ದೇವದುರ್ಗ: ಶಾಸಕ ಕೆ.ಶಿವನಗೌಡ ನಾಯಕ ವಿರೋಧಿಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಅವರ ವಿರುದ್ಧ ಮಾತನಾಡುವವರ ಮೇಲೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ. ಗೂಂಡಾಗಿರಿ ಬಿಟ್ಟು ಸೈದ್ಧಾಂತಿಕ ಹೋರಾಟ ನಡೆಸುವಂತೆ ಜೆಡಿಎಸ್ ನಾಯಕಿ ಜಿ.ಕರೆಮ್ಮ ನಾಯಕ ಹೇಳಿದರು.
ತಾಲೂಕಿನ ದ್ಯಾಮ್ಲನಾಯ್ಕ ತಾಂಡಾದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಧರಣಿಯಲ್ಲಿ ಶುಕ್ರವಾರ ಮಾತನಾಡಿದರು. ತಾಲೂಕಿನಲ್ಲಿ ಮರಳಿನ ಅಕ್ರಮ ಸಾಗಣೆ, ಜೂಜಾಟ, ಮದ್ಯದ ಅಕ್ರಮ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲವಾಗಿರುವ ಪೊಲೀಸರು ಶಾಸಕರ ಅಣತಿಯಂತೆ ವಿರೋಧ ಪಕ್ಷದ ನಾಯಕರ ವಿರುದ್ಧ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು ಗೂಂಡಾವರ್ತನೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.