More

    ಖಿನ್ನತೆ ಕೂಪದಲ್ಲಿ ಮಕ್ಕಳು

    | ಪಂಕಜ ಕೆ.ಎಂ. ಬೆಂಗಳೂರು
    ಖಿನ್ನತೆ ಕೂಪದಲ್ಲಿ ಮಕ್ಕಳುಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಸಿಂಹವನ್ನು ಮೃಗಾಲಯದಲ್ಲಿ ಬಂಧಿಸಿಟ್ಟರೆ ಏನಾಗುತ್ತದೆ? ತನ್ನ ಸಹಜ ಸ್ವಭಾವವನ್ನೇ ಮರೆತು, ಕೊಟ್ಟಿದ್ದನ್ನು ತಿನ್ನುತ್ತ, ಮಲಗುತ್ತ ದಿನದೂಡುತ್ತದೆ. ‘ಮೃಗಾಲಯ ಮಾನಸಿಕತೆ’ ಅಥವಾ ಝುೂ ಫಿನೋಮಿನಾ ಎನ್ನುವ ಈ ಕಾಯಿಲೆ ಈಗ ಕರೊನಾ ಕಾರಣದಿಂದ ಶಾಲೆಯಿಲ್ಲದೆ ಮನೆಯಲ್ಲೇ ಬಂಧಿಯಾಗಿರುವ 14 ವರ್ಷದೊಳಗಿನ ಮಕ್ಕಳಲ್ಲಿ ಕಾಣಲಾರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.

    ಮನೆಯಿಂದ ಹೊರಬರುವುದಕ್ಕೂ ಆಗದ ಪರಿಸ್ಥಿತಿ ಸೃಷ್ಟಿಸಿರುವ ಕರೊನಾದಿಂದಾಗಿ ಮಕ್ಕಳು ಕಳೆದ 8 ತಿಂಗಳಿಂದ ಶಾಲೆಯ ಮುಖವನ್ನೇ ನೋಡಿಲ್ಲ. ದೈಹಿಕ ಕಸರತ್ತು ಮಾಡುವ ಅಥವಾ ಆಟವಾಡುವುದಕ್ಕೂ ಆಗದೆ ಏಕಾಂತದ ವೇದನೆ ಅನುಭವಿಸುತ್ತಿರುವ ಅನೇಕ ಮಕ್ಕಳಲ್ಲಿ ಕ್ರಿಯಾಶೀಲ ಚಟುವಟಿಕೆಗಳೇ ಮಾಯವಾಗುತ್ತಿವೆ. ಮಾನಸಿಕವಾಗಲ್ಲದೆ ದೈಹಿಕವಾಗಿಯೂ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಮಕ್ಕಳು ಮಾನವ ಸಹಜ ಭಾವನೆ ಕಳೆದುಕೊಂಡಲ್ಲಿ ಭವಿಷ್ಯದ ಸ್ಥಿತಿ ಗಂಭೀರವಾಗಲಿದೆ ಎಂಬುದು ಮಕ್ಕಳ ತಜ್ಞರ ಎಚ್ಚರಿಕೆ.

    ಮಕ್ಕಳ ಬೆಳವಣಿಗೆಯಲ್ಲಿ ಶಾಲೆ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ಕಲಿಕೆ ರ್ಯಾಂಕ್ ಪಡೆಯುವುದಕ್ಕಲ್ಲದೆ ಸ್ನೇಹ ಸಂಬಂಧಗಳ ಮೌಲ್ಯ, ಸೋಲು ಗೆಲುವು, ಕೊಡು-ಕೊಳ್ಳುವಿಕೆ, ಶಿಸ್ತು, ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಇಷ್ಟೇ ಅಲ್ಲ. ಆಟ , ಕ್ರಿಯಾತ್ಮಕ ಚಟುವಟಿಕೆಗಳಿಂದ ಮಕ್ಕಳನ್ನು ಅರೋಗ್ಯವಂತರನ್ನಾಗಿ ಮಾಡುವ ಹೊಣೆಗಾರಿಕೆಯೂ ಶಾಲೆಗಳ ಮೇಲಿರುತ್ತದೆ. ಆದರೆ ಲಾಕ್​ಡೌನ್ ಹಾಗೂ ನಂತರದ ದಿನಗಳಲ್ಲಿ ಕರೊನಾ ಭೀತಿಯಿಂದ ಮನೆಯಿಂದ ಹೊರ ಹೋಗಲಾಗದೆ ಹಾಗೂ ಶಾಲೆಗಳು ನಡೆಯದ ಕಾರಣ ಮಕ್ಕಳು ಯಾರೊಂದಿಗೂ ಬೆರೆಯಲು ಅವಕಾಶವಿಲ್ಲದ ಕಾರಣ ಮನೆಯಲ್ಲಿ ಬಂಧಿಗಳಾಗಿದ್ದಾರೆ. ಇದರಿಂದ ಮಕ್ಕಳ ನಿತ್ಯ ಜೀವನ ಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಮೃಗಾಲಯದಲ್ಲಿನ ಪ್ರಾಣಿಗಳಂತೆ ಒಂಟಿತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಹದಿಹರೆಯದ ಮಕ್ಕಳ ಮೇಲಂತೂ ತೀವ್ರ ರೀತಿಯ ಪರಿಣಾಮ ಉಂಟಾಗುತ್ತಿದೆ.

    ಈ ವಯಸ್ಸಿನಲ್ಲಿ ಮಕ್ಕಳ ದೈಹಿಕ ರಚನೆಯಲ್ಲಿ ಬದಲಾವಣೆ ಆಗುವುದರಿಂದ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಅವೆಲ್ಲವನ್ನೂ ಪಾಲಕರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಗೆಳೆಯರಲ್ಲಿ ಹೇಳಿಕೊಳ್ಳಲು ಶಾಲೆ ಹಾಗೂ ಕಾಲೇಜುಗಳು ತೆರೆಯುತ್ತಿಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಬಹುತೇಕ ತಪು್ಪ ಮಾಹಿತಿ ಪಡೆಯುವ ಸಾಧ್ಯತೆಗಳಿರುವುದರಿಂದ ತಪು್ಪ ನಿರ್ಧಾರ ಕೈಗೊಳ್ಳಲು ಮಕ್ಕಳು ಪ್ರೇರೇಪಿತರಾಗುತ್ತಾರೆ. ಇದು ಅವರ ಭವಿಷ್ಯಕ್ಕೆ ಮಾರಕವಾಗಲಿದೆ. ಹೀಗಾಗಿ ಮಕ್ಕಳ ಮನಸ್ಥಿತಿ ಅರಿತು ಅವರ ಸ್ನೇಹಿತರ ಜತೆ ಮಾತನಾಡಲು ಅವಕಾಶ ನೀಡಿ ಎನ್ನುತ್ತಾರೆ ತಜ್ಞರು.

     ಪಾಲಕರ ಹೊಣೆ ಏನು?

    • 3-6 ವರ್ಷ ವಯಸ್ಸಿನ ಮಕ್ಕಳಿಗೆ ಮಿದುಳಿನ ಬೆಳವಣಿಗೆ ಆಗುತ್ತಿರುತ್ತದೆ.ಈ ಸಮಯದಲ್ಲಿ ಅವರು ಏನೆಲ್ಲ ಗ್ರಹಿಸುತ್ತಾರೋ ಅದನ್ನೇ ವಾಸ್ತವ ಎಂದು ತಿಳಿಯುತ್ತಾರೆ. ಇಂತಹ ಕಾಲ್ಪನಿಕ ಜೀವನದಿಂದ ದೂರವಿಡಲು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ
    • ಮನೆಯಲ್ಲಿ ಮಕ್ಕಳನ್ನು ಒಂಟಿಯಾಗಿ ಇರಲು ಬಿಡಬೇಡಿ
    • ಟಿವಿ, ಮೊಬೈಲ್, ಕಂಪ್ಯೂಟರ್ ಗೀಳು ಹತ್ತದಂತೆ ಎಚ್ಚರ ವಹಿಸಿ
    • ಮಕ್ಕಳನ್ನು ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿ
    • ಮನೆಯ ಬಳಿಯೇ ವಾಕಿಂಗ್, ಯೋಗ, ವ್ಯಾಯಾಮ ಮಾಡಿಸಿ
    • ಸಂಬಂಧಿಕರು ಹಾಗೂ ಮಕ್ಕಳ ಸ್ನೇಹಿತರ ಜತೆ ಆಗಾಗ್ಗೆ ಫೋನ್​ನಲ್ಲಿ ಮಾತನಾಡಿಸಿ
    • ದೈಹಿಕ ಚಟುವಟಿಕೆಗೆ ಸೈಕಲ್ ಸವಾರಿ ಹಾಗೂ ಗ್ರಾಮೀಣ ಕ್ರೀಡೆ ಆಡಿಸಿ
    • ತಾರಸಿ ಅಥವಾ ಮನೆ ಬಳಿ ಇರುವ ಜಾಗದಲ್ಲೇ ಗಿಡ ಬೆಳೆಸುವುದನ್ನು ಕಲಿಸಿ
    • ಜಂಕ್ ಫುಡ್​ಗಳಿಂದ ದೂರವಿಟ್ಟು ಪೌಷ್ಠಿಕ, ಆರೋಗ್ಯಕರ ಆಹಾರದ ಅರಿವು ಮೂಡಿಸಿ
    • ಮಕ್ಕಳ ಎದುರು ಜಗಳ ಆಡಬೇಡಿ. ಆರ್ಥಿಕ ಸಮಸ್ಯೆಗಳನ್ನು ಅವರಿಂದ ದೂರವಿಡಿ

      ಏನೇನು ಸಮಸ್ಯೆ?

    • ಊಟ, ನಿದ್ರೆಯಲ್ಲಿ ಬದಲಾವಣೆ ಉಂಟಾಗಿ ಸೋಮಾರಿತನ ಹೆಚ್ಚಳ
    • ಹೆಚ್ಚು ಆಹಾರ ಸೇವಿಸುವುದರಿಂದ ದೈಹಿಕ ಚಟುವಟಿಕೆ ಇಲ್ಲದ್ದರಿಂದ ಬೊಜ್ಜು ಸಮಸ್ಯೆ ಉಲ್ಬಣ
    • ಇದೇ ಸ್ಥಿತಿ ಮುಂದುವರಿದರೆ 4-5 ವರ್ಷಗಳಲ್ಲಿ ಮಧುಮೇಹ, ಸಂಧಿವಾತ, ಹೃದ್ರೋಗ, ಪಾರ್ಶ್ವವಾಯು, ಉಸಿರಾಟದ ತೊಂದರೆ, ಮಾಂಸಖಂಡಗಳ ಗಾತ್ರ ಇಳಿಕೆ ಅಪಾಯ
    • ಬಿಸಿಲಿಗೆ ಮೈ ಒಡ್ಡದಿದ್ದರೆ ವಿಟಮಿನ್ ಡಿ ಹಾಗೂ ಕ್ಯಾಲ್ಶಿಯಂ ಕೊರತೆ ಸಾಧ್ಯತೆ

    ಬದಲಾವಣೆ ನಿಶ್ಚಿತ
    ಮನೆಯಲ್ಲಿ ಬಂಧಿಯಾಗುವ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆಟ, ಗೆಳೆಯರೊಂದಿಗೆ ಒಡನಾಟ ಇಲ್ಲದೆ ಸ್ಪಂದನೆ ಹಾಗೂ ಕೊಡು-ಕೊಳ್ಳುವಿಕೆ ಮನೋಭಾವ ಕಳೆದುಕೊಂಡು ಸ್ವಾರ್ಥಿಗಳಾಗಿ ಬದಲಾಗುತ್ತಾರೆ. ಜಾಗೃತಾವಸ್ಥೆ, ನಿದ್ರಾವಸ್ಥೆಯಲ್ಲಿ ವ್ಯತ್ಯಾಸ ವಾಗುವುದರೊಂದಿಗೆ ವಿನಾಕಾರಣ ಕೋಪಗೊಳ್ಳುವುದು, ಕಿರುಚಾಟ, ಹಠಮಾರಿತನ ಹೆಚ್ಚಾಗುತ್ತದೆ. ಒಬ್ಬರೇ ಮಕ್ಕಳಿದ್ದರೆ ಒಂಟಿತನ ಕಾಡುತ್ತದೆ. ಯಾರ ಒಡನಾಟವೂ ಇಲ್ಲದೆ ಮಾನವ ಸಂಬಂಧಗಳಿಂದ ಹಿಂದೆ ಸರಿಯುತ್ತಾರೆ.

    ಮೊಬೈಲ್ ಗೀಳು ಹೆಚ್ಚಳ
    ಶಾಲೆ ಇಲ್ಲದೆ ಗೆಳೆಯರು, ಕರೊನಾದಿಂದ ಕುಟುಂಬ ಸದಸ್ಯರಿಂದ ದೂರಾಗುತ್ತಿರುವ ಮಕ್ಕಳು ಟಿವಿ, ಕಂಪ್ಯೂಟರ್, ಮೊಬೈಲ್, ವಿಡಿಯೋಗೇಮ್ ಡಿಜಿಟಲ್ ಡಿವೈಸ್ ಗೀಳಿಗೆ ಬಿದ್ದು, ವಾಸ್ತವತೆಯಿಂದ ದೂರಾಗುತ್ತಿದ್ದಾರೆ. ಅನಿಮೇಷನ್ ಸೇರಿದಂತೆ ಟಿವಿಯಲ್ಲಿ ಪ್ರಸಾರವಾಗುವುದನ್ನೇ ಸತ್ಯ ಎಂದುಕೊಳ್ಳುತ್ತಾರೆ. ವಿಡಿಯೋ ಗೇಮನ್ನೆ ಪ್ರಪಂಚ ಎಂದು ತಿಳಿಯುತ್ತ ನೈಜ ಜೀವನ ಒಪ್ಪಿಕೊಳ್ಳಲು ವಿಫಲರಾಗುತ್ತಾರೆ.

    ಶಿಕ್ಷಕರು ಏನು ಮಾಡಬೇಕು?

    • ಆನ್​ಲೈನ್ ತರಗತಿ ಜತೆಗೆ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವಂತಹ ಪ್ರಾಜೆಕ್ಟ್ ವರ್ಕ್ ನೀಡಬೇಕು
    • ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಕಥೆ, ಚಿತ್ರ ಬರೆಯಲು ಸೂಚಿಸಬೇಕು
    • ಗೆಳೆಯರೊಂದಿಗೆ ಆಟ ಆಡಿದ ವಿಡಿಯೋಗಳನ್ನು ಹಂಚಿಕೊಳ್ಳಲು ಹೇಳಬೇಕು

    ಕರೊನಾದಿಂದಾಗಿ ಮಕ್ಕಳು ಶಾಲೆಗೆ ಹಾಗೂ ಮನೆಯಿಂದ ಹೊರ ಹೋಗಲಾಗದೆ ನಾನಾ ಮಾನಸಿಕ, ದೈಹಿಕ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ಪ್ರಮುಖವಾದದ್ದು ಬೊಜ್ಜು. ಇದು ಇನ್ನಿತರ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ 5-10 ವರ್ಷಗಳಲ್ಲಿ ಬೊಜ್ಜು ಸಹ ಸಾಂಕ್ರಾಮಿಕ ರೋಗದ ರೂಪ ಪಡೆಯಲಿದೆ. ಪಾಲಕರು ಎಚ್ಚರ ವಹಿಸಬೇಕು.
    | ಡಾ.ನಿಜಗುಣ ಮಕ್ಕಳ ತಜ್ಞ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts