More

    ವ್ಯಸನಮುಕ್ತ ಸಮಾಜ, ಪರಿಸರ ಯುಕ್ತ ಸಮುದಾಯ ನಿರ್ಮಾಣ ನಮ್ಮ ಗುರಿ

    ದೇವದುರ್ಗ: ಭಕ್ತಿಯಿಂದ ಏಕಾಗ್ರತೆ, ಮನಶಾಂತಿ ಪಡೆದರೆ, ಪಾದಯಾತ್ರೆಯಿಂದ ಉತ್ತಮ ಆರೋಗ್ಯ ಹಾಗೂ ದಾನದಿಂದ ಮನಸ್ಸಿನ ಸಂತೃಪ್ತಿ ಪಡೆಯಲು ಸಾಧ್ಯ. ಭಕ್ತಿ, ಪಾದಯಾತ್ರೆ, ದಾನ ಈ ಮೂರು ಆರೋಗ್ಯದ ಗುಟ್ಟುಗಳು. ಪಾದಯಾತ್ರೆ ದೈಹಿಕ ಸದೃಢತೆ, ದಾನ ಮಾನಸಿಕ ಸದೃಢತೆಗೆ ಕಾರಣವಾಗಲಿವೆ ಎಂದು ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀಪಂಚಾಕ್ಷರಿ ಮಠದಲ್ಲಿ ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆ ಹಾಗೂ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಭಕ್ತಿ, ಆಧ್ಯಾತ್ಮಕ ಕೊರತೆಯಿಂದ ಇಂದು ಸಮಾಜದಲ್ಲಿ ನಾನಾ ಘಟನೆಗಳು, ಅಶಾಂತಿ ನಿರ್ಮಾಣವಾಗಿದೆ. ಕಾನೂನು ಬಗ್ಗೆ ಗೌರವ ಕೊರತೆ, ಮೌಲ್ಯವಿಲ್ಲದ ಶಿಕ್ಷಣ ಹಾಗೂ ಸಂಪತ್ತಿನ ವ್ಯಾಮೋಹದಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಿದೆ.

    ಸರ್ವರನ್ನೂ ಸಮಾಧಾನಿಸಿ ಸಂಬಾಳಿಸಲು ಆಧ್ಯಾತ್ಮವೊಂದೇ ಮಾರ್ಗವಾಗಿದೆ. ದೇವರ ಮೇಲೆ ಪ್ರೀತಿ, ಗುರುಗಳ ಮೇಲೆ ಭಕ್ತಿ, ಹಿರಿಯರಲ್ಲಿ ಗೌರವ ನೀಡುವ ಸಂಸ್ಕಾರವಂತ ಮೌಲ್ಯಗಳನ್ನು ಇಂದಿನ ಯುವಜನತೆಗೆ ಬಿತ್ತುವುದು ಅತ್ಯಗತ್ಯವಾಗಿದೆ. ಗುರುವಿನ ಮಾರ್ಗದರ್ಶನ ಕೊರತೆ, ಪಾಲಕರ ಕಾಳಜಿಯಿಲ್ಲದೆ ಮಕ್ಕಳು ಇಂದು ದಾರಿ ತಪ್ಪುತ್ತಿದ್ದು, ಸಮಾಜಘಾತುಕ ಕೆಲಸ ಮಾಡುವ ಜತೆಗೆ ವ್ಯಸನಗಳ ದಾಸರಾಗುತ್ತಿದ್ದಾರೆ. ಈ ಬಗ್ಗೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದರು.

    ಒಡೆದ ಮನಸ್ಸು ಕಟ್ಟಲು, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಗುರುಗಳ ಮಾರ್ಗದರ್ಶನ ಮುಖ್ಯವಾಗಿದ್ದು, ಈ ಕಾರಣಕ್ಕಾಗಿ ನಾವು ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಕೈಗೊಂಡಿದ್ದೇವೆ. ಪಾದಯಾತ್ರೆ ಉದ್ದಕ್ಕೂ ಭಕ್ತರಿಗೆ ಜೀವನದ ಮಾರ್ಗದರ್ಶನ, ಆಧ್ಯಾತ್ಮ ಹಾಗೂ ಯುವಕರಿಗೆ ವ್ಯಸನ ತೊರೆಯಲು ಅರಿವು, ಪರಿಸರ ಉಳಿಸಿ ಬೆಳೆಸಲು ಜಾಗೃತಿ ಮೂಡಿಸಲಾಗುತ್ತಿದೆ. ವ್ಯಸನಮುಕ್ತ ಸಮಾಜ ಹಾಗೂ ಪರಿಸರ ಯುಕ್ತ ಸಮುದಾಯ ನಿರ್ಮಾಣ ನಮ್ಮ ಗುರಿಯಾಗಿದೆ ಎಂದು ಹೇಳಿದರು.

    ಗಬ್ಬೂರಿನ ಶ್ರೀಬೂದಿಬಸವ ಸ್ವಾಮೀಜಿ, ಸುಲ್ತಾನಪುರದ ಶ್ರೀಶಂಭು ಸೋಮನಾಥ ಸ್ವಾಮೀಜಿ, ಮುದ್ದೇಬಿಹಾಳ ಶಾಸಕ ಹಾಗೂ ಪಾದಯಾತ್ರೆ ಕಾರ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಶಾಸಕರಾದ ಡಾ.ಶಿವರಾಜ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts