More

    ಹಕ್ಕುದಾರ ಇಲ್ಲದಿದ್ದರೂ ಸಿಗುತ್ತೆ ಠೇವಣಿ ಹಣ!

    ಸಾಮಾನ್ಯವಾಗಿ ಬ್ಯಾಂಕ್​ಗಳಲ್ಲಿ ತೆರೆದ ಅಕೌಂಟ್ ಮೂಲಕ ವರ್ಷಗಟ್ಟಲೆ ವಹಿವಾಟು ನಡೆಸದಿದ್ದರೆ ಸಹಜವಾಗಿ ನಿಷ್ಕ್ರೀಯ ಖಾತೆ ಎಂದು ಅಕೌಂಟ್ ಬಂದ್ ಮಾಡಲಾಗುತ್ತದೆ. ಅಲ್ಲಿ ಸಣ್ಣ ಮೊತ್ತದ ಹಣ ಉಳಿದಿದ್ದರೆ ಬಹುತೇಕರು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲ ಸಂದರ್ಭಗಳಲ್ಲಿ ಖಾತೆದಾರ ಆಕಸ್ಮಿಕವಾಗಿ ಮರಣಿಸಿದ್ದು, ನಾಮಿನಿ ಮಾಡಿಸಿರುವುದಿಲ್ಲ. ಅಂಥ ಸಂದರ್ಭಗಳಲ್ಲಿ ಬ್ಯಾಂಕ್​ನಲ್ಲಿ ಹಣ ಇದ್ದರೂ ಅದನ್ನು ಪಡೆಯುವ ವಿಧಾನ ತಿಳಿಯದೆ ಕೆಲವರು ಚಡಪಡಿಸುತ್ತಾರೆ. ಆದರೆ ಈಗ ಇಂಥ ಖಾತೆಗಳಿಂದ ಹಣ ಪಡೆಯುವುದು ಸುಲಭವಾಗಿದ್ದು, ಗ್ರಾಹಕರು ಇದರ ಅನುಕೂಲ ಪಡೆಯಬಹುದಾಗಿದೆ.

    ನಾಗೇಶ ಜಿ. ವೈದ್ಯ

    ಸರ್ಕಾರಿ ವಲಯದ ಬ್ಯಾಂಕುಗಳು ಹಕ್ಕುದಾರರಿರದ 35,012 ಕೋಟಿ ರೂ. ಮೊತ್ತದ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ವರ್ಗಾಯಿಸಿವೆ. ಈ ಮೊತ್ತ 10.24 ಕೋಟಿ ಖಾತೆಗಳಿಗೆ ಸೇರಿದೆ. ಇದು ವಿವಿಧ ಕಾರಣಗಳಿಂದಾಗಿ ಬ್ಯಾಂಕ್ ಗ್ರಾಹಕರು, ತಮ್ಮ ನಿಷ್ಕ್ರಿಯಗೊಂಡ ಖಾತೆಯಿಂದ ಹಿಂಪಡೆಯದ ಹಣ.

    ಏನಿದು ಹಕ್ಕುದಾರರಿರದ ಖಾತೆ?: ಯಾವುದೇ ಬ್ಯಾಂಕಿನಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿನ ಕಾಲ ವ್ಯವಹಾರ ನಡೆಯದಿರುವ ಉಳಿತಾಯ ಅಥವಾ ಚಾಲ್ತಿ ಖಾತೆ ಹಾಗೂ ಅವಧಿ ಪೂರ್ಣಗೊಂಡ ನಂತರ ಹತ್ತು ವರ್ಷಗಳಾದರೂ ನಗದು ಮಾಡಿರದ ನಿಷ್ಕ್ರಿಯ ಠೇವಣಿಗಳನ್ನು ಹಕ್ಕುದಾರರಿರದ ಖಾತೆಯೆಂದು ಪರಿಗಣಿಸಲಾಗುತ್ತದೆ.

    ಎಲ್ಲಿ ಹೋಗುತ್ತೆ ಈ ಹಣ?

    ಒಂದು ವರ್ಷ ಯಾವುದೇ ವಹಿವಾಟು ನಡೆಸದೇ ಖಾತೆಗಳು ನಿಷ್ಕ್ರಿಯಗೊಳ್ಳುತ್ತಿದ್ದಂತೆ ಬ್ಯಾಂಕುಗಳು, ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನದಂತೆ ಅಂಥ ಖಾತೆಗಳ ಗ್ರಾಹಕರು ಅಥವಾ ವಾರಸುದಾರರನ್ನು ಪತ್ತೆ ಹಚ್ಚಲು ವಿಶೇಷ ಜಾಗೃತಿ ಅಭಿಯಾನಗಳನ್ನು ಕಾಲ ಕಾಲಕ್ಕೆ ನಡೆಸುತ್ತವೆ. ಅವು ಸಫಲಗೊಳ್ಳದ ಪಕ್ಷದಲ್ಲಿ, ಹತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನಿಷ್ಕ್ರಿಯವಾಗಿರುವ ಖಾತೆಗಳ ವಿವರ ಹಾಗೂ ಮೊತ್ತವನ್ನು ರಿಸರ್ವ್ ಬ್ಯಾಂಕಿಗೆ ವರ್ಗಾಯಿಸುತ್ತವೆ. ಆ ಮೊತ್ತ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿರುವ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಜಮೆಯಾಗುತ್ತದೆ. ದೇಶದ ಗ್ರಾಹಕರ ಸಾಕ್ಷರತೆ ಮತ್ತು ತಿಳಿವಳಿಕೆ ಹೆಚ್ಚಿಸುವಂಥ ಕಾರ್ಯಗಳಿಗಾಗಿ, ಸಂಗ್ರಹವಾದ ಮೊತ್ತವನ್ನು ವಿನಿಯೋಗಿಸುತ್ತದೆ ರಿಸರ್ವ್ ಬ್ಯಾಂಕ್. ಯಾವುದೇ ಗ್ರಾಹಕ ತನ್ನ ಖಾತೆಯ ಹಣ ಹಿಂಪಡೆಯಲು ಬಂದಾಗ, ಬ್ಯಾಂಕುಗಳು ಅದೇ ನಿಧಿಯಿಂದ ಬಡ್ಡಿ ಸಮೇತ ಹಿಂದೆ ಪಡೆದು, ಗ್ರಾಹಕರಿಗೆ ಮರಳಿಸುತ್ತವೆ.

    ಹಿಂಪಡೆಯುವುದು ಹೇಗೆ?

    ಆಯಾ ಬ್ಯಾಂಕುಗಳು ಹಕ್ಕುದಾರರಿರದ ಖಾತೆಗಳ ವಿವರವನ್ನು ಪಡೆಯಲು ಜಾಲತಾಣಗಳಲ್ಲಿ ಕೊಂಡಿಯನ್ನು ನೀಡಿವೆ. ಅಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ, ಆ ಬ್ಯಾಂಕಿನಲ್ಲಿ ಹಕ್ಕುದಾರರಿರದ ಖಾತೆಯ ಪಟ್ಟಿಯಲ್ಲಿನ ನಿಮ್ಮ ಖಾತೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಒಮ್ಮೆ ನಿಮ್ಮ ಅಥವಾ ನಿಮ್ಮವರ ಖಾತೆಗಳು ಇರುವುದು ಖಾತ್ರಿಯಾದಲ್ಲಿ, ಆ ಬ್ಯಾಂಕಿಗೆ ತೆರಳಿ ಅರ್ಜಿ ಹಾಗೂ ಪಾಸ್​ಬುಕ್, ಠೇವಣಿ ರಶೀದಿ, ನಿಮ್ಮ ಕೆವೈಸಿಗೆ ಸಂಬಂಧಿತ ಪುರಾವೆಗಳು ಹಾಗೂ ಖಾತೆದಾರರು ಮರಣಿಸಿದ್ದಲ್ಲಿ, ಅವರ ಮರಣ ದಾಖಲೆ ಪತ್ರವನ್ನು ಸಲ್ಲಿಸಿ, ಆ ಮೊತ್ತವನ್ನು ಬಡ್ಡಿ ಸಮೇತ ಹಿಂಪಡೆಯಬಹುದು. ನಿಮ್ಮದೇ ಖಾತೆಯಾಗಿದ್ದಲ್ಲಿ ಅದನ್ನು ಪುನರುಜ್ಜೀವನಗೊಳಿಸಲು ಕೂಡ ಅವಕಾಶವಿದೆ.

    ಹೇಗೆ ಹುಟ್ಟಿಕೊಳ್ಳುತ್ತವೆ ಇಂಥ ಖಾತೆ?

    • ಠೇವಣಿದಾರರಲ್ಲಿ ಅರಿವಿನ ಕೊರತೆ.
    • ಠೇವಣಿದಾರರ ಸಾವು.
    • ಅನೇಕರು ತಮ್ಮ ಹಣಕಾಸು ವ್ಯವಹಾರಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳದಿರುವುದು ಮತ್ತು ಅಂಥವರ ಅಕಾಲ ಮರಣ.
    • ನಿರ್ದಿಷ್ಟ ಕಾರಣಗಳಿಗಾಗಿ ತೆರೆದ ಖಾತೆ, ಆ ಕೆಲಸ ಮುಗಿದ ನಂತರ ಉಪಯೋಗಿಸುವವರೂ ಕಡಿಮೆಯೇ. ಆಗ ಸ್ವಲ್ಪವೇ ಎನ್ನಿಸುವ ಮೊತ್ತ ಹಾಗೆಯೇ ಉಳಿದುಕೊಳ್ಳುವುದು.
    • ಯಾವುದೋ ಕಾರಣಗಳಿಗಾಗಿ ಮುರಿದುಬೀಳುವ ಪಾಲುದಾರಿಕೆ ವ್ಯವಹಾರಗಳು.
    • ವರ್ಗಾವಣೆಯಾದ ತಕ್ಷಣ, ಬಿಟ್ಟು ಬಂದ ಊರಿನ ಬ್ಯಾಂಕಿನ ಖಾತೆ ಉಪಯೋಗಿಸದಿರುವುದು.
    • ಖಾತೆದಾರನ ಉಯಿಲು ಇಲ್ಲದಿದ್ದರೆ, ವಾರಸುದಾರರಿಗೆ ಆ ಮೊತ್ತವನ್ನು ವಿತರಣೆ ಮಾಡುವಲ್ಲಿ ವಿಳಂಬ.
    • ಉಯಿಲು ಬರೆದಿಟ್ಟಿದ್ದರೂ, ಕೆಲವೊಮ್ಮೆ ವಾರಸುದಾರರಿಗೆ ಅದು ತಿಳಿಯದಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts