More

    ಜೇನು ಕೃಷಿ ಅಭಿವೃದ್ಧಿಗೆ ಪೆರ್ಡೂರಿನಲ್ಲಿ ಮಧುವನ

    ಕೃಷಿ ಮತ್ತು ತೋಟಗಾರಿಕಾ ಇಲಾಖೆ ಕಾರ್ಯಕ್ರಮ ಅನುಷ್ಠಾನ ಬಗ್ಗೆ ಕೃಷಿಕರಲ್ಲಿರುವ ಸಂದೇಹಗಳನ್ನು ಅಧಿಕಾರಿಗಳೊಂದಿಗೆ ನೇರವಾಗಿ ಸಮಾಲೋಚಿಸಲು ‘ವಿಜಯವಾಣಿ’ ಮಂಗಳೂರು ಬ್ಯೂರೋ ಆಯೋಜಿಸಿದ ಫೋನ್‌ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ರೈತರು ಕೃಷಿಯಲ್ಲಿ ಎದುರಿಸುವ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಸಲಹೆಗಳನ್ನು ಪಡೆದರು.

    *ಮಂಗಳೂರು ನಗರದ ಕದ್ರಿ ಪಾರ್ಕ್‌ನಲ್ಲಿ ಸ್ಯಾನಿಟೈಸರ್, ಮಾಸ್ಕ್ ಇಲ್ಲದೆ ಪ್ರವೇಶ ನೀಡಬಾರದು. ವರ್ಷದಲ್ಲಿ ಮೂರು ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸಬೇಕು, ಕೊಟ್ಟಾರ ಚೌಕಿಯಲ್ಲಿ ಬೀದಿ ನಾಯಿಗಳಿಂದ ಸಮಸ್ಯೆಯಾಗುತ್ತಿದೆ. ಶಾಲೆಗಳಲ್ಲಿ ತಾರಸಿ ತೋಟ, ಕೈತೋಟಗಳ ಕುರಿತು ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಬೇಕು.
    – ಯು.ರಾಮರಾವ್, ಕೊಟ್ಟಾರ ಚೌಕಿ ಮಂಗಳೂರು
    ಕದ್ರಿ ಪಾರ್ಕ್ ಪ್ರವೇಶಿಸುವವರು ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸುವುದು ಕಡ್ಡಾಯ. ಮಾಸ್ಕ್ ಇಲ್ಲದೆ ಪ್ರವೇಶವಿಲ್ಲ. ಫಲಪುಷ್ಪ ಪ್ರದರ್ಶನ ಮೂರು ಬಾರಿ ಆಯೋಜನೆ ಕಷ್ಟ. ಪಾರ್ಕ್‌ನಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಈ ಬಾರಿ ಜನವರಿಯಲ್ಲಿ ನಡೆಯುವ ವಾರ್ಷಿಕ ಫಲಪುಷ್ಪ ಪ್ರದರ್ಶನವೂ ಅನಿಶ್ಚಿತತೆಯಲ್ಲಿದೆ. ಶಾಲೆಗಳಲ್ಲಿ ತಾರಸಿ ತೋಟ, ಕೈತೋಟಗಳನ್ನು ಮಾಡುವ ಯೋಜನೆ ಜಾರಿಯಲ್ಲಿದೆ. ದ.ಕ ಜಿಲ್ಲೆಯ 139 ಶಾಲೆಗಳಲ್ಲಿ ಯೋಜನೆ ಜಾರಿಗೆ ಅಂದಾಜುಪಟ್ಟಿ ಸಿದ್ಧಗೊಳಿಸಲಾಗಿದೆ. ನರೇಗಾ ಯೋಜನೆಯಡಿಯೂ ಅವಕಾಶವಿದೆ. ಜಿಪಂ ಸಿಇಒ ಮತ್ತು ಡಿಡಿಪಿಐ ಜತೆ ಸಮಾಲೋಚನೆ ಮಾಡಲಾಗುವುದು.

    *ಅಡಕೆ ಗಿಡ ನಾಟಿ ಮಾಡಿ ನಾಲ್ಕು ವರ್ಷಗಳಾಗಿವೆ. ಏಪ್ರಿಲ್-ಮೇ ತಿಂಗಳಲ್ಲಿ ಸಣ್ಣ ಅಡಕೆ ಉದುರುತ್ತಿದ್ದು, ಈ ವರ್ಷ ಸಾಕಷ್ಟು ನಷ್ಟವಾಗಿದೆ.
    – ಎಂ.ವೀರಪ್ಪ ಕೊಲ, ಬಂಟ್ವಾಳ
    ನಾಲ್ಕು ವರ್ಷದ ಗಿಡಗಳು ಹೆಚ್ಚು ಫಸಲು ನೀಡಬೇಕು ಎಂದು ನಿರೀಕ್ಷಿಸುವಂತಿಲ್ಲ. ಸಣ್ಣ ಗಿಡಗಳಲ್ಲಿ ಅಡಕೆ ಉದುರುತ್ತವೆ. ಮುಂದಿನ ವರ್ಷಗಳಲ್ಲಿ ಈ ಸಮಸ್ಯೆ ಸರಿ ಹೋಗಬಹುದು. ಮುಂಗಾರಿಗೆ ಮೊದಲು ಮತ್ತು ಆರಂಭದ ಮಳೆಯ ಬಳಿಕ ಗಿಡಗಳಿಗೆ ಕಾಪರ್‌ಸಲ್ಫೇಟ್ ದ್ರಾವಣ ಸಿಂಪಡಿಸಬೇಕು. ಇದರಿಂದ ಕೊಳೆ ರೋಗ ಕಡಿಮೆಯಾಗುತ್ತದೆ. ಮಣ್ಣಿಗೆ ಪೊಟ್ಯಾಶ್ ಹಾಕಬೇಕು. ಹೆಚ್ಚಿನ ಮಾಹಿತಿಗೆ ಬಂಟ್ವಾಳ ತಾಲೂಕು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿರಿ. ಕೃಷಿ ಇಲಾಖೆಯಿಂದ ತಮ್ಮ ತೋಟದ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿರಿ.

    ಬೀಡಾಡಿ ದನಗಳ ಹಾವಳಿಯಿಂದ ಕೃಷಿ ರಕ್ಷಣೆ ಸಮಸ್ಯೆಯಾಗಿದೆ. ರಾತ್ರಿ ವೇಳೆ 30ರಷ್ಟು ದನಗಳು ಗದ್ದೆ, ತೋಟಗಳಿಗೆ ದಾಳಿ ಮಾಡಿ ಬೆಳೆಗಳನ್ನು ನಾಶಪಡಿಸುತ್ತವೆ. ಶಾಸಕರು, ಜಿಲ್ಲಾಧಿಕಾರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.
    -ವಾಸುದೇವ ಕುಳಾಯಿ, ಸುರತ್ಕಲ್
    ಈ ಕುರಿತು ಇಲಾಖೆಗೆ ಮಾಹಿತಿ ಬಂದಿಲ್ಲ. ಇನ್ನೊಮ್ಮೆ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ವಿವರವಾಗಿ ಮನವಿ ಸಲ್ಲಿಸಿ. ಸ್ಥಳೀಯಾಡಳಿತ, ಮಹಾನಗರ ಪಾಲಿಕೆಗೂ ಮನವಿ ನೀಡಿ. ಏನು ಮಾಡಬಹುದು ಎಂದು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುತ್ತೇವೆ. ದನಗಳನ್ನು ಓಡಿಸಲು ಆಧುನಿಕ ವಿಧಾನಗಳಿದ್ದರೆ ಅನುಸರಿಸಬಹುದು.

    ನನ್ನ ತೋಟದಲ್ಲಿ 150 ಅಗಕೆ ಗಿಡಗಳಿವೆ. ಬಸವನಹುಳು ಬಾಧೆ ವಿಪರೀತವಾಗಿದೆ. ಪರಿಹಾರೋಪಾಯಗಳೇನು?
    – ನಾರಾಯಣ್, ಆತ್ರಾಡಿ
    ತೇವಾಂಶ ಜಾಸ್ತಿ ಇರುವ ಕಡೆ ಬಸವನಹುಳು ಬಾಧೆ ಸಾಮಾನ್ಯ. ತೋಟವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸಣ್ಣ ಸಣ್ಣ ಗುಂಡಿಗಳನ್ನು ಮಾಡಿ ಸುಣ್ಣ ಸಿಂಪಡಣೆ ಮಾಡಬಹುದು. ಒದ್ದೆ ಗೋಣಿಚೀಲಗಳನ್ನು ಅಲ್ಲಲ್ಲಿ ಹಾಕಿದಾಗ ಹುಳಗಳು ಸೇರುತ್ತವೆ. ಇದನ್ನು ನಂತರ ನಾಶಮಾಡಬೇಕು. ಮೆಟಾಲ್ಡಿಹೈಡ್ ರಾಸಾಯನಿಕವನ್ನೂ ಮಿತಿವಾಗಿ ಉಪಯೋಗಿಸಬಹುದು.

    ಇನ್ನಾ-ಮುಂಡ್ಕೂರು ಗ್ರಾಮವನ್ನು ಸಮಗ್ರ ತೋಟಗಾರಿಕಾ ಯೋಜನೆಗೆ ಪೇರಳೆ ಬೆಳೆಗೆ ಪೈಲಟ್ ಗ್ರಾಮವಾಗಿ ಆಯ್ಕೆ ಮಾಡಲಾಗಿದೆ. ಈ ವರ್ಷವೂ ಅನೇಕ ರೈತರು ಆಸಕ್ತಿ ಹೊಂದಿದ್ದಾರೆ.
    – ದೀಪಕ್ ಕಾಮತ್ ಇನ್ನ
    ಸಮಗ್ರ ತೋಟಗಾರಿಕಾ ಯೋಜನೆಯಡಿ 13-14 ರೈತರನ್ನು ಜತೆಗೂಡಿಸಿ 15 ಎಕರೆ ಜಾಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ ಸಾಂದ್ರ ಬೇಸಾಯ ಪದ್ಧತಿಯಲ್ಲಿ ಪೇರಳೆ ಗಿಡ ನೆಡಲಾಗಿದೆ. ಈ ವರ್ಷ ಯೋಜನೆ ಜಾರಿಗೆ ಅನುದಾನ ಲಭಿಸಿಲ್ಲ.

    ಒಂದು ಎಕರೆ ಗದ್ದೆಗೆ ಮಣ್ಣಹಾಕಿ ತೋಟ ಮಾಡಲು ಯೋಚಿಸಿದ್ದೇನೆ. ಆದರೆ ನೀರು ನಿಲ್ಲುತ್ತದೆ. ಜತೆಗೆ ನವಿಲು, ಮಂಗಗಳ ಹಾವಳಿ ಹೆಚ್ಚಾಗಿದೆ. ಇದಕ್ಕೇನು ಉಪಾಯ?
    – ರವಿಶಂಕರ್ ಕಳತ್ತೂರು
    ಗದ್ದೆಯಲ್ಲಿ ಅಡಕೆ ಸಸಿ ನೆಡಬೇಕಾದರೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು. ಇಲ್ಲದಿದ್ದರೆ ಬಾಳೆ ಅಥವಾ ಮಿಶ್ರ ಬೆಳೆ ಬೆಳೆಯಬಹುದು. ನವಿಲು ಕಾಟ ತಡೆಯಲು ಗ್ರೀನ್ ನೆಟ್ ಬಳಸಿ.

    ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ 716 ಮಲ್ಲಿಗೆ ಬೆಳೆಗಾರರಿಗೆ ಒಟ್ಟು 7.99 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 4333 ಮಲ್ಲಿಗೆ ಕೃಷಿಕರಿದ್ದು, ಬೆಳೆ ಸಮೀಕ್ಷೆಯಲ್ಲಿ 1319 ಮಂದಿಯಷ್ಟೇ ಮಲ್ಲಿಗೆ ಕೃಷಿ ಮಾಹಿತಿ ದಾಖಲಿಸಿದ್ದಾರೆ. ಹೆಚ್ಚಿನ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿದ್ದು, ಸೆಂಟ್ಸ್‌ಗೆ 100 ರೂ.ಲಭಿಸುವುದರಿಂದ ಹೆಚ್ಚಿನ ಆಸಕ್ತಿ ಹೊಂದಿಲ್ಲ.
    – ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕಾ ಇಲಾಖೆ

    ಪೆರ್ಡೂರಿನಲ್ಲಿ 4 ಎಕರೆ ಜಾಗದಲ್ಲಿ ಜೇನು ಕೃಷಿ
    ಪೆರ್ಡೂರಿನಲ್ಲಿ 4 ಎಕರೆ ಜಾಗದಲ್ಲಿ ಜೇನು ಕೃಷಿ ಅಭಿವೃದ್ಧಿಗೆ ಮಧುವನ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ತಿಳಿಸಿದರು. ಜಾಗ ಗುರುತು ಮಾಡಿ ಗಡಿ ಬೇಲಿ ನಿರ್ಮಾಣ ನಡೆಯುತ್ತಿದೆ. ಕಾರ್ಕಳ ಕುಕ್ಕುಂದೂರಿನಲ್ಲಿ ಇದೇ ರೀತಿಯ ಮಧುವನವಿದೆ. ಕಾರ್ಕಳ, ಹೆಬ್ರಿ ಮೊದಲಾದ ಪ್ರದೇಶಗಳು ಮಲೆನಾಡಿಗೆ ಹತ್ತಿರವಿರುವುದರಿಂದ ಜೇನುಕೃಷಿಗೆ ಪ್ರಶಸ್ತ. ಜೇನು ಕೃಷಿ ಪ್ರೋತ್ಸಾಹ ಯೋಜನೆಯಡಿ 250 ರೈತರು ಸಹಾಯಧನ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಒಗ್ಗೂಡಿಸಿ ಜೇನು ಕೃಷಿಕರ ಸಂಘ ಹಾಗೂ ಮಲ್ಲಿಗೆ ಬೆಳೆಗಾರರ ಸಹಕಾರ ಸಂಘ(ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಶನ್) ರಚಿಸಲು ತೀರ್ಮಾನಿಸಲಾಗಿದೆ.

    ಉಡುಪಿ ಜಿಲ್ಲೆಯಲ್ಲಿ ಈ ಬಾರಿ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಹೆಚ್ಚಾಗಿದೆ. 36 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದ್ದರೂ 34 ಸಾವಿರ ಹೆಕ್ಟೇರ್ ಮಾತ್ರ ಉಪಯೋಗವಾಗುತ್ತಿತ್ತು. ಈ ಬಾರಿ 35,990 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಗ್ರಾಮ ಮಟ್ಟದಲ್ಲಿ ಬಾಡಿಗೆ ಯಂತ್ರ ಕೇಂದ್ರ ಸ್ಥಾಪನೆಗೆ ಬೇಡಿಕೆ ಬರುತ್ತಿದೆ.
    ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

    ಆತ್ಮನಿರ್ಭರದಲ್ಲಿ ಮೀನು ಕೃಷಿ ಉತ್ತೇಜನ
    ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಮೀನುಕೃಷಿ ಹಾಗೂ ದ.ಕ. ಜಿಲ್ಲೆಯಲ್ಲಿ ಮೀನು, ಜೇನು ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಆಹಾರ ಉತ್ಪನ್ನ ತಯಾರಿಸುವ ಸ್ವಸಹಾಯ ಗುಂಪುಗಳಿಗೆ 40 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತಿದೆ. ಇದರಲ್ಲಿ ಶೇ. 35ರಷ್ಟು ಸಹಾಯಧನ ಲಭಿಸಲಿದೆ. ಸಣ್ಣ ಉದ್ಯಮಗಳನ್ನು ಬ್ರಾಂಡಿಂಗ್ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಬಿಳಿ ಕೀಟ ಬಾಧೆ ನಿಯಂತ್ರಣ
    ತೆಂಗು ಬೆಳೆಯಲ್ಲಿ ಕಂಡು ಬಂದಿದ್ದ ಆಕ್ರಮಣಕಾರಿ ರುಗೋಸ್ ಸುರುಳಿಯಾಕಾರದ ಬಿಳಿಕೀಟ (ನೊಣ) ಬಾಧೆ ಪ್ರಸ್ತುತ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದರು. ಈ ಕೀಟಗಳನ್ನು ತಿನ್ನುವ ಪರಾವಲಂಬಿ ಜೀವಿಗಳ ಸಂತತಿ ಹೆಚ್ಚಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ಎನ್‌ಬಿಎಐಆರ್) ಮತ್ತು ಮಂಗಳೂರಿನ ಕೆವಿಕೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದೆ. ‘ಎನ್ಕಾರ್ಸಿಯಾ ಗ್ವಾಡೆಲೊಪೆ’ ಹಾಗೂ ‘ಎನ್ಕಾರ್ಸಿಯಾ ಡಿಸ್ಪರ್ಸಾ’ ಎಂಬ ಎರಡು ಪರಾವಲಂಬಿ ಕೀಟಗಳು ಬಿಳಿಕೀಟದ ಮೊಟ್ಟೆಗಳನ್ನು ತಿಂದು ಬದುಕುತ್ತಿದ್ದು, ಇವುಗಳ ಸಂತತಿ ಹೆಚ್ಚಾಗಿದೆ. ಆದರೆ ಇವುಗಳು ಮತ್ತೆ ತೆಂಗಿನ ಗರಿಗಳಿಗೆ ಸಮಸ್ಯೆಯಾಗದಂತೆ ತಡೆಯಬೇಕು. ಮಳೆಗಾಲದಲ್ಲಿ ಕಡಿಮೆಯಾದರೂ, ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚಾಗುತ್ತದೆ. ಇವುಗಳಿಗೆ ಔಷಧ ಸಿಂಪಡಣೆ ಸಾಧ್ಯವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts