More

    ಕೋವಿಡ್​ನಿಂದ ತಬ್ಬಲಿಗಳಾದವರಿಗೆ ಖಿನ್ನತೆ; ರಾಜ್ಯ ಕೇಂದ್ರ ಸರ್ಕಾರಗಳ ನೆರವಿನ ಹೊರತಾಗಿಯೂ ಭಾವನಾತ್ಮಕ ಸಂಬಂಧಕ್ಕೆ ಹಂಬಲ

    | ಹರೀಶ್ ಬೇಲೂರು ಬೆಂಗಳೂರು

    ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸರ್ಕಾರದ ಆಸರೆ ಸಿಕ್ಕರೂ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕರೊನಾ ಸೋಂಕಿನಿಂದ ದೇಶದಲ್ಲಿ 3,621 ಮಕ್ಕಳು ಅನಾಥರಾದರೆ, 26 ಸಾವಿರ ಮಕ್ಕಳು ಒಬ್ಬ ಪಾಲಕರನ್ನು ಕಳೆದುಕೊಂಡಿವೆ. ರಾಜ್ಯದಲ್ಲಿ 136 ಮಕ್ಕಳು ಅನಾಥರಾಗಿದ್ದು, ಪ್ರತಿ ನಿತ್ಯ ಅಮ್ಮನ ವಾತ್ಸಲ್ಯ, ಅಪ್ಪನ ಅಪು್ಪಗೆಗಾಗಿ ಕನವರಿಸುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು 18 ಮಕ್ಕಳು ಪಾಲಕರನ್ನು ಕಳೆದುಕೊಂಡು ಅನಾಥವಾಗಿವೆ.

    ಜಿಲ್ಲಾವಾರು ಮಾಹಿತಿ: ಬೆಂಗಳೂರು 18, ಚಿಕ್ಕಬಳ್ಳಾಪುರ 12, ಮೈಸೂರು 9, ಕೋಲಾರ ಮತ್ತು ಬೆಳಗಾವಿ ತಲಾ 7, ಬಳ್ಳಾರಿ, ಬೀದರ್, ಯಾದಗಿರಿ ಮತ್ತು ಹಾಸನ ತಲಾ 6, ಚಿಕ್ಕಮಗಳೂರು, ಗದಗ, ಶಿವಮೊಗ್ಗ, ತುಮಕೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ ತಲಾ 5, ಧಾರವಾಡ ಮತ್ತು ರಾಮನಗರ ತಲಾ 4, ಕೊಪ್ಪಳ ಮತ್ತು ಮಂಡ್ಯ ತಲಾ 3, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯಪುರ ತಲಾ 2, ಚಾಮರಾಜನಗರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ತಲಾ 1 ಮಕ್ಕಳು ಅನಾಥರಾಗಿವೆ.

    ವಿವಿಧ ಯೋಜನೆ: ಕರೊನಾದಿಂದ ಪಾಲಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ ಜಾರಿಗೊಳಿಸಿದೆ. ಈ ಯೋಜನೆಯಡಿ ಅನಾಥ ಮಕ್ಕಳಿಗೆ 18 ವರ್ಷ ಪೂರ್ಣಗೊಳ್ಳುವರೆಗೆ ಮಾಸಿಕ 3,500 ರೂ ಹಾಗೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಎಲ್ಲ ಮಕ್ಕಳಿಗೆ ಲ್ಯಾಪ್​ಟಾಪ್ ಮತ್ತು ಟ್ಯಾಬ್ ನೀಡಲಾಗುತ್ತದೆ. ಅಲ್ಲದೆ, ಹೆಣ್ಣು ಮಕ್ಕಳಿಗೆ 21 ವರ್ಷ ತುಂಬಿದ ನಂತರ ವಿವಾಹ, ಉನ್ನತ ಶಿಕ್ಷಣ ಹಾಗೂ ಸ್ವಯಂ ಉದ್ಯೋಗದ ಉದ್ದೇಶಗಳಿಗಾಗಿ ಒಂದು ಲಕ್ಷ ರೂ.ಆರ್ಥಿಕ ಧನ ಸಹಾಯ ಒದಗಿಸಲಾಗಿದೆ. ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಮಾನಸಿಕ ಆಘಾತದಿಂದ ಹೊರತರಲು ‘ಬಾಲ ಹಿತೈಷಿ’ ಯೋಜನೆಯನ್ನು ಸರ್ಕಾರಿ ಜಾರಿಗೆ ತಂದಿದೆ. ಈ ಯೋಜನೆಯಡಿ ಒಬ್ಬ ಮಾರ್ಗದರ್ಶಕರನ್ನು ಒಂದು ಮಗುವಿಗೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಮಾರ್ಗದರ್ಶನ ನೀಡಲು ಕ್ರಮವಹಿಸಲಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒಳಗೊಂಡಂತೆ ಆರೋಗ್ಯ ವಿಮೆ, ಶಿಕ್ಷಣ ಮತ್ತು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಿರ್ವಹಣೆಗೆ ನೆರವು ನೀಡಲಾಗುತ್ತಿದೆ. ಪ್ರಧಾನ ಮಂತ್ರಿಗಳ ಪಿಎಂ ಕೇರ್ರ್ಸ್ ಫಾರ್ ಚಿಲ್ಡ›ನ್’ ಯೋಜನೆಯಡಿ ಪ್ರತಿ ಮಗುವಿಗೆ 23 ವರ್ಷ ತುಂಬಿದ ನಂತರ 10 ಲಕ್ಷ ರೂ. ಸಿಗಲಿದೆ.

    ಬದುಕು ಡೋಲಾಯಮಾನ: ಹೆತ್ತವರನ್ನು ಕಳೆದುಕೊಂಡು ತಬ್ಬಲಿಗಳಾದ ಮಕ್ಕಳ ಬದುಕು ಡೋಲಾಯಮಾನವಾಗಿದೆ. ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಹತ್ತಿರದ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರೂ ಹೆತ್ತವರ ಪ್ರೀತಿಗಾಗಿ ಹಾತೊರೆಯುತ್ತಿವೆ. ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡು ಬದುಕು ಸಾಗಿಸುವುದು ಸುಲಭವಲ್ಲ. ಆದ್ದರಿಂದ, ಇವರ ಬದುಕು ಅನಿಶ್ಚಿತತೆಯಲ್ಲಿ ಮುಳುಗಿದೆ. ಮಕ್ಕಳು ಪಾಲಕರ ಜತೆಗಿನ ಭಾವನಾತ್ಮಕ ಸಂಬಂಧ ಕಳೆದುಕೊಳ್ಳುವ ಜತೆಗೆ ಹಣಕಾಸಿನ ಬೆಂಬಲವೂ ಇಲ್ಲದಂತಾಗಿದೆ. ಸರ್ಕಾರದಿಂದ ನಡೆಸುವ ಆರೈಕೆ ಕೇಂದ್ರಗಳಿಗೆ ಸೇರಿಸಿದರೆ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬ ಭಯ ಆಪ್ತರಿಗೆ ಇದೆ. ಹಾಗಾಗಿ, ಈ ಮಕ್ಕಳಿಗೆ ಬರೀ ಯೋಜನೆಗಳನ್ನು ಘೋಷಿಸಿದ್ದರಷ್ಟೇ ಸಾಲದು. ಉತ್ತಮ ಭವಿಷ್ಯ ರೂಪಿಸಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಜತೆಗೆ ಗುಣಮಟ್ಟ ಆರೈಕೆಯೂ ಸಿಗುವಂತಾಗಲು ಕ್ರಮ ಕೈಗೊಳ್ಳಬೇಕು.

    ತಂದೆ-ತಾಯಿ ತಮ್ಮ ಮಕ್ಕಳಿಗೆ ಕೊಡುವ ಪ್ರೀತಿಯನ್ನು ಬೇರೆ ಯಾರು ಕೊಡುವುದಕ್ಕೆ ಸಾಧ್ಯವಿಲ್ಲ. ಹೆತ್ತವರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಯಂತೂ ಹೇಳತೀರದು. ಚಿಕ್ಕ ವಯಸ್ಸಿನಲ್ಲಿ ಸಿಗಬೇಕಾದ ಪ್ರೀತಿ, ವಾತ್ಸಲ್ಯ ಸಿಗದಿದ್ದರೆ ಖಿನ್ನತೆ, ಅಪೌಷ್ಟಿಕತೆ, ಮಾನಸಿಕ ಯಾತನೆ ಮತ್ತು ದೈಹಿಕ ಬದಲಾವಣೆ ಸೇರಿ ಇನ್ನಿತರ ಸಮಸ್ಯೆ ಗಳಿಂದ ಬಳಲುತ್ತಿರುತ್ತಾರೆ. ಹಾಗಾಗಿ, ಅಂಥ ಮಕ್ಕಳಿಗೆ ವಿಶೇಷ ಆರೈಕೆ ಒದಗಿಸಬೇಕು.

    | ಡಾ.ಎಸ್.ಶ್ರೀನಿವಾಸ್ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ

    ರಾಜ್ಯದ 43 ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್

    ಬೆಂಗಳೂರು: ರಾಜ್ಯದ ಅಂದಾಜು 43 ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಹಾಕಲಾಗುತ್ತದೆ. ಜ.3ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರತೆ ಇದ್ದು, ಅಗತ್ಯದಷ್ಟು ಸಂಗ್ರಹವಿಲ್ಲ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡಲಿದೆ. ಈ ಹಿಂದೆಯೂ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಲಸಿಕೆ ನೀಡಿತ್ತು ಎಂದು ಮಂಗಳವಾರ ತಿಳಿಸಿದರು.

    ಸಾರ್ವಜನಿಕರ ಹಿತದೃಷ್ಟಿಯಿಂದ ಡಿ.28ರ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ರಾಜ್ಯಾದ್ಯಂತ 10 ದಿನಗಳ ಕಾಲ ಜಾರಿಯಾಗಿರುವ ನೈಟ್ ಕರ್ಫ್ಯೂಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ನಾವು ಯಾರೊಬ್ಬರಿಗೂ ತೊಂದರೆ ಕೊಟ್ಟು ನೈಟ್ ಕರ್ಫ್ಯೂ ಜಾರಿ ಮಾಡಿಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ನೀಡಿದ ಶಿಫಾರಸು ಸೇರಿ ಎಲ್ಲ ಸಾಧಕ-ಬಾಧಕಗಳ ಬಗ್ಗೆ ರ್ಚಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಪದೇಪದೆ ಸರ್ಕಾರದ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಲಸಿಕೆಗೆ ಅವಧಿ ನಿಗದಿ

    ಕೋವಿಡ್ ಸುರಕ್ಷತೆಗಾಗಿ ನೀಡುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಸೀಶೆ ಮೇಲೆ ಸೂಚಿಸಿರುವ ಅವಧಿವರೆಗೆ ಮಾತ್ರ ಉಪಯೋಗಿ ಸಬೇಕು ಹಾಗೂ ಲಸಿಕೆಗಳ ಸೀಶೆ ಮೇಲೆ ವಿವಿಎಂ (ಓಪನ್ ವಯಲ್ ಪಾಲಿಸಿ) ಇಲ್ಲದಿರುವ ಕಾರಣ ಲಸಿಕೆಗಳ ಸೀಶೆ ತೆರೆದ ನಂತರ ನಾಲ್ಕು ಗಂಟೆಗಳೊಳಗೆ ಉಪಯೋಗಿಸಬೇಕು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಸುತ್ತೋಲೆ ಹೊರಡಿಸಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯ ಬಳಕೆ ಅವಧಿ ಹಾಗೂ ಸೀಶೆ ತೆರೆದ ಮೇಲೆ 28 ದಿನಗಳವರೆಗೂ ಬಳಸುವ ಕುರಿತು ಕೆಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸ್ಪಷ್ಟನೆ ಕೋರಿದ್ದರು.

    ಮಾರ್ಗಸೂಚಿ ಮತ್ತಷ್ಟು ಕಟ್ಟುನಿಟ್ಟು

    ಕೋವಿಡ್ ಸಂಭಾವ್ಯ 3ನೇ ಅಲೆ ಹಾಗೂ ಓಮಿಕ್ರಾನ್​ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಮತ್ತಷ್ಟು ದಿಟ್ಟ ಹೆಜ್ಜೆ ಇಟ್ಟಿದೆ. ರೆಸ್ಟೋರೆಂಟ್, ಹೋಟೆಲ್, ಪಬ್, ಕ್ಲಬ್​ಗಳಲ್ಲಿ ಶೇ.50 ಆಸನ ಸಾಮರ್ಥ್ಯದಲ್ಲಿ ಮಾತ್ರ ಕಾರ್ಯಾಚರಿಸಲು ತಿಳಿಸಿದೆ. ಈ ಹಿಂದೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಆಸನ ಸಾಮರ್ಥ್ಯ ನಿಗದಿಪಡಿಸಿರಲಿಲ್ಲ. ಈಗ ರೆಸ್ಟೋರೆಂಟ್, ಹೋಟೆಲ್, ಪಬ್, ಕ್ಲಬ್​ಗಳು ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಆಸನ ಸಾಮರ್ಥ್ಯದ ಶೇ.50 ಮಾತ್ರ ಕಾರ್ಯಾಚರಿಸುವಂತೆ ಸ್ಪಷ್ಟಪಡಿಸಲಾಗಿದೆ.

    ಈ ನಿಯಮ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಆಹಾರ ಮತ್ತು ಪಾನೀಯ ಬಡಿಸುವಂತಹ ಸ್ಥಳಗಳಿಗೆ ಮಾತ್ರ ಅನ್ವಯಿಸುತ್ತದೆ. ಹೋಟೆಲ್​ಗಳ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಯಾವುದೇ ನಿರ್ಬಂಧ ಇಲ್ಲ. ಹೋಟೆಲ್​ಗಳು ಅನುಮೋದಿತ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಠಡಿಗಳಲ್ಲಿ ಆತಿಥ್ಯ ಕಲ್ಪಿಸಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ 356 ಮಂದಿಗೆ ಸೋಂಕು

    ರಾಜ್ಯದಲ್ಲಿ ಮಂಗಳವಾರ 356 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಬೆಂಗಳೂರು ನಗರ ಮತ್ತು ಹಾಸನದಲ್ಲಿ ತಲಾ ಒಬ್ಬರಂತೆ ಇಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 38,318ಕ್ಕೆ ಏರಿಕೆಯಾಗಿದ್ದು, ಈವರೆಗೂ 30.05 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 347 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.59 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,456ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ವಿದ್ಯಾರ್ಥಿನಿಗೆ ಒಮಿಕ್ರಾನ್: ಮೈಸೂರು ಜಿಲ್ಲೆಯಲ್ಲಿ ವಾರದ ಅಂತರದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ತಾಂಜೇನಿಯಾ ದೇಶದಿಂದ ಹೈದರಾಬಾದ್ ಮೂಲಕ ಮೈಸೂರಿಗೆ ಡಿ.20ರಂದು ಆಗಮಿಸಿದ್ದ ಮೈಸೂರು ವಿವಿ ವಿದ್ಯಾರ್ಥಿನಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

    ಇಂದಿನಿಂದ ಮನೆ ಮನೆ ಸಮೀಕ್ಷೆ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣ ಸಂಬಂಧ ಡಿ.29 ರಿಂದ ಜ.15ರವರೆಗೆ ಪ್ರತಿ ಜಿಲ್ಲೆಗಳಲ್ಲಿ ತೀವ್ರ ಉಸಿರಾಟದ ತೊಂದರೆ (ಸಾರಿ) ಹಾಗೂ ಶೀತಜ್ವರ (ಐಎಲ್​ಐ) ಪ್ರಕರಣಗಳ ಕುರಿತು ಮನೆ ಮನೆ ಸಮೀಕ್ಷಾ ಕಾರ್ಯ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ಸಮೀಕ್ಷೆ ವರದಿಯನ್ನು ಉಪ ಕೇಂದ್ರಗಳ ಮಟ್ಟದಲ್ಲಿ ಐಎಚ್​ಐಪಿ ತಂತ್ರಾಂಶದ ‘ಎಸ್ ಫಾಮ್ರ್’ ನಮೂನೆಯಲ್ಲಿ ಸಲ್ಲಿಸ ಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts