More

    ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ ಡಿಸಿಎಂ ಡಿಕೆ ಶಿವಕುಮಾರ್: ಕಾರಣ ಹೀಗಿದೆ!

    ಬೆಂಗಳೂರು: ಮೇಕೆದಾಟು ಯೋಜನೆ ರಾಜ್ಯಕ್ಕೆ ಅತ್ಯಗತ್ಯ. ಈ ಬಗ್ಗೆ ರಾಜ್ಯದ ಎಲ್ಲ ಪಕ್ಷಗಳೂ ಅಚಲ ನಿರ್ಧಾರ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ. ರಾಜ್ಯದ ಎಲ್ಲ ಪಕ್ಷಗಳೂ ಒಟ್ಟಿಗೆ ಹೆಜ್ಜೆಯಿಡಬೇಕು ಎಂದಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅಭಿನಂದನೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯ ಆಸೆ ತೋರಿಸಿ ಯುವತಿಗೆ 2.7 ಕೋಟಿ ರು. ಪಂಗನಾಮ! 

    ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಡಿಸಿಎಂ ಶಿವಕುಮಾರ್ ಅವರು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಾವು ಮಾಡಿದ “ನಮ್ಮ ನೀರು, ನಮ್ಮ ಹಕ್ಕು” ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಧ್ವನಿಗೂಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
    ಈಗ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನಾದರೂ ಮನಗಂಡು ಕೇಂದ್ರ ಸರ್ಕಾರ ಮೇಕೆದಾಟು ಆಣೆಕಟ್ಟು ಯೋಜನೆಗೆ ಅನುಮತಿ ನೀಡುತ್ತದೆ ಎಂಬ ವಿಶ್ವಾಸ ನನ್ನದು ಎಂದು ಬರೆದುಕೊಂಡಿದ್ದಾರೆ.

    ಈ ಎಲ್ಲ ಸಮಸ್ಯೆಗಳನ್ನು ನಿರೀಕ್ಷೆ ಮಾಡಿಯೇ ಕಾಂಗ್ರೆಸ್‌ ಪಕ್ಷವು “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆ ಮಾಡಿತ್ತು. ಆ ಮೂಲಕ ನಮ್ಮ ಹಕ್ಕೊತ್ತಾಯವನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿತ್ತು.

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಬೇಕೆಂಬ ಸಂಕಲ್ಪದಿಂದಲೇ ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮೇಕೆದಾಟು ಯೋಜನೆಗಾಗಿ ಕಾನೂನು ಹೋರಾಟ ಮುಂದುವರೆದಿದೆ. ನಮಗೆ ಗೆಲುವು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ದೇವೇಗೌಡರು ನಮ್ಮ ಹೋರಾಟಕ್ಕೆ ಧ್ವನಿಗೂಡಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡ ಏನು ಹೇಳಿದ್ದರು ?
    ಮೇಕೆದಾಟು ಯೋಜನೆ ರಾಜ್ಯಕ್ಕೆ ಅತ್ಯಗತ್ಯ. ಈ ಬಗ್ಗೆ ರಾಜ್ಯದ ಎಲ್ಲ ಪಕ್ಷಗಳೂ ಅಚಲ ನಿರ್ಧಾರವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಿ. ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲ ಪಕ್ಷಗಳೂ ಈ ವಿಚಾರದಲ್ಲಿ ಒಟ್ಟಿಗೆ ಹೆಜ್ಜೆಯಿಡಬೇಕು ಎಂದು ಸಲಹೆ ನೀಡಿದ್ದರು.

    ಮೇಕೆದಾಟು ಯೋಜನೆ ವಿರೋಧಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನಿಲುವು ಖಂಡನೀಯ. ಈ ಯೋಜನೆ ಅನುಷ್ಠಾನ ಸಂಬಂಧ ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಸೇರಿಸಲಿದೆ. ಕಾಂಗ್ರೆಸ್‌, ಬಿಜೆಪಿ ಕೂಡ ಬದ್ಧತೆ ಪ್ರದರ್ಶಿಸಲಿ. ಪ್ರಧಾನಿಯವರೂ ಮಧ್ಯಸ್ಥಿಕೆ ವಹಿಸಲಿ ಎಂದಿದ್ದರು.

    ತಮಿಳುನಾಡು ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ವಿರುದ್ಧವಾಗಿ ದಾಖಲಿಸಿರುವುದು ಸರಿಯಲ್ಲ. ಇದು ಕುಡಿಯುವ ನೀರಿನ ಯೋಜನೆ. ಇದು ಜಾರಿಯಾಗಲೇಬೇಕಿದೆ. ಯಾವುದೇ ಬೆದರಿಕೆಗಳಿಗೆ ನಾವು ಭಯ ಪಡಬೇಕಿಲ್ಲ. ಮೇಕೆದಾಟು ಆಣೆಕಟ್ಟೆ ಕಟ್ಟಲು ರಾಜ್ಯದ ಮುಖ್ಯಮಂತ್ರಿಗಳು, ಬಿಜೆಪಿಯ ಯಡಿಯೂರಪ್ಪ ಸಹಿತ ಎಲ್ಲರೂ ಹೋರಾಡೋಣ. ಸಮಸ್ತ ಕನ್ನಡಿಗರಿಗೆ ಈ ಭರವಸೆ ನೀಡೋಣ ಎಂದು ಭಾನುವಾರ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.

    ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯ ಆಸೆ ತೋರಿಸಿ ಯುವತಿಗೆ 2.7 ಕೋಟಿ ರು. ಪಂಗನಾಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts