More

    ಅಗಸನಹಳ್ಳಿ ಬಡಾವಣೆಯ ಜನತೆಗೆ ಡೆಂಘೆ ಭೀತಿ

    ಬ್ಯಾಡಗಿ: ಪಟ್ಟಣದ ಅಗಸನಹಳ್ಳಿ ಬಡಾವಣೆಯಲ್ಲಿ ಸಮರ್ಪಕ ಚರಂಡಿ ಇಲ್ಲದೆ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು, ಸ್ಥಳೀಯರು ರೋಗಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ರಸ್ತೆ ಬದಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಚರಂಡಿ ನಿರ್ವಿುಸಬೇಕು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಅಡ್ಡ ಚರಂಡಿ ಹಾಗೂ ರಸ್ತೆ ನಿರ್ವಿುಸಬೇಕು ಎಂದು ಆಗ್ರಹಿಸಿ ಆರೇಳು ವರ್ಷಗಳಿಂದ ಸ್ಥಳೀಯರು ಪುರಸಭೆಗೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಯಾರೊಬ್ಬರೂ ಸ್ಪಂದಿಸಿಲ್ಲ ಎನ್ನುತ್ತಾರೆ ಸ್ಥಳೀಯರಾದ ನಾಗರಾಜ ಗಾಜೇರ, ಕರಿಯಪ್ಪ ಗಾಜೇರ, ಸಂತೋಷ ಬಣಕಾರ, ಪುಟ್ಟಪ್ಪ ಕನವಳ್ಳಿ, ಹನುಮಂತಪ್ಪ ಗಾಜೇರ, ಲಿಂಗರಾಜ ಗೌಡ್ರ, ಮೈಲಾರಪ್ಪ ಗಾಜೇರ ಇತರರು.

    ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಅಲ್ಲದೆ, ದುರ್ನಾತಮಯವಾದ ನೀರು ದಾಟಲು ಅಡ್ಡ ಚರಂಡಿಯೂ ಇಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು, ವೃದ್ಧರು ಕೊಳಚೆ ನೀರಲ್ಲೇ ಕಾಲಿಟ್ಟು ಮುಂದೆ ಸಾಗುವಂತಹ ಪರಿಸ್ಥಿತಿ ಇದೆ.

    ಪುರಸಭೆಯವರು ಇಲ್ಲಿನ ಚರಂಡಿ ಸ್ವಚ್ಛಗೊಳಿಸಿ ಅದೆಷ್ಟೋ ದಿನಗಳಾಗಿವೆ. ಬಡಾವಣೆಯಲ್ಲಿ ಮಲಿನ ನೀರು ಮುಂದೆ ಹೋಗದೆ ಅಲ್ಲಿಯೇ ನಿಲ್ಲುವುದರಿಂದ ಇಡೀ ಪ್ರದೇಶ ದುರ್ನಾತಮಯವಾಗಿದೆ. ಸೊಳ್ಳೆಗಳ ಕಾಟವಂತೂ ವಿಪರೀತವಾಗಿದೆ. ಮೊದಲೇ ಎಲ್ಲೆಡೆ ಡೆಂಘೆ ಸೇರಿದಂತೆ ಇತರೆ ಕಾಯಿಲೆಗಳು ಹೆಚ್ಚಾಗಿ ಹರಡುತ್ತಿದ್ದು ಸ್ಥಳೀಯರಲ್ಲಿ ರೋಗಭೀತಿ ಆವರಿಸಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆಮನೆ ಭೇಟಿ ನೀಡಿದಾಗ ಸ್ಥಳೀಯರು ನರಕದ ಸ್ಥಿತಿಯ ದರ್ಶನ ಮಾಡಿಸಿದ್ದಾರೆ. ಆದರೆ, ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಪುರಸಭೆಯವರಂತೂ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಳ್ಳದೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

    ಚರಂಡಿ ಸಮಸ್ಯೆ ಬಗೆಹರಿಸುವಂತೆ ಅಗಸನಹಳ್ಳಿ ಬಡಾವಣೆಯ ನಿವಾಸಿಗಳು ಮೌಖಿಕವಾಗಿ ಮನವಿ ಮಾಡಿದ್ದಾರೆ. ಎಸ್​ಎಫ್​ಸಿ ಅನುದಾನದಲ್ಲಿ ಅಡ್ಡ ಚರಂಡಿ, ಚರಂಡಿ ಹಾಗೂ ರಸ್ತೆ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು, ಗುತ್ತಿಗೆದಾರರನ್ನು ಗುರುತಿಸಿದ ಬಳಿಕ ಶೀಘ್ರವೇ ಕಾಮಗಾರಿಗೆ ಚಾಲನೆ ಸಿಗಲಿದೆ. ಸ್ಥಳೀಯರು ಸಹಕಾರ ನೀಡಬೇಕು.

    | ವಿನಯಕುಮಾರ ಹೊಳೆಯಪ್ಪಗೋಳ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts