More

    ತೆರಿಗೆ ವಂಚಕರಿಗೆ ಬಿಸಿಮುಟ್ಟಿಸಿದ ಸಾರಿಗೆ ಇಲಾಖೆ; ವಂಚನೆ ಪ್ರಕರಣ ಹೆಚ್ಚಳ

    ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ಇಲಾಖೆಗಳಲ್ಲಿ ಮೂರನೇ ಸ್ಥಾನ ಪಡೆದಿರುವ ಸಾರಿಗೆಯಲ್ಲೂ ತೆರಿಗೆ ವಂಚನೆ ಪ್ರಕರಣ ಹೆಚ್ಚುತ್ತಿದೆ. ವಂಚಕರಿಗೆ ಬಿಸಿ ಮುಟ್ಟಿಸಿದ ಇಲಾಖೆಯು 2018-19ನೇ ಸಾಲಿನಲ್ಲಿ ಸೋರಿಕೆಯಾಗುತ್ತಿದ್ದ 281.5 ಕೋಟಿ ರೂ. ತೆರಿಗೆ ಮತ್ತು ದಂಡ ವಸೂಲಿ ಮಾಡಿದೆ.

    ಸಾರಿಗೆ ತೆರಿಗೆ ಸಂಗ್ರಹ ಪ್ರಮಾಣ ಪ್ರತಿವರ್ಷ ಹೆಚ್ಚುತ್ತಿದೆ. ಈ ನಡುವೆ ತೆರಿಗೆ, ರಹದಾರಿ ವಂಚನೆ, ಸಾರಿಗೆ ನಿಯಮಗಳ ಉಲ್ಲಂಘನೆ ಮಾಡುವ ವಾಹನಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.

    26 ಲಕ್ಷ ವಾಹನ ತಪಾಸಣೆ: 2018-19ನೇ ಸಾಲಿನಲ್ಲಿ ಸಾರಿಗೆ ಸಿಬ್ಬಂದಿ ತಪಾಸಣೆ ನಡೆಸಿದ 26,26,685 ವಾಹನ ಪೈಕಿ 3,04,418 ವಾಹನ ನಿಯಮ ಉಲ್ಲಂಘಿಸಿದ್ದವು. ಇವುಗಳ ವಿರುದ್ಧ ತನಿಖೆ ನಡೆಸಿ ದಂಡ ವಿಧಿಸಲಾಗಿದೆ. ಅದರಲ್ಲಿ 13,985 ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹೀಗೆ ತಪಾಸಣೆ ನಡೆಸಿದ ವಾಹನಗಳಿಂದ ತೆರಿಗೆ ರೂಪದಲ್ಲಿ 127.13 ಕೋಟಿ ರೂ. ಆದಾಯಗಳಿಸಿದೆ. ದಂಡದ ರೂಪದಲ್ಲಿ 56.42 ಕೋಟಿ ರೂ. ವಸೂಲಿ ಮಾಡಲಾಗಿದೆ.

    ತನಿಖಾ ಠಾಣೆಗಳಿಂದ ಸಂಗ್ರಹ: ತೆರಿಗೆ ಆದಾಯ ಸೋರಿಕೆ ತಡೆಗಟ್ಟಲು ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಸಾರಿಗೆ ಇಲಾಖೆ 15 ತನಿಖಾ ಠಾಣೆಗಳನ್ನು ತೆರೆದಿದೆ. ಆ ಠಾಣೆಗಳಿಂದ 96.76 ಕೋಟಿ ರೂ. ತೆರಿಗೆ ಸೋರಿಕೆ ಪತ್ತೆ ಹಚ್ಚಿ ವಾಹನಗಳಿಂದ ಅಷ್ಟು ಮೊತ್ತವನ್ನು ವಸೂಲಿ ಮಾಡಲಾಗಿದೆ. ಅದರಲ್ಲಿ ನಿಪ್ಪಾಣಿಯ ಕಾಗ್ನೊಳ್ಳಿ ತನಿಖಾ ಠಾಣೆ ಅತಿಹೆಚ್ಚು 14.96 ಕೋಟಿ ರೂ. ತೆರಿಗೆ ವಸೂಲಿ ಮಾಡಿದೆ.

    ರಾಜಿಯೊಂದಿಗೆ ವಿಲೇವಾರಿ

    2018ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ರಾಜ್ಯದಲ್ಲಿ 774 ರಹದಾರಿ ಉಲ್ಲಂಘನೆ ಪ್ರಕರಣ ಸೇರಿ ಡಿಪಾರ್ಟ್​ವೆುಂಟ್ ಸ್ಟೇಷನರಿ ಆಕ್ಷನ್ (ಡಿಎಸ್​ಎ) ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅದರಲ್ಲಿ ಒಪ್ಪಂದದ ಮೇಲೆ ಸಂಚರಿಸುವ ವಾಹನಗಳ 601 ಪ್ರಕರಣಗಳಿದ್ದವು. ಆ ಎಲ್ಲ ಪ್ರಕರಣಗಳಲ್ಲೂ ವಾಹನ ಮಾಲೀಕರು ಸಾರಿಗೆ ಇಲಾಖೆಯೊಂದಿಗೆ ರಾಜಿ ಮಾಡಿಕೊಂಡಿದ್ದು, 49.59 ಲಕ್ಷ ರೂ. ದಂಡ ಪಾವತಿಸಿದ್ದಾರೆ.

    ಕೋರ್ಟ್ ಮೂಲಕ ವಸೂಲಿ

    ಸಾರಿಗೆ ಇಲಾಖೆ ಪ್ರಕರಣ ಒಪ್ಪದೆ ನ್ಯಾಯಾಲಯದಲ್ಲಿ ಕೆಲ ವಾಹನ ಮಾಲೀಕರಿಂದ 12,308 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 2018-19ರ ಸಾಲಿನಲ್ಲಿ 5,505 ಪ್ರಕರಣ ವಿಲೇವಾರಿಯಾಗಿದ್ದು, ಅವುಗಳಿಂದ ನ್ಯಾಯಾಲಯದ ಸೂಚನೆಯಂತೆ 40.95 ಲಕ್ಷ ರೂ. ವಸೂಲಿ ಮಾಡಲಾಗಿದೆ.

    6 ಸಾವಿರ ಕೋಟಿ ರೂ. ರಾಜಸ್ವ

    ಸಾರಿಗೆ ಇಲಾಖೆಯ ವಿವಿಧ ಮೂಲಗಳಿಂದ ರಾಜಸ್ವ ಸಂಗ್ರಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2017-18ರಲ್ಲಿ 5,954 ಕೋಟಿ ರೂ. ಸಂಗ್ರಹವಾಗಿತ್ತು. 2018-19ರಲ್ಲಿ 6,167.61 ಕೋಟಿ ರೂ. ಗುರಿಗೆ ಬದಲಾಗಿ 6,205.93 ಕೋಟಿ ರೂ. ಸಂಗ್ರಹಿಸಲಾಗಿದೆ. ಶೇ.2.35 ಹೆಚ್ಚುವರಿ ರಾಜಸ್ವ ಸಂಗ್ರಹಿಸಿದಂತಾಗಿದೆ

    1.18 ಲಕ್ಷ ಡಿಎಸ್​ಎ ಪ್ರಕರಣ ಬಾಕಿ

    ಸಾರಿಗೆ ಇಲಾಖೆಯಲ್ಲಿ 2018-19ಕ್ಕೂ ಮುನ್ನ 1.06 ಲಕ್ಷ ಡಿಎಸ್​ಎ ಪ್ರಕರಣಗಳಿದ್ದವು. 2018-19ನೇ ಸಾಲಿನಲ್ಲಿ 68,516 ಪ್ರಕರಣ ದಾಖಲಾಗಿವೆ. ಇವುಗಳ ಪೈಕಿ 55,526 ಕೇಸ್ ವಿಲೇವಾರಿಯಾಗಿದ್ದು, 1,18,990 ಪ್ರಕರಣಗಳು ಬಾಕಿ ಇವೆ.

    | ಗಿರೀಶ್ ಗರಗ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts