More

    ಧರ್ಮಗಳ ನಡುವೆ ಸಾಮರಸ್ಯ ಮೂಡಲಿ

    ಮಡಿಕೇರಿ: ಜಾತಿ-ಜಾತಿ ನಡುವೆ, ಧರ್ಮ-ಧರ್ಮದ ನಡುವೆ ಸಾಮರಸ್ಯ ಮೂಡುವಂತೆ ಮಾಡಬೇಕೆಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.
    ಪ್ರಗತಿಪರ ಜನಾಂದೋಲನ ವೇದಿಕೆಯಿಂದ ಶನಿವಾರ ಗಾಂಧಿ ಮೈದಾನದ ಎ.ಕೆ.ಸುಬ್ಬಯ್ಯ ವೇದಿಕೆಯಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಮನುಷ್ಯ ವಿರೋಧಿ ಕಾಯ್ದೆ ವಿರುದ್ಧದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದರು.
    ಆಯ್ಕೆ ಮಾಡಿದ ಮತದಾರರನ್ನು ಪೌರತ್ವ ಸಾಬೀತು ಮಾಡಲು ಕೇಳುತ್ತಿದ್ದಾರೆ. ಇಂತಹ ಪ್ರಧಾನಿ ಆಯ್ಕೆ ಮಾಡಿದ್ದಕ್ಕೆ ಜನ ತಮ್ಮ ಪೌರತ್ವ ಸಾಬೀತು ಮಾಡಬೇಕಾಗಿದೆ. ಆದಿವಾಸಿಗಳ ಸ್ಥಿತಿ ಏನಾಗಬಹುದೆಂದು ನೆನಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಇರುವ ಬಹುತೇಕರು ವಲಸಿಗರು ಎಂದು ನ್ಯಾಯಾಲಯ ಹೇಳಿದೆ. ವಲಸಿಗರು ಬರುವ ಮುನ್ನವೇ ಹುಟ್ಟಿರುವ ಮೂಲನಿವಾಸಿಗಳಲ್ಲಿ ಯಾವ ದಾಖಲಾತಿ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
    ಜನರ ಮುಂದೆ ಏನೇನು ಕನಸ್ಸು ಇಟ್ಟಿದ್ದೀರ. ಕೋಟ್ಯಂತರ ಉದ್ಯೋಗ ಭರವಸೆ ನೀಡಿ, ಇದ್ದ ಉದ್ಯೋಗ ಇಲ್ಲದಂತೆ ಮಾಡಿದ್ದೀರ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿ, ಬ್ಯಾಂಕಿನಲ್ಲಿಟ್ಟ ಹಣಕ್ಕೆ ಖಾತ್ರಿ ಇಲ್ಲದಂತೆ ಮಾಡಿದ್ದೀರ. ನಿಮಗೆ ಆಳ್ವಿಕೆ ಮಾಡಲು ಆಗುತ್ತಿಲ್ವಾ ಎಂದು ಪ್ರಧಾನಿಯನ್ನು ಪ್ರಶ್ನಿಸಿದರು.
    ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಿಗಿಟ್ಟು, ಎಲ್ಲ ಪೌರತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಕಟ್ಟುವ ಬದಲು ಕಟ್ಟಿದ್ದನ್ನು ಕೆಡವುತ್ತಿದ್ದೀರ. ಪ್ರಧಾನಿಯಾಗಿ ಸಂವಿಧಾನಕ್ಕೆ ತಲೆ ಬಾಗಿ ಗೌರವಿಸಿದ್ದೀರ. ಆದರೆ, ಈಗ ಸಂವಿಧಾನಕ್ಕೆ ಗುಂಡಿಕ್ಕಿದ್ದೀರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ದೇಶದಲ್ಲಿ ಭಾರತೀಯರು ಶೇ.99 ಜನರಿದ್ದು, ಕೋಮುವಾದಿಗಳು ಕೇವಲ ಶೇ.1ರಷ್ಟು ಇದ್ದಾರೆ. ಕನ್ಹಯ್ಯ ಕುಮಾರ್, ಮಹೇಂದ್ರಕುಮಾರ್, ನಿಖಿತ್ ರಾಜ್ ಮೌರ್ಯ ಅವರನ್ನು ನೋಡುವಾಗ ದೇಶಕ್ಕೆ ಭವಿಷ್ಯ ಇದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

    ಆರ್‌ಎಸ್‌ಎಸ್, ಬಿಜೆಪಿಯಿಂದ ರಕ್ಷಿಸುತ್ತೇವೆ:  ಹಿಂದು-ಮುಸ್ಲಿಮರ ನಡುವೆ ಕಟ್ಟಿರುವ ಗೋಡೆ ಕೆಡವಿ ದೇಶವನ್ನು ಆರ್‌ಎಸ್‌ಎಸ್, ಬಿಜೆಪಿಯಿಂದ ರಕ್ಷಿಸುತ್ತೇವೆ ಎಂದು ಬಜರಂಗಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ್ ಘೋಷಿಸಿದರು.
    ಕೇಂದ್ರ ಸರ್ಕಾರದ ಮನುಷ್ಯ ವಿರೋಧಿ ಕಾಯ್ದೆ ವಿರುದ್ಧದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಪೌರತ್ವ ಕಾಯ್ದೆ ಮುಸ್ಲಿಮರ ಸಮಸ್ಯೆಯಲ್ಲ. ಇದು ನೆಲದ ಸಮಸ್ಯೆ. ಸಮಾವೇಶ ಮಾಡುತ್ತಿರುವುದು ಸಿಎಎ, ಎನ್‌ಆರ್‌ಸಿ ವಿಷಯಕ್ಕಾಗಿ ಮಾತ್ರವಲ್ಲ. ಆರ್‌ಎಸ್‌ಎಸ್, ಬಿಜೆಪಿ ಸಾಗುತ್ತಿರುವ ಹಾದಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಂದರು.
    ಆರ್‌ಎಸ್‌ಎಸ್, ಬಿಜೆಪಿಗೆ ಮುಸ್ಲಿಂ-ಪಾಕಿಸ್ತಾನ ಬಿಟ್ಟು ಬೇರೆ ವಿಚಾರವಿಲ್ಲ. ಹಿಂದು ಸಮಾಜೋತ್ಸವದಲ್ಲಿ ಹಿಂದುಗಳ ಏಳಿಗೆ ಬಗ್ಗೆ ಗಮನಹರಿಸುವುದಿಲ್ಲ. ಸಮಾವೇಶದಲ್ಲಿ ಮುಸ್ಲಿಮರು ಭಯೋತ್ಪಾದಕರು, ದೇಶ ವಿರೋಧಿಗಳೆಂದು ಬಿಂಬಿಸುತ್ತಾರೆ. ಅಧಿಕಾರಕ್ಕಾಗಿ ಮುಸ್ಲಿಮರನ್ನು ದ್ವೇಷ ಮಾಡಲಾಗುತ್ತದೆ ಎಂದು ಟೀಕಿಸಿದರು.
    ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದೂ ಕಟ್ಟ ಆರ್‌ಎಸ್‌ಎಸ್‌ನವರು ಎಂದು ಬಹಿರಂಗವಾಗುತ್ತಿದ್ದಂತೆ ದಾರಿ ತಪ್ಪಿದ ಯುವಕರಿಂದ ತಪ್ಪಾಗಿದೆ ಎಂದು ಆರ್‌ಎಸ್‌ಎಸ್ ಮುಖಂಡರು ಹೇಳಿಕೆ ನೀಡಿದರು. ಅದೇ ರೀತಿ ಮುಸ್ಲಿಂ ಯುವಕರು ಹಾರಿಸಿದ್ದಲ್ಲಿ ದಾರಿ ತಪ್ಪಿದ ಯುವಕರೆಂದು ಏಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರು.
    ಇವರ ರಾಷ್ಟ್ರೀಯತೆ ಹಿಂದು ವಿರೋಧಿ, ದೇಶ ವಿರೋಧಿ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬ್ರಾಹ್ಮಣ್ಯಕ್ಕೆ ಹಿಂದು ಸಮಾಜ ಬಲಿಯಾಗಿದೆ ಎಂದರು.
    ದೇಶ ಇಂದು ಹಲವಾರು ಕ್ಷೇತ್ರದಲ್ಲಿ ದುಸ್ಥಿತಿಗೆ ತಲುಪಿದೆ. ಇದಕ್ಕೆ ಇದುವರೆಗೂ ಆಳ್ವಿಕೆ ನಡೆಸಿದವರು ಕಾರಣ. ಬ್ರಾಹ್ಮಣ್ಯ ಕಪಿಮುಷ್ಠಿಗೆ ಸಿಲುಕಿ ಭಾರತ ನಲುಗಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಭಯಾನಕ ಪರಿಸ್ಥಿತಿಗೆ ದೇಶವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಭಾರತವನ್ನು ಭಾರತವಾಗಿ ಕಟ್ಟುವ ಕೆಲಸ ನೀವು ಮಾಡುತ್ತಿಲ್ಲ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
    ಎನ್‌ಆರ್‌ಸಿಗೆ ಬೇಕಾದ ದಾಖಲೆ ಏಕೆ ಪ್ರಕಟಿಸುತ್ತಿಲ್ಲ. ದಾಖಲೆ ಪ್ರಕಟಿಸಿದ ದಿನ ನಿಮ್ಮನ್ನು ಬೆಂಬಲಿಸಿದವರು ಹೋರಾಟಕ್ಕೆ ಬರುತ್ತಾರೆ. ದಲಿತರು, ಬಡ ಬ್ರಾಹ್ಮಣರು ಸೇರಿದಂತೆ ಪ್ರತಿಯೊಬ್ಬರೂ ಬೀದಿಗೆ ಬಂದು ನಿಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ ಎಂದರು.
    ವಾಗ್ಮಿ ನಿಖಿತ್‌ರಾಜ್ ಮೌರ್ಯ ಮಾತನಾಡಿ, ಸ್ವಾತಂತ್ರ್ಯ ಚಳವಳಿ ಮಾದರಿಯಲ್ಲಿ ಹೋರಾಟ ಪ್ರಾರಂಭವಾಗಿದ್ದು, ಮಹಾತ್ಮ ಗಾಂಧಿ ಇದ್ದಿದ್ದರೆ ನಮ್ಮೊಂದಿಗೆ ಪಾಲ್ಗೊಳ್ಳುತ್ತಿದ್ದರು. ಸುಭಾಷ್ ಚಂದ್ರಬೋಸ್ ಪ್ರಧಾನಿಗೆ ತಿಳಿ ಹೇಳುತ್ತಿದ್ದರೆಂದು ಹೇಳಿದರು.
    ದೇಶದ ಆರ್ಥಿಕತೆ ಕುಸಿಯುತ್ತಿದೆ. ಗುಜರಾತ್ ರಾಜ್ಯದ ಒಂದು ಆಸ್ಪತ್ರೆಯಲ್ಲಿ ಒಂದೇ ದಿನ 200 ಜನ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾತನಾಡದ ಪ್ರಧಾನಿ, ಪಾಕಿಸ್ತಾನ ಬಗ್ಗೆ ಮಾತನಾಡುತ್ತಾರೆ. ಇವರು ಭಾರತದ ಪ್ರಧಾನಿಯಾ, ಅಲ್ಲ ಪಾಕಿಸ್ತಾನದ ಪ್ರಧಾನಿ ಯಾ ಎಂದು ಪ್ರಶ್ನಿಸಿದರು.

    ಸಹಸ್ರಾರು ಸಂಖ್ಯೆಯಲ್ಲಿ ಭಾಗಿ: ಗಾಂಧಿ ಮೈದಾನದ ಎ.ಕೆ.ಸುಬ್ಬಯ್ಯ ವೇದಿಕೆಯಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಮನುಷ್ಯ ವಿರೋಧಿ ಕಾಯ್ದೆ ವಿರುದ್ಧದ ಜನಾಂದೋಲನ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
    ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ, ಸಿಪಿಐ (ಎಂ), ಸಿಪಿಐ, ಸಿಪಿಐ(ಎಂಎಲ್) ಪಕ್ಷದ ಮುಖಂಡರು, ಕಾರ್ಯಕರ್ತರು, ದಲಿತ ಸಂಘಟನೆ ಮುಖಂಡರು, ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
    ಬೆರಳೆಣಿಕೆಯಷ್ಟು ಆಸನದ ವ್ಯವಸ್ಥೆ ಮಾಡಿದ್ದರಿಂದ ಬಹುತೇಕ ಜನ ನಿಂತು ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷ. ಹೆಚ್ಚಿನ ಜನ ರಾಷ್ಟ್ರಧ್ವಜ ಹಿಡಿದು ಸಮಾವೇಶದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು, ರಾಷ್ಟ್ರಧ್ವಜಕ್ಕೆ ಹಾಕಿದ್ದ ಮರದ ರೀಪರ್ ತೆರವುಗೊಳಿಸಿದರು. ಗಾಂಧಿ ಮೈದಾನ ಪ್ರವೇಶಿಸುತ್ತಿದ್ದಂತೆ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ನೇತೃತ್ವದಲ್ಲಿ ಪೊಲೀಸರು ಪರಿಶೀಲಿಸಿ ರೀಪರ್ ತೆರವುಗೊಳಿಸಿದರು.
    ಗಣ್ಯರ ಉಪಸ್ಥಿತಿ: ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಎಂಎಲ್ಸಿ ಸಿ.ಎಸ್.ಅರುಣ್ ಮಾಚಯ್ಯ, ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಜಿ.ಮಿಟ್ಟು ಚಂಗಪ್ಪ, ಕೆ.ಪಿ.ಚಂದ್ರಕಲಾ, ಟಿ.ಪಿ. ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಯು.ಯಾಕೂಬ್, ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಜೆಡಿಎಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಜಿಪಂ ಮಾಜಿ ಅಧ್ಯಕ್ಷ ಎಚ್.ಬಿ.ಜಯಮ್ಮ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಡಾ.ಐ.ಆರ್.ದುರ್ಗಾಪ್ರಸಾದ್, ಸಿಪಿಐ(ಎಂಎಲ್) ಮುಖಂಡ ಡಿ.ಎಸ್.ನಿರ್ವಾಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.
    ಗಣ್ಯರ ಕಟೌಟ್: ಮಹಾತ್ಮಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಮೌಲಾನಾ ಅಬ್ದುಲ್ ಅಜಾದ್ ಕಟೌಟ್ ವೇದಿಕೆ ಮುಂಭಾಗದಲ್ಲಿ ಹಾಕಲಾಗಿತ್ತು. ದಲಿತ ಮುಖಂಡ ಡಿ.ಎಸ್.ನಿರ್ವಾಣಪ್ಪ ನೇತೃತ್ವದ ತಂಡದಿಂದ ಕ್ರಾಂತಿ ಗೀತೆ ಹಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts