More

    ಹದಗೆಟ್ಟ ರಸ್ತೆ ಸಂಚಾರ… ಸವಾರರು ಹೈರಾಣ..

    ಪಿ.ಎನ್ ಹೇಮಗಿರಿಮಠ ಗುತ್ತಲ

    ಪ್ರಸ್ತಕ ವರ್ಷದಲ್ಲಿ ಸುರಿದ ಸತತ ಮಳೆಯಿಂದ ಗುತ್ತಲ ಹೋಬಳಿಯ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಗುತ್ತಲದಿಂದ ಹಾವೇರಿಗೆ ತೆರಳುವ ಶಿರಸಿ- ಮೊಳಕಾಲ್ಮೂರ ರಸ್ತೆಯ ಸುಮಾರು 27 ಕಿ.ಮೀ. ಮಾರ್ಗದಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸುರಿದಿದ್ದ ಮಳೆಗೆ ನೂರಾರು ಗುಂಡಿಗಳು ಬಿದ್ದಿದ್ದವು. ತಗ್ಗು ಬಿದ್ದಿರುವ ಗುಂಡಿಗಳ ದುರಸ್ತಿ ಮಾಡಬೇಕೆನ್ನುವಷ್ಟರಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಮತ್ತೆ ಸತತವಾಗಿ ಮಳೆ ಸುರಿದ ಕಾರಣ ಕಾಟಾಚಾರಕ್ಕೆಂಬಂತೆ ರಸ್ತೆ ದುರಸ್ತಿ ಮಾಡಲಾಯಿತು. ಹೀಗಾಗಿ ರಸ್ತೆಗಳಲ್ಲಿರುವ ಗುಂಡಿಗಳೆಲ್ಲ ಹಾಗೆಯೇ ಉಳಿದವು.

    ಹಾವೇರಿಯಿಂದ ಅಗಡಿಯವರೆಗೆ ಬರುವಷ್ಟರಲ್ಲೇ ಸುಮಾರು 300-500 ಗುಂಡಿಗಳು ಕಾಣುತ್ತವೆ.. ಅಗಡಿಯಿಂದ ಗುತ್ತಲಕ್ಕೆ ಬರುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ಹೊಂಡಗಳು ನಿರ್ವಣವಾಗಿ ವಾಹನ ಚಾಲಕರಿಗೆ ಅಪಾಯವಾಗಿ ಪರಿಣಮಿಸಿವೆ. ಬಸಾಪುರ, ಕನವಳ್ಳಿ ಶಿಬಾರದ ಬಳಿ ತುಂಗಾ ಮೇಲ್ದಂಡೆ ಕಾಲುವೆ ರಸ್ತೆಯಲ್ಲಿ ನೀರು ನಿಂತು ರಸ್ತೆ ತುಂಬ ದೊಡ್ಡ ತಗ್ಗುಗಳು ಬಿದ್ದಿವೆ. ಬೈಕ್ ಸವಾರರು ಸ್ವಲ್ಪ ಎಡವಿದರೂ ಸಾಕು ಹೊಂಡದಲ್ಲಿ ಬೈಕ್ ಸಮೇತು ಬೀಳುವುದು ಗ್ಯಾರಂಟಿ.

    ಗುತ್ತಲ- ಲಕ್ಷೆ್ಮೕಶ್ವರ ಮಾರ್ಗದಲ್ಲಿ ನೆಗಳೂರಿನಿಂದ ಹಾಲಗಿ ಗ್ರಾಮದವರೆಗೆ ರಸ್ತೆಯಲ್ಲಿ ಸಂಚಾರ ಮಾಡುವವರು ಜೀವವನ್ನು ಕೈಯಲ್ಲಿಟ್ಟುಕೊಂಡು ಸಾಗಬೇಕಾದ ಸ್ಥಿತಿಯಿದೆ. ಹೊಸರಿತ್ತಿ-ಯಲಗಚ್ಚ-ಸೋಮಕಟ್ಟಿ, ಹೊಸರಿತ್ತಿ- ಹಳೇರಿತ್ತಿ, ಬೆಳವಿಗಿ-ಮರೋಳ, ಹಾಲಗಿ-ಗೂಡೂರು-ಗುಡಿಸಲಕೊಪ್ಪ, ನೆಗಳೂರ-ಮರಡೂರು, ನೆಗಳೂರ-ಅಕ್ಕೂರ, ನೆಗಳೂರ-ಹೊಸರಿತ್ತಿ, ಹೊಸರಿತ್ತಿ-ಕೋಣನತಂಬಿಗಿ, ಕಂಚಾರಗಟ್ಟಿ-ನರಸೀಪುರ, ಹರಳ್ಳಹಳ್ಳಿ-ಹಾವನೂರು, ಹಾವನೂರ-ಗಳಗನಾಥ, ನೀರಲಗಿ-ಕೆರೆಕೊಪ್ಪ, ಕೂರಗುಂದ-ಭರಡಿ-ಕನವಳ್ಳಿ ರಸ್ತೆ ಮಾರ್ಗಗಳು ಇದಕ್ಕೆ ಹೊರತಾಗಿಲ್ಲ. ಈ ಮಾರ್ಗದ ಸಂಚಾರ ಅಪಾಯಕಾರಿಯಾಗಿವೆ.

    ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿಯ ಕಾಮಗಾರಿ ಆರಂಭವಾಗಿದ್ದು, ಈ ಕಾಮಗಾರಿಯ ವ್ಯಾಪ್ತಿಯಲ್ಲಿ ಬರುವ ಬೆಳವಗಿ-ಗುತ್ತಲ ಮಾರ್ಗದ ರಸ್ತೆಯಲ್ಲಿ ಅಲ್ಲಲ್ಲಿ ಕಾಮಗಾರಿ ಜರಗುತ್ತಿದೆ. ಇಲ್ಲಿಯೂ ಸಂಚಾರ ತೊಂದರೆದಾಯಕವಾಗಿದೆ. ಇದೇ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಗುತ್ತಲ-ರಾಣೆಬೆನ್ನೂರ ಮಾರ್ಗದಲ್ಲಿನ ಸಂಚಾರವಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಈ ಯೋಜನೆಯ ಕಾಮಗಾರಿ ಒಂದು ಕಡೆಯಿಂದ ನಿರಂತರವಾಗಿ ಸಾಗದೆ ಇರುವುದು ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ, ಈ ಯೋಜನೆ ಕಾಮಗಾರಿ ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರು ಹಾಗೂ ತಗ್ಗು ಪ್ರದೇಶಗಳು ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದರೆ, ಬಿಸಿಲು ಇದ್ದಾಗ ಅತಿಯಾದ ಧೂಳು ಸಂಚಾರ ಮಾಡುವವರಿಗೆ ಅಪಾಯವನ್ನುಂಟು ಮಾಡುತ್ತಿದೆ. ಕಾಮಗಾರಿ ನಡೆಸುತ್ತಿರುವವರು ರಸ್ತೆಗೆ ನೀರನ್ನು ಸಿಂಪಡಿಸದೇ ನಿಷ್ಕಾಳಜಿ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಅತಿ ಭಾರವಾದ ವಾಹನಗಳಲ್ಲಿ ರಸ್ತೆ ನಿರ್ವಣದ ವಸ್ತುಗಳನ್ನು ಸಾಗಿಸುವ ಕಾರಣಕ್ಕಾಗಿ ಗುತ್ತಲ ಪಟ್ಟಣದ ಬೆಳವಿಗಿ ಕ್ರಾಸ್​ನಿಂದ ಪಟ್ಟಣದ ಹೊರವಲಯದ ಕುಂಬಾರಗಟ್ಟಿ ಹಳ್ಳದವರೆಗೆ ರಸ್ತೆ ಹಾಳಾಗಿದೆ. ಹಿರೇಮಠ ಪೆಟ್ರೋಲ್ ಬಂಕ್ ಬಳಿಯಂತೂ ದೊಡ್ಡದಾದ ಗುಂಡಿಯೇ ನಿರ್ವಣವಾಗಿದೆ. ಹೀಗೆ ರಸ್ತೆಗಳು ಎಲ್ಲೆಂದರಲ್ಲಿ ಹಾಳಾಗಿದ್ರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಅನುದಾನ ಬಂದಿದ್ದು, ಕ್ರಿಯಾ ಯೋಜನೆ ರೂಪಿಸಿದ ನಂತರ ಟೆಂಡರ್ ಕರೆದು ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.

    | ಶ್ರೀಮಂತ ಹದಗಲ್ಲ, ಎಇಇ, ಪಿಡಬ್ಲೂಡಿ, ಹಾವೇರಿ

    ಗುತ್ತಲ-ಹಾವೇರಿ ಮಾರ್ಗದಲ್ಲಿನ ಸಂಚಾರವೇ ಬೇಡ ಎನ್ನುವಂತಾಗಿದೆ. ನಿತ್ಯ ಜಿಲ್ಲಾ ಕೇಂದ್ರಕ್ಕೆ ತೆರಳುವ ಸಾವಿರಾರು ಜನರಿಗೆ, ವಾಹನಗಳಿಗೆ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಕೂಡಲೆ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

    | ಸಿ.ಬಿ. ಕುರವತ್ತಿಗೌಡರ, ಜಿಪಂ ಮಾಜಿ ಸದಸ್ಯ, ಗುತ್ತಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts