ. ಆದರೆ, ಇದನ್ನು ಸಹಿಸದೇ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

    ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಜಿಲ್ಲಾ ಉಪಾಧ್ಯಕ್ಷ ಜಯಗೌಡ ಪಾಟೀಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ, ಅಧಿಕಾರಿಗಳಾದ ಅಶೋಕ ಗುರಾಣಿ, ಬಿ.ಕೆ. ಲಾಳಿ, ರಾಜಶೇಖರ ಹಿರೇಮಠ, ಮೋಹನ ದಂಡಿನ, ಎ.ಬಿ. ಪಟ್ಟಣಶೆಟ್ಟಿ ಇತರರು ಇದ್ದರು.

    ಪಕ್ಷದಲ್ಲಿ ಅಸಮಾಧಾನವಿಲ್ಲ: ನಿಗಮ ಮಂಡಳಿಗಳಿಗೆ ನೇಮಕದಿಂದ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಉಮೇಶ ಕತ್ತಿ, ಕೆಲ ಶಾಸಕರು ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಸಂಪುಟದಲ್ಲಿ ಯಾವುದೇ ಅಸಮಾಧಾನವಿಲ್ಲ. ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದಿನ 3 ವರ್ಷ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ, ಮರಳಿ ಅಧಿಕಾರ ಚುಕ್ಕಾಣಿಯನ್ನು ಬಿಜೆಪಿ ಸರ್ಕಾರವೇ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts