More

    ದುರಾಚಾರ, ದುರ್ನಡತೆಯಿಂದ ವ್ಯಕ್ತಿತ್ವ ನಾಶ

    ಗದಗ: ಮನುಷ್ಯನ ಹುಟ್ಟು-ಸಾವಿನ ನಡುವೆ ಜೀವನ ಪವಿತ್ರವಾಗಿರಬೇಕು. ತಲೆಯಲ್ಲಿ ಸದ್ವಿಚಾರ, ಕೈಯಲ್ಲಿ ಸತ್ಕಾರ, ಬಾಯಲ್ಲಿ ಸವಿಮಾತು, ಎದೆಯಲ್ಲಿ ಸದ್ಭಾವದಿಂದ ಕೂಡಿದ್ದರೆ, ಜೀವನ ಪವಿತ್ರವಾಗುವುದು ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಚನ್ನವೀರಶರಣರ 26ನೇ ಪುಣ್ಯಸ್ಮರಣೋತ್ಸವ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಧರ್ಮಚಿಂತನಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮನುಷ್ಯನ ಜೀವನ ವಯಸ್ಸಾದಂತೆ ಇಂದ್ರಿಯಗಳು ದುರ್ಬಲವಾಗಿ ಆರೋಗ್ಯ, ಆಯುಷ್ಯ ಕ್ಷೀಣಿಸುವುದು ಸಹಜ. ಹಾಗೆಯೇ ದುರ್ಗಣಗಳು, ದುರಾಚಾರ, ದುರ್ನಡತೆಯಿಂದ ನಡೆದಾಗ ಮನುಷ್ಯನ ವ್ಯಕ್ತಿತ್ವವು ನಶಿಸುತ್ತದೆ. ನಮ್ಮ ಸಂಪತ್ತು ನಮ್ಮ ಜೀವಕ್ಕೆ ಆಪತ್ತು ತರುವ ಸಂದರ್ಭ ಹೆಚ್ಚಾಗುತ್ತಿರುವಾಗ ಅದು ಹೇಗೆ ಸಂಪತ್ತಾದೀತು. ಇದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು ಎಂದರು. ಸಮ್ಮುಖ ವಹಿಸಿದ್ದ ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಆಸೆ, ಆಮಿಷ, ಮೋಸ, ವಂಚನೆ, ಕಪಟತನಗಳಿಂದ, ದೂರವಾದಾಗ ಶರಣತ್ವದ ಗುಣಗಳು ಸಹಜವಾಗಿಯೇ ಬರುವವು ಎಂದರು.

    ಇಬ್ರಾಹಿಂಪುರದ ದಯಾನಂದ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಿದೆ. ಶರಣರ ಸ್ಮರಣೆ ಎಂದರೆ ಅವರ ಮಾರ್ಗದಲ್ಲಿ ನಡೆಯುವುದು ಆ ಮೂಲಕ ನಮ್ಮ ಬದುಕಿನ ಸಾರ್ಥಕತೆ ಪಡೆಯುವುದಾಗಿದೆ ಎಂದರು.

    ಶಿವಶಾಂತವೀರ ಶರಣರು ಮಾತನಾಡಿ, ವಿಷಯ ವಸ್ತುಗಳ ಮೇಲಿನ ವ್ಯಾಮೋಹ ಹೆಚ್ಚಾಗಿ ಮನುಷ್ಯ ದುಃಖಿತನಾಗುತ್ತಿದ್ದಾನೆ. ದ್ವೇಷ, ರೋಷಗಳಿಗೆ ಒಳಗಾಗಿ ಬದುಕಿನ ಸಮತೋಲನ, ಕಳೆದುಕೊಳ್ಳುತ್ತಿದ್ದಾನೆ. ಮಾತು, ಕೃತಿ ವ್ಯತ್ಯಾಸವಾದಾಗಲೂ ಅಸಮತೋಲನ ವಾಗುತ್ತದೆ. ಹೃದಯ ವೈಶಾಲ್ಯತೆ ಬೆಳೆಸಿಕೊಂಡು ಸಮನ್ವಯತೆ, ಸಹೋದರತ್ವ, ಸತ್ಸಂಗದ ಸಂಪರ್ಕ ಹೊಂದಿ ಜೀವನ ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಬಿಜಕಲ್ಲನ ಶಿವಲಿಂಗ ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರದ ಅಣದೂರಿನ ಶಿವಯೋಗೀಶ್ವರ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಕ್ಷೇತ್ರ ಗುಡದೂರಿನ ನೀಲಕಂಠ ತಾತನವರು, ವಿಶ್ವರಾಧ್ಯ ದೇವರು ಚಟ್ನಳ್ಳಿ ಸಮ್ಮುಖ ವಹಿಸಿದ್ದರು. ಲೋಕಾಪೂರದ ಮಹಾಂತದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜ್ಜಿಡೋಣಿಯ ಪಂಡಿತ ಕೃಷ್ಣಾನಂದ ಶಾಸ್ತ್ರಿಗಳು ವಿಶೇಷ ಉಪನ್ಯಾಸ ನೀಡಿದರು. ವೆಂಕಟೇಶಕುಮಾರ ಅಲ್ಕೋಡ ಹಾಗೂ ತಂಡದವರಿಂದ ಗಾನಲಹರಿ ಸಂಗೀತ ಸಭೆ ಕಣ್ಮನಗಳಿಗೆ ಮುದನೀಡಿತು. ಜಿಪಂ ಅಧ್ಯಕ್ಷ ಈರಣ್ಣ ನಾಡಗೌಡರ, ಶಿವಕುಮಾರಗೌಡ ಪಾಟೀಲ, ಇತರರು ಉಪಸ್ಥಿತರಿದ್ದರು. ವೆಂಕಟೇಶಕುಮಾರ ಅಲ್ಕೋಡ, ಡೋಣಿಯ ಶಶಿಧರ ಶಾಸ್ತ್ರಿಗಳು ಹಾಗೂ ಬಿ.ವೈ. ಡೊಳ್ಳಿನ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts